ಮೂಡಬಿದಿರೆ : ಯಕ್ಷಗಾನ ರಂಗದ ಹಾಸ್ಯ ಚಕ್ರವರ್ತಿಯಾಗಿದ್ದ ಶ್ರೀ ಮಿಜಾರು ಅಣ್ಣಪ್ಪ ಇವರ ಸಂಸ್ಮರಣಾ ಗೋಷ್ಠಿ ಹಾಗೂ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಕೋಟಿ ಚೆನ್ನಯ’ ತುಳು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 02 ಏಪ್ರಿಲ್ 2026ರಂದು ಮಧ್ಯಾಹ್ನ ಗಂಟೆ 2-00ಕ್ಕೆ ಮೂಡಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ (ರಿ.) ಬೆಳುವಾಯಿ ಹಾಗೂ ಶ್ರೀ ಮಹಾವೀರ ಕಾಲೇಜು ಮೂಡಬಿದರೆ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಭಯಚಂದ್ರ ಜೈನ್ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು. ಹಿರಿಯ ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಗೋಣಿಬೀಡು ಇವರು ಸಂಸ್ಮರಣಾ ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿಯ ಗೌರವಾಧ್ಯಕ್ಷರಾದ ಕೆ. ಶ್ರೀಪತಿ ಭಟ್, ಬಿಜಿಪಿಯ ದ.ಕ. ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಎಂ., ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಧಕೃಷ್ಣ, ತುಳು ಸಂಘದ ಸಂಚಾಲಕರಾದ ಪ್ರವೀಣ್ ಭಂಡಾರಿ, ಉದ್ಯಮಿ ಸದಾಶಿವ ಮಿಜಾರು ಇವರು ಭಾಗವಹಿಸಲಿದ್ದಾರೆ. ಸಂಸ್ಮರಣಾ ಗೋಷ್ಠಿ ಬಳಿಕ ಎಂ. ದೇವಾನಂದ ಭಟ್ ಬೆಳುವಾಯಿ ಇವರ ಸಂಯೋಜನೆಯಲ್ಲಿ ಹಿರಿಯ ಕಲಾವಿದರ ಪಾಲ್ಗೊಳ್ಳುವಿಕೆಯಲ್ಲಿ ‘ಕೋಟಿ ಚೆನ್ನಯ’ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ.

