ಉಳ್ಳಾಲ : ಭರತನಾಟ್ಯವನ್ನು ಉಳಿಸಿ ಬೆಳೆಸಲು ಅಪಾರ ಸೇವೆ ಸಲ್ಲಿಸಿದ್ದ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲದ ನಿರ್ದೇಶಕ, ಉಳ್ಳಾಲ ಬಂಡಿಕೊಟ್ಯ ನಿವಾಸಿ ವಿದ್ವಾನ್ ಶ್ರಾವಣ್ ಉಳ್ಳಾಲ ಇವರು ದಿನಾಂಕ 10 ಏಪ್ರಿಲ್ 2026ರಂದು ನಿಧನರಾಗಿದ್ದಾರೆ. ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಹಾಗೂ ಸಂಸ್ಥೆಯ ಗೌರವಾಧ್ಯಕ್ಷೆ ಶಕೀಲಾ ಜನಾರ್ದನ ಇವರ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ‘ಮಂತ ನಾಟ್ಯಕಲಾ ಗುರುಕುಲ’ವನ್ನು ಶಾವಣ್ ಉಳ್ಳಾಲ ಇವರು ಸಮರ್ಥವಾಗಿ ಮುನ್ನಡೆಸಿ ಅನೇಕ ವಿದ್ಯಾರ್ಥಿಗಳಿಗೆ ಭರತನಾಟ್ಯ ಶಿಕ್ಷಣವನ್ನು ಕಲಿಸಿದ್ದರು.
ನೃತ್ಯದ ಜೊತೆಗೆ ಶಾರೀರಿಕ, ಬೌದ್ಧಿಕ, ಮಾನಸಿಕ, ನೈತಿಕ ಹಾಗೂ ಶೈಕ್ಷಣಿಕ ಮೌಲ್ಯಗಳ ಅರಿವು ಮೂಡಿಸುವ ಕಾರ್ಯದಲ್ಲಿ ಗುರುಕುಲವನ್ನು ಮುಂಚೂಣಿಗೆ ತಂದಿದ್ದರು. ಪಂದನಲ್ಲೂರು ಶೈಲಿಯ ಭರತನಾಟ್ಯವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಪರಿಚಯಿಸಿ ಒರಿಸ್ಸಾ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪದೇಶ, ತೆಲಂಗಾಣ, ಗುಜರಾತ್ ಸೇರಿದಂತೆ ಅನೇಕ ರಾಜ್ಯಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ದುಬೈ ಸೇರಿದಂತೆ ವಿದೇಶಗಳಲ್ಲಿ ಭರತನಾಟ್ಯ, ಕೂಚುಪುಡಿ, ಕಥಕ್, ಒಡಿಸ್ಸಿ ಹಾಗೂ ಯಕ್ಷಗಾನಗಳ ಸಮ್ಮಿಲನ ಪ್ರದರ್ಶನ ನೀಡಿ ಭಾರತವನ್ನು ಅವರು ಪ್ರತಿನಿಧಿಸಿದ್ದರು. ‘ಮೋಕ್ಷಂ’, ‘ರುದ್ರ ವೀರಭದ್ರು. ‘ಶ್ರೀಕೃಷ್ಣ ಲೀಲಾಮೃತಂ’, ‘ತ್ರಿಶಕ್ತಿ’, ‘ನೃಸಿಂಹ ಚಲತಂ’, ‘ದಶ ಹಲರೂಪಂ’, ‘ಶಕ್ತಿ’ ಮೊದಲಾದ ನೃತ್ಯ ರೂಪಕಗಳ ಮೂಲಕ ಅಪಾರ ಜನಮನ್ನಣೆ ಪಡೆದಿದ್ದರು.
ದೂರದರ್ಶನ ಗ್ರೇಡೆಡ್ ಕಲಾವಿದರಾಗಿದ್ದ ಶ್ರಾವಣ್ ಉಳ್ಳಾಲರು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು. ವೀಣಾ ವಾದನದಲ್ಲೂ ಪರಿಣತಿ ಹೊಂದಿದ್ದರು. ಗುರುಕುಲ ಉತ್ಸವಗಳ ಮೂಲಕ ದೇಶ-ವಿದೇಶಗಳ ಕಲಾವಿದರನ್ನು ಒಟ್ಟುಗೂಡಿಸಿ ನೃತ್ಯ ಪರಂಪರೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ‘ನಾಟ್ಯ ಪ್ರವೀಣ ಪ್ರಶಸ್ತಿ’, ‘ಜನಪದ ಬಂಧು ಪ್ರಶಸ್ತಿ’, ‘ನೃತ್ಯ ಶಿರೋಮಣಿ ಪಶಸ್ತಿ’, ‘ನೃತ್ಯ ಪ್ರಿಯ ಪ್ರಶಸ್ತಿ’, ‘ದುರ್ಗಾ ರತ್ನ ಪುರಸ್ಕಾರ’, ‘ಗಿರ್ನಾರ್ ರತ್ನ ಪುರಸ್ಕಾರ’, ‘ಲಾಸ್ಯ ನೃತ್ಯ ನಟೇಶ ಪುರಸ್ಕಾರ’ (ಪದ್ಮಭೂಷಣ ನಾಟ್ಯಾಚಾರ್ಯ ಧನಂಜಯ್ ಅವರಿಂದ), ದಕ್ಷಿಣ ಕನ್ನಡ ಜಿಲ್ಲಾಡಳಿತದ 2018ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂತಾರಾಷ್ಟ್ರೀಯ ‘ಆರ್ಯಭಟ ಪ್ರಶಸ್ತಿ’ ಇವರಿಗೆ ಲಭಿಸಿದ ಪ್ರಮುಖ ಪ್ರಶಸ್ತಿಗಳಾಗಿವೆ. ಮೃತ ಶ್ರಾವಣ್ ಇವರು ಪತ್ನಿ ಶೈನಾ ಶ್ರಾವಣ್ ಮತ್ತು ಪುಟ್ಟ ಹೆಣ್ಣು ಮಗಳು ಮಂತ್ರ ಎಸ್. ಉಳ್ಳಾಲ್ ಇವರನ್ನು ಆಗಲಿದ್ದಾರೆ.
