ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ವತಿಯಿಂದ ಸುರತ್ಕಲ್‌ನ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ದಿನಾಂಕ 24 ಮೇ 2026ರಂದು ಆಯೋಜಿಸಿದ್ದ ಪಡುಬಿದ್ರಿ ಸುಬ್ರಾಯ ಮಾಣಿ ಭಾಗವತರ್ ನೆನಪಿನ ಸಂಗೀತ ಕಛೇರಿ ಹಾಗೂ ಭರತನಾಟ್ಯ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿಯ ರಂಜಿನಿ ಮೆಮೋರಿಯಲ್ ಟ್ರಸ್ಟಿನ ಸ್ಥಾಪಕ ಪ್ರೊ. ವಿ. ಅರವಿಂದ ಹೆಬ್ಬಾರ್ ಇವರು ಮಾತನಾಡಿ “ಅದ್ಭುತವಾದ ಪಾಂಡಿತ್ಯ, ತಾಳ ಪ್ರಶ್ನೆ ಮತ್ತು ವಿನಯ ಶೀಲ ವ್ಯಕ್ತಿತ್ವದ ಶ್ರೇಷ್ಠ ಸಂಗೀತ ಗುರು ಪಡುಬಿದ್ರೆ ಸುಬ್ರಾಯ ಮಾಣಿ ಭಾಗವತರ ನೆನವು ಸದಾ ನಮ್ಮಲ್ಲಿರಬೇಕು” ಎಂದು ಹೇಳಿದರು. ಶ್ರೀ ನಾಟ್ಯಾಂಜಲಿ ಆಕಾಡೆಮಿಯ ನಿರ್ದೇಶಕ ವಿದ್ವಾನ್ ಚಂದ್ರಶೇಖರ ನಾವಡ ಮಾತನಾಡಿ “ಮಾಣಿ ಭಾಗವತರ್ ಪಾರಂಪರಿಕ ಗುರುಕುಲ ಕ್ರಮದ ಶಿಸ್ತು ಬದ್ಧ ಗುರುಗಳಾಗಿದ್ದರು” ಎಂದರು.

ಪಿ. ನಿತ್ಯಾನಂದ ರಾವ್ ಇವರಿಂದ ನಾಮ ಸಂಕೀರ್ತನೆ, ದೇವರ ನಾಮ, ಯಕ್ಷಗಾನ ಹಾಡುಗಾರಿಕೆ ಕಾರ್ಯಕ್ರಮ ನಡೆಯಿತು. ಚಿನ್ಮಯ ಕೃಷ್ಣ ಅಭಿಷೇಕ್, ವಿದ್ವತ್ ರಾವ್, ಕೃಷ್ಣಾಕುಮಾರಿ ಸಹ ಗಾಯಕರಾಗಿ ಮತ್ತು ವಯಲಿನ್‌ನಲ್ಲಿ ಸುಪ್ರಿತಾ ಪಿ.ಎಸ್. ಪುತ್ತೂರು, ಮೃದಂಗದಲ್ಲಿ ಸಂದೀಪ್ ರಾಮಮೂರ್ತಿ ಎನ್‌ಐಟಿಕೆ ಸುರತ್ಕಲ್, ಮದ್ದಳೆಯಲ್ಲಿ ಅಚಿಂತ್ಯಕ್ಕೆ ಅಚಿಂತ್ಯ ಕೃಷ್ಣ ಪುತ್ತೂರು, ತಂಬೂರದಲ್ಲಿ ಸುಜಾತಾ ಎಸ್. ಭಟ್ ಸುರತ್ಕಲ್ ಸಹಕರಿಸಿದರು. ವಿದುಷಿ ವಿದ್ಯಾ ಮನೋಜ್ ಕಲ್ಲಡ್ಕ ಇವರ ಶಿಷ್ಯ ಪ್ರಣಮ್ಯ, ಬಿ.ಸಿ. ರೋಡ್ ಇವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ನಾದಸ್ವರ ಕಲಾವಿದ ನಾಗೇಶ್ ಎ. ಬಪ್ಪನಾಡು, ಶ್ರೀ ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ವಿದುಷಿ ಶಾರದಾಮಣಿ ಶೇಖರ್, ಡಾ. ಸತೀಶ್ ರಾವ್, ಶ್ರೀನಿವಾಸ ಭಾಗವತರ್ ಪಡುಬಿದ್ರಿ, ವಿಭು ರಾವ್ ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಸ್ವಾಗತಿಸಿ, ಪುಷ್ಪ ಮಹೇಶ್ ನಿರೂಪಿಸಿದರು. ಪಿ. ನಿತ್ಯಾನಂದ ರಾವ್ ಮತ್ತು ಕೃಷ್ಣಾಕುಮಾರಿ ಇವರನ್ನು ಸಮ್ಮಾನಿಸಲಾಯಿತು.
