ಹಂಗಾರಕಟ್ಟೆ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರ ವತಿಯಿಂದ ಶ್ರೀ ಮಹಿಷಮರ್ದಿನೀ ಯಕ್ಷಕಲಾ ಪ್ರತಿಷ್ಠಾನ (ರಿ.) ಚಾರ ಹೆಬ್ರಿ ಇವರ ಆಶ್ರಯದಲ್ಲಿ ಬಡಗುತಿಟ್ಟಿನ ಯಕ್ಷಗಾನದ ಧ್ರುವ ತಾರೆಗಳಾದ ಕಾಳಿಂಗ ನಾವುಡರು ಹಾಗೂ ಸುಬ್ರಹ್ಮಣ್ಯ ಧಾರೇಶ್ವರರು ಕಲಿತ ಗುರುಕುಲ ಪದ್ದತಿಯ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಸದಾನಂದ ರಂಗಮಂಟಪ ಗುಂಡ್ಮಿ, ಸಾಸ್ತಾನದಲ್ಲಿ ದಿನಾಂಕ 31 ಮೇ 2026ನೇ ಆದಿತ್ಯವಾರ ಮಧ್ಯಾಹ್ನ 3-00 ಗಂಟೆಗೆ ಸರಿಯಾಗಿ ‘ನೆನಪಿನಂಗಳದಲ್ಲಿ ನಾವುಡರು ಮತ್ತು ಧಾರೇಶ್ವರರು’ ಎಂಬ ಉಭಯ ಮೇರು ಭಾಗವತರ ಸಂಸ್ಮರಣಾ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಖ್ಯಾತ ಮದ್ದಲೆಯ ವಾದಕರು ಯಕ್ಷಗುರು ಹಾಗೂ ಯಕ್ಷಗಾನ ಅಕಾಡಮಿ ಪುರಸ್ಕೃತ ದೇವದಾಸ್ ರಾವ್ ಕೂಡ್ಲಿಯವರನ್ನು ಸನ್ಮಾನಿಸಲಾಗುವುದು. ಶ್ರೀ ಪ್ರದೀಪ ಕುಮಾರ್ ಕಲ್ಕೂರ್, ಕೋಟ ಶ್ರೀನಿವಾಸ್ ಪೂಜಾರಿ, ಶ್ರೀ ಆನಂದ ಸಿ. ಕುಂದರ್, ದಿವಾಕರ ಆಚಾರ್ಯ ಗೇರುಕಟ್ಟೆ, ಶ್ರೀ ಜಿ. ಹರಿಕೃಷ್ಣ ರಾವ್, ಕೆ. ತಾರನಾಥ ಹೊಳ್ಳ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪ್ರಸಂಗಕವಿ ಡಾ. ಶಿವಕುಮಾರ್ ಅಳಗೋಡು ಇವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಯಕ್ಷಗಾನ ತಾಳಮದ್ದಳೆ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಚಾರ ಪ್ರದೀಪ ಹೆಬ್ಬಾರ್ ವಿರಚಿತ ‘ಉಲೂಪಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆಯು ಹರಿಹಪುರ ಶಿವಶಂಕರ ಭಟ್, ದೇವದಾಸ್ ರಾವ್ ಕೂಡ್ಲಿ, ರಾಮಕೃಷ್ಣ ಮಂದಾರ್ತಿಯವರ ಗಜಕಟ್ಟಿ ಹಿಮ್ಮೇಳ, ದಿವಾಕರ ಆಚಾರ್ಯ ಗೇರುಕಟ್ಟೆ, ಆನಂದ ಭಟ್ ಕೆಕ್ಕಾರ್, ಡಾ. ಶಿವಕುಮಾರ್ ಆಳಗೋಡು, ಆದಿತ್ಯ ಹೆಗಡೆ ಯಡೂರು, ಚಾರ ಪ್ರದೀಪ ಹೆಬ್ಬಾರ್ ಮುಂತಾದ ಹಿರಿಯ ಕಿರಿಯ ಕಲಾವಿದರಿಂದ ನಡೆಯಲಿದೆ ಎಂದು ಹಂಗಾರಕಟ್ಟೆ ಕಲಾಕೇಂದ್ರ ಕಾರ್ಯದರ್ಶಿಗಳಾದ ರಾಜಶೇಖರ ಹೆಬ್ಬಾರ್ ತಿಳಿಸಿದ್ದಾರೆ.

