ಬ್ರಹ್ಮಾವರ : ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಬೈಕಾಡಿ, ಬ್ರಹ್ಮಾವರ ಉಡುಪಿ ಇದರ ವತಿಯಿಂದ ‘ಮಂದಾರ ರಂಗೋತ್ಸವ 5’ ಸಮಾರಂಭವನ್ನು ದಿನಾಂಕ 10ರಿಂದ 12 ಏಪ್ರಿಲ್ 2026ರವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಬ್ರಹ್ಮಾವರದ ಹೋಲಿ ಫ್ಯಾಮಿಲಿ ಚರ್ಚ್ ಆವರಣದಲ್ಲಿರುವ ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ‘ರಂಗೋತ್ಸವ’ದಲ್ಲಿ ವಿವಿಧ ನಾಟಕಗಳ ಪ್ರದರ್ಶನಗೊಳ್ಳಲಿದೆ.
ದಿನಾಂಕ 10 ಏಪ್ರಿಲ್ 2026ರಂದು ರಂಗೋತ್ಸವ ಸಮಾರಂಭ ಉದ್ಘಾಟನೆಗೊಳ್ಳಲಿದ್ದು, ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಚಿಂತಕರು, ಸಾಮಾಜಿಕ ಹೋರಾಟಗಾರರಾದ ಪ್ರೊ. ಫಣಿರಾಜ್ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಜೊತೆಗೆ ಹೋಲಿ ಫ್ಯಾಮಿಲಿ ಚರ್ಚ್ ಧರ್ಮಗುರುಗಳಾದ ಫಾದರ್ ಜಾರ್ಜ್ ಫೆರ್ನಾಂಡೀಸ್ ಭಾಗಿಯಾಗಲಿದ್ದಾರೆ. ನಂತರ ರೋಹಿತ್ ಬೈಕಾಡಿ ಇವರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ತಂಡದವರಿಂದ ‘ಸೈರನ್’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 11 ಏಪ್ರಿಲ್ 2026ರಂದು ಹಿರಿಯ ರಂಗಕರ್ಮಿ ಸತ್ಯನಾ ಕೊಡೇರಿ ದಿನದ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಕ್ಕಳ ರಂಗಭೂಮಿಗಾಗಿ ಮೀಸಲಿಟ್ಟ ಈ ದಿನ ಡಾ. ಶ್ರೀಪಾದ್ ಭಟ್ ಇವರ ನಿರ್ದೇಶನದಲ್ಲಿ ಬ್ರಹ್ಮಾವರ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ತಂಡದವರಿಂದ ‘ಕಿಟಕಿ ಪಕ್ಕ ನಿಂತ ಹುಡುಗಿ’ ನಾಟಕ ಪ್ರದರ್ಶನಗೊಳ್ಳಲಿದೆ. ಜೊತೆಗೆ ಧಮನಿ ಟ್ರಸ್ಟ್ ಇದರ ಮಕ್ಕಳಿಂದ ರಂಗಗೀತೆಗಳು ಪ್ರಸ್ತುತಗೊಳ್ಳಲಿದೆ.
ದಿನಾಂಕ 12 ಏಪ್ರಿಲ್ 2026ರಂದು ರಂಗಕರ್ಮಿ ಡಾ. ಸದಾನಂದ ಬೈಂದೂರು ದಿನದ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಮೇಶ್ ಕೆ. ಬೆಣಕಲ್ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ಮಣಿಪಾಲದ ಸಂಗಮ ಕಲಾವಿದೆರ್ ತಂಡದವರಿಂದ ‘ದೇವರ ಆತ್ಮಹತ್ಯೆ’ ನಾಟಕಗಳು ಪ್ರದರ್ಶನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮಗಳು ಮೂರು ದಿನದ ಈ ರಂಗೋತ್ಸವದಲ್ಲಿ ನಡೆಯಲಿದೆ ಎಂದು ಮಂದಾರ (ರಿ.)ದ ಅಧ್ಯಕ್ಷರು/ನಿರ್ದೇಶಕರಾದ ರೋಹಿತ್ ಎಸ್. ಬೈಕಾಡಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9972117300 ಮತ್ತು 9880470301 ಸಂಖ್ಯೆಗಳನ್ನು ಸಂಪರ್ಕಿಸಿರಿ.

