ಬ್ರಹ್ಮಾವರ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಇದರ ಐದನೇ ವರ್ಷದ ಮಂದಾರ ರಂಗೋತ್ಸವವು ದಿನಾಂಕ 10 ಎಪ್ರಿಲ್ 2026ರ ಶುಕ್ರವಾರದಂದು ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆ ಬ್ರಹ್ಮಾವರದಲ್ಲಿ ಉದ್ಘಾಟನೆಗೊಂಡಿತು.
ಯುದ್ಧವೇ ಮನೆ ಮಾಡಿರುವ ಈ ದುರಿತ ಕಾಲದಲ್ಲಿ ಯುದ್ಧವಿರೋಧಿ ಶಾಂತಿಯ ಕವನವಾಚನ ಮಾಡಿ ಮಂದಾರದ ಸದಸ್ಯರಿಂದ ರಂಗೋತ್ಸವ – 5 ಉದ್ಘಾಟನೆಗೊಂಡು ಬಳಿಕ ಮುಖ್ಯ ಅತಿಥಿಯಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಯಾಕೂಬ್ ಖಾದರ್ ಗುಲ್ವಾಡಿಯವರು ಮಾತನಾಡಿ “ರಂಗಭೂಮಿ ಅದೊಂದು ಕಲೆಯ ಜೀವಂತ ಪ್ರಕ್ರಿಯೆ, ಜಗತ್ತಿನ ಎಲ್ಲಾ ಕಲೆಗೂ ತಾಯಿ ಬೇರು ಈ ರಂಗಭೂಮಿ, ನಾಟಕ ಅನ್ನೋದು ಸಮಾಜದ ಪ್ರತಿಬಿಂಬ ಮಾತ್ರವಲ್ಲ ಸಮಾಜವನ್ನ ತಿದ್ದುವ ಶಕ್ತಿ” ಎಂದು ಹೇಳಿದರು.

ಇನ್ನು ಇದೇ ವೇಳೆ ಉಪಸ್ಥಿತರಿದ್ದ ಚಿಂತಕರು, ಸಾಮಾಜಿಕ ಹೋರಾಟಗಾರರಾದ ಪ್ರೊ. ಫಣಿರಾಜ್ ಅವರು ಮಾತನಾಡಿ “ರಂಗಭೂಮಿಯ ಮೂಲ ವ್ಯಾಕರಣವನ್ನ ನಾವು ಸದಾ ಉಳಿಸಿಕೊಳ್ಳಬೇಕು” ಎಂದರು. ಬಳಿಕ ಹೋಲಿ ಫ್ಯಾಮಿಲಿ ಚರ್ಚ್ ಇದರ ಧರ್ಮಗುರುಗಳಾದ ಫಾದರ್ ಜಾನ್ ಫೆರ್ನಾಂಡೀಸ್ ಇವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮಂದಾರದ ಅಧ್ಯಕ್ಷರಾದ ರೋಹಿತ್ ಎಸ್. ಬೈಕಾಡಿ ಉಪಸ್ಥಿತರಿದ್ದು, ಈ ವೇಳೆ ಮಂದಾರದ ಸದಸ್ಯರು, ರಂಗಾಸಕ್ತರು, ಹಿತೈಷಿಗಳು ಭಾಗಿಯಾಗಿ ಮಂದಾರದ ಸದಸ್ಯೆ ಪ್ರಿಯಾ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ಮಂಗಳೂರಿನ ಸಂತ ಅಲೋಶಿಯಸ್ ಇದರ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ‘ಸೈರನ್’ ನಾಟಕ ಪ್ರದರ್ಶನಗೊಂಡಿತು.

