ಕಟೀಲು : ಕಟೀಲು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೂಲ್ಕಿ ತಾಲೂಕು ಘಟಕ ಇದರ ವತಿಯಿಂದ ಕಟೀಲು ದೇಗುಲದ ನಂದಿನಿ ನದಿ ಮಧ್ಯದ ಕುದ್ರುವಿನಲ್ಲಿ ದಿನಾಂಕ 01 ಮಾರ್ಚ್ 2026ರಂದು ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.

ಈ ಸಮ್ಮೇಳನವನ್ನು ಶಾಸಕ ಉಮಾನಾಥ ಕೋಟ್ಯಾನ್ ಇವರು ಐದು ಕೃತಿಗಳನ್ನು ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿದರು. ಕಮಲಾದೇವಿ ಪ್ರಸಾದ ಆಸ್ರಣ್ಣ ಅವರ ಯಕ್ಷಾಕೃತಿ, ಉದಯಕುಮಾರ ಹಬ್ಬು ಅವರ ನೆರೂದಾನ ಇಪ್ಪತ್ತು ಪ್ರೇಮಗೀತೆಗಳು, ಛತ್ರಪತಿ ಶಿವಾಜಿ ಮಹಾರಾಜ್ ಜೀವನ ಚರಿತ್ರೆ, ಎಕ್ಕಾರು ಗ್ರಂಥಾಲಯದ ಸಂಚಿಕೆ ಪುಸ್ತಕಮನೆ, ಸೋಂದಾ ಭಾಸ್ಕರ ಭಟ್ ಇವರ ಅಂಕಣ ಬರಹಗಳ ಸಂಗ್ರಹ ಶ್ಲೋಕಸಾಗರ ಕೃತಿಗಳು ಲೋಕಾರ್ಪಣೆಗೊಂಡವು.

ಚಿತ್ರಕೂಟವನ್ನು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ವಿಶಿಷ್ಟವಾಗಿ ಉದ್ಘಾಟಿಸಿದರು. ಸಮಾನಾಂತರ ವೇದಿಕೆಯನ್ನು ಕ.ಸಾ.ಪ. ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಕನ್ನಡ ಭುವನೇಶ್ವರಿಯ ಮೆರವಣಿಗೆಗೆ ಚಾಲನೆ ನೀಡಿದರು. ಕಥೆಗಾರ ಹಂಝ ಮಲಾರ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್., ಸಮ್ಮೇಳನ ಸಮಿತಿಯ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ, ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಪದ್ಮಲತಾ, ಕ.ಸಾ.ಪ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಕ.ಸಾ.ಪ. ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿಗಳಾದ ಹೆರಿಕ್ ಪಾಯಸ್, ಪ್ರಕಾಶ ಆಚಾರ್, ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ದೊಡ್ಡಯ್ಯ ಮೂಲ್ಯ ಮತ್ತಿತರರಿದ್ದರು. ಸಮ್ಮೇಳನ ಸಮಿತಿಯ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ, ಕಿರಣ್ ಅತ್ತೂರು, ರಾಜಶೇಖರ್ ನಿರೂಪಿಸಿದರು.


ಕಟೀಲಿನ ಕುದ್ರುವಿನಲ್ಲಿ ನಡೆದ ಮೂಲ್ಕಿ ಸಾಹಿತ್ಯ ಸಮ್ಮೇಳನ ಒಟ್ಟು ಮೂರು ವೇದಿಕೆಗಳಲ್ಲಿ ನಡೆಯಿತು. ಮರದ ಬುಡದಲ್ಲಿ ಹಾಕಿದ ಪಾಡ್ದನ ಕೋಗಿಲೆ ನೆನಪಿನ ಪುಟ್ಟ ವೇದಿಕೆ- ಪಟ್ಟಾಂಗಕಟ್ಟೆಯಲ್ಲಿ ಸಾಹಿತ್ಯಾಸಕ್ತರಿಗೆ ಎಂಥಾ ಪುಸ್ತಕ ಓದಬೇಕು?, ಓದಿ ಏನಾಗಬೇಕಿದೆ? ಯಾಕೆ ಬರೆಯಬೇಕು? ಬರೆದು ಮಾಡುವುದೇನು ಹೀಗೆ ಸಾಹಿತ್ಯಾಸಕ್ತರಿಗೆ ಮಾತನಾಡಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಹತ್ತು ಹನ್ನೆರಡು ಮಂದಿಯಷ್ಟೇ ಭಾಗವಹಿಸುವಂತಹ ಪರಿಕಲ್ಪನೆಯ ಪುಟ್ಟ ವೇದಿಕೆಯಲ್ಲಿ ದೊಡ್ಡಸಂಖ್ಯೆಯಲ್ಲಿ ಜನ ಸೇರಿ, ಚರ್ಚೆ ಸಂವಾದದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಕಟೀಲು ಕ್ಷೇತ್ರ, ನಂದಿನೀ ನದಿ ಹೀಗೆ ಪರಿಕಲ್ಪನೆಯ ಚಿತ್ರಕೂಟ ಸಮ್ಮೇಳನದ ವಿಶೇಷ ಆಕರ್ಷಣೆಯಾಗಿತ್ತು. ನದಿಯಲ್ಲಿ, ನದಿಯ ಬಂಡೆಕಲ್ಲಿನಲ್ಲಿ, ನದಿ ದಡದಲ್ಲಿ, ಕುದ್ರುವಿನಲ್ಲಿ, ಮರದಡಿಯಲ್ಲಿ ಹೀಗೆ ಅಲ್ಲಲ್ಲಿ ಕೂತ ನಲವತ್ತಕ್ಕೂ ಹೆಚ್ಚು ಹಿರಿಕಿರಿಯ ಕಲಾವಿದರು ಕಟೀಲು ಕ್ಷೇತ್ರವನ್ನು ತಮ್ಮ ಕಲೆಯಿಂದ ಸೆರೆಹಿಡಿದರು. ಬಳಿಕ ಅವನ್ನು ದೇವರ ಸನ್ನಿಧಿಗೆ ಒಪ್ಪಿಸಿ ಧನ್ಯರಾದರು. ಕಲಾವಿದರನ್ನು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ದೇವರ ಶೇಷವಸ್ತ್ರ ನೀಡಿ ಗೌರವಿಸಿದರು. ಸಮ್ಮೇಳನಾಧ್ಯಕ್ಷ ಕೃಷ್ಣಮೂರ್ತಿ ಕವತ್ತಾರು, ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್, ಕ್ಯಾಪ್ಸ್ ಫೌಂಡೇಶನ್‌ನ ಚಂದ್ರಶೇಖರ ಶೆಟ್ಟಿ, ಉಳ್ಳಾಲ ಕ.ಸಾ.ಪ.ದ ಧನಂಜಯ ಕುಂಬ್ಳೆ, ಮೂಲ್ಕಿ ಕ.ಸಾ.ಪ.ದ ಮಿಥುನ ಕೊಡೆತ್ತೂರು, ರವಿ ಪಾವಂಜೆ ಮತ್ತಿತರರಿದ್ದರು. ಸಾಹಿತ್ಯ ಸಮ್ಮೇಳನ ನಡೆದ ಕುದ್ರುವನ್ನು ಬೆರ್ಚಲಪ್ಪ, ಎತ್ತಿನ ಗಾಡಿ, ಅಲಂಕಾರಿಕ ವಸ್ತುಗಳು, ಕನ್ನಡ ಧ್ವಜಗಳಿಂದ ಅಲಂಕರಿಸಲಾಗಿತ್ತು. ಪುಸ್ತಕ, ಖಾದಿ ಬಟ್ಟೆ, ಚನ್ನಪಟ್ಟಣ ಆಟಿಕೆ, ಗೃಹ ಉದ್ಯಮದ ವಸ್ತುಗಳು ಹೀಗೆ ವಿವಿಧ ವಸ್ತುಗಳ ಮಾರಾಟ ಇತ್ತು.


ಸಮ್ಮೇಳನಾಧ್ಯಕ್ಷ ಕೃಷ್ಣಮೂರ್ತಿ ಕವತ್ತಾರು ಮಾತನಾಡಿ “ಬಣ್ಣದ ತಗುಡಿನ ತುತ್ತೂರಿ, ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ ಅಂತಹ ಹಾಡು ಸಾಹಿತ್ಯ ಕಾಣೆಯಾಗುತ್ತಿದೆ. ಪಠ್ಯ ಚಲಾವಣೆ ಇಲ್ಲದಿದ್ದರೆ ಅದು ಗ್ರಂಥಾಲಯದಲ್ಲಿ ಮಾತ್ರ ಇರುತ್ತದೆ. ಭಾಷೆ ಉಳಿಯುವುದು ಬದುಕಿನ ಒಂದು ಭಾಗವಾದಾಗ ಮಾತ್ರ. ತುಳುನಾಡಿನಲ್ಲಿ ಶೇಕಡಾ 35ರಷ್ಟು ಜನ ಕನ್ನಡ ಮಾತನಾಡುತ್ತಾರೆ. ಮಿಕ್ಕಂತೆ ಕೊಡವ, ಕೊಂಕಣಿ, ತುಳು ಮತ್ತು ಇನ್ನಿತರ ಸೋದರ ಭಾಷೆಗಳನ್ನು ಮಾತನಾಡುತ್ತಾರೆ. ಕನ್ನಡ ಕಲಿತ ಭಾಷೆ. ಆದ್ದರಿಂದ ವ್ಯವಹಾರಕ್ಕೆ ಸೀಮಿತವಾಗಿರುತ್ತದೆ. ನಾನು ಪರ್ಯಾಯವಾಗಿ ಯಾವುದೇ ಪರಿಹಾರಗಳನ್ನು ಸೂಚಿಸುವುದಿಲ್ಲ. ಎಲ್ಲದಕ್ಕೂ ಶಾಲೆಯನ್ನಷ್ಟೇ ಗುರಿ ಮಾಡುವುದು ಸೂಕ್ತವಲ್ಲ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿದೆ. ಆದ್ದರಿಂದ ಕನ್ನಡಮಯ ವಾತಾವರಣ ಸೃಷ್ಟಿಸುವುದು ನಮ್ಮದೇ ಜವಾಬ್ದಾರಿಯಲ್ಲವೇ? ನಮ್ಮ ಭಾಷೆಯಲ್ಲಿಯೇ ಎಲ್ಲಾ ಪದೇ, ಹಾಡುಗಳನ್ನು ಹೇಳಿಕೊಡುವ ತಾಯಂದಿರು ಬೇಕಾಗಿದ್ದಾರೆ. ಕಥೆ ಹೇಳುವ ಅಜ್ಜಅಜ್ಜಿ ಬೇಕಾಗಿದ್ದಾರೆ. ಜಗತ್ತಿನಲ್ಲಿ ಎಲ್ಲವೂ ನವೀಕರಣಗೊಳ್ಳುತ್ತಿದೆ, ಆದರೆ ಶಿಕ್ಷಣ ಕ್ಷೇತ್ರವೊಂದನ್ನು ಹೊರತುಪಡಿಸಿ. ಏಕೆಂದರೆ ಅದು ಉಳ್ಳವರ ಕಪಿಮುಷ್ಠಿಯಲ್ಲಿದೆ. ಮಕ್ಕಳು ಶಾಲೆಗೆ ಬಂದಾಗ ಮೈದಾನದಲ್ಲಿ ನಮ್ಮ ನಾಡಿನ ವಾದ್ಯಗಳಾದ, ನಾಡಿನ ಸಂಸ್ಕೃತಿ ಪರಂಪರೆ ಪರಿಕರಗಳಾದ ಚಂಡೆ, ತ್ರಾಸೆ, ಡೊಳ್ಳು, ತಮಟೆ, ಡೋಲು ನುಡಿಸಿ, ಅವುಗಳೊಂದಿಗೆ ಅವರನ್ನೂ ಕುಣಿಸಿ, ದಿನಕ್ಕೊಂದು ಸಾಹಿತ್ಯದ ಹಾಡುಗಳನ್ನು ಹಾಡಿಸಿ, ಮನದಲ್ಲಿ ಕನ್ನಡ ಬೇರೂರುವಂತೆ ಮಾಡುವುದು ನಮ್ಮ ಕರ್ತವ್ಯ. ಯಾವುದೇ ಸಭೆ ಸಮಾರಂಭಗಳಲ್ಲಿ ಕನ್ನಡ ಸಾಹಿತ್ಯ ಅಥವಾ ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್, ಚಿ. ಉದಯ್‌ಶಂಕರ್ ಮತ್ತು ಇನ್ನಿತರ ನಾಡು-ನುಡಿ ಕುರಿತಾದ ಚಲನಚಿತ್ರ ಗೀತೆಗಳು ಅಥವಾ ಜಾನಪದ ಹಾಡುಗಳನ್ನು ಹಾಡಿಸಿ, ಮಕ್ಕಳಿಗೆ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಕನ್ನಡ ಸಾಹಿತ್ಯ-ಸಾಹಿತಿಗಳ ಕುರಿತಾದ ರಸಪ್ರಶ್ನೆಯನ್ನಿರಿಸಿ, ಯಾವುದಾದರೂ ಒಳ್ಳೆ ಕಥೆಗಳನ್ನು ಅವರಿಗೆ ಅಭಿನಯಿಸುವಂತೆ ಮಾಡಿ ದೃಶ್ಯರೂಪಕ್ಕೆ ತರುವುದು, ತರಗತಿಗಳಲ್ಲಿ ಬ್ಲೂಟೂತ್‌ನ ಧ್ವನಿವರ್ಧಕಗಳನ್ನು ಅಳವಡಿಸಿ, ಪಾಠ ಶುರು ಮಾಡುವುದಕ್ಕಿಂತ ಮುಂಚಿತವಾಗಿ ಅಥವಾ ಶಾಲೆ ಬಿಡುವುದಕ್ಕಿಂತ ಐದು ನಿಮಿಷ ಮುಂಚೆ ಕನ್ನಡದ ಶ್ಲೋಕ ಅಥವಾ ಹಿರಿಯರ ಸಾಹಿತ್ಯವು ಕಿವಿಗೆ ಕೇಳುವಂತೆ ಮಾಡಿದರೆ ಕನ್ನಡ ಸಾಹಿತ್ಯ ಎಳೆ ಮನಸ್ಸಿನಲ್ಲಿ ಉಳಿಯಲು ಸಾಧ್ಯ ಮತ್ತು ಪ್ರೀತಿ ಉಕ್ಕಲು ಸಾಧ್ಯ. ಕಿವಿಯ ಮುಖಾಂತರ ಕೇಳಿದಾಗ ಒಳಗಡೆ ಕಲ್ಪನೆ ಬೆಳೆಯುತ್ತದೆ. ನಮ್ಮೊಳಗಿನ ಸಂಕುಚಿತತೆ ಸಾಯುತ್ತದೆ. ಮದುವೆ ಸಮಾರಂಭ, ಮೊಬೈಲ್ ರಿಂಗ್‌ಟೋನ್‌ಗಳಲ್ಲೂ ಕನ್ನಡ ಪಾಡ್ದಾನ ಮತ್ತು ಗೀತೆಗಳನ್ನು ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಯೂಟ್ಯೂಬರ್ಸ್‌ಗಳು ನಮ್ಮ ಸಂಸ್ಕೃತಿ, ಸಮಾಜ, ಆಚರಣೆಗಳತ್ತ ಬೆಳಕು ಚೆಲ್ಲುವ ಕೆಲಸ ಮಾಡಬೇಕು. ಏಕೆಂದರೆ ಮನುಷ್ಯ ಕೇಳಿಸಿಕೊಳ್ಳುವುದು ಕಡಿಮೆಯಾಗಿದೆ, ನೋಡುವುದೇ ಹೆಚ್ಚಾಗಿದೆ. ರಂಗಭೂಮಿ ಕ್ಷೇತ್ರದಲ್ಲಿ ಇದ್ದವನನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಮಾಡಿರುವುದು ರಂಗಭೂಮಿಗೆ ಕೊಟ್ಟ ಗೌರವವಾಗಿದೆ. ನಟನೆಯಲ್ಲಿ ಒಂದು ಮಾತಿದೆ ಅಭಿನಯಿಸಬೇಡಿ, ಅನುಭವಿಸಿ. ಸಾಹಿತ್ಯದಲ್ಲೂ ಹಾಗೆಯೇ ಅನುಭವಿಸಿ ಬರೆದಾಗ ಓದುಗನಿಗೆ ಸಾಹಿತ್ಯದ ಅನುಭವ ಆಗುತ್ತದೆ. ಯಾವುದೇ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಕೇವಲ ಬೌದ್ಧಿಕ ಕಸರತ್ತು ಆದರೆ ಯಾರಿಗೂ ಹೃದಯಸ್ಪರ್ಶಿಯಾಗದು. ಎಳೆ ಎಳೆಯಾಗಿ ಸೂಕ್ಷ್ಮತೆಗಳೊಂದಿಗೆ ಅವಲೋಕಿಸಿದಾಗ ನಮ್ಮೊಳಗೆ ಸಂಪೂರ್ಣ ಇಳಿಯುತ್ತದೆ. ಇಳಿದದ್ದನ್ನು ಮಥಿಸಿದಾಗ ಬೇಕಾದ ಹಾಗೆ ಅಭಿವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಅಕ್ಷರಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗಬಾರದು. ಒಳಿತನ್ನು ಮಾಡುವುದೇ ಸಾಹಿತ್ಯ” ಎಂದು ಹೇಳಿದರು.


ಈ ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾದ ಹಿರಿಯ ಸಾಹಿತಿಗಳ ನೆನಪು ಮಾಡಿಸುವ ಗೋಷ್ಠಿಗಳಲ್ಲಿ ಹರಿದಾಸ ಪಾವಂಜೆ ಲಕ್ಷ್ಮೀನಾರಾಯಣಪ್ಪಯ್ಯರ ಕುರಿತು ಪ್ರಸಿದ್ಧ ಸಾಹಿತಿ ಡಾ. ಬಿ. ಜನಾರ್ದನ ಭಟ್, ಖ್ಯಾತ ಕಥೆಗಾರ ಬಾಗಲೋಡಿ ದೇವರಾಯರ ಬಗ್ಗೆ ನಿವೃತ್ತ ಉಪನ್ಯಾಸಕರಾದ ಪ್ರೊ. ಅರವಿಂದ ಹೆಬ್ಬಾರ್, ಖ್ಯಾತ ಸಾಹಿತಿ ಎಂ.ಎನ್. ಕಾಮತ್‌ರ ಕುರಿತು ಖ್ಯಾತ ಬರಹಗಾರರಾದ ದೇವು ಹನೇಹಳ್ಳಿ, ಕಥೆಗಾರ ಎಂ. ವ್ಯಾಸ ಇವರ ಬಗ್ಗೆ ನಿವೃತ್ತ ಪ್ರಾಂಶುಪಾಲರಾದ ವರದರಾಜ ಚಂದ್ರಗಿರಿ, ಸೇಡಿಯಾಪು ಕೃಷ್ಣ ಭಟ್ಟರ ಕುರಿತು ವಿದ್ವಾಂಸರಾದ ಪಾದೇಕಲ್ಲು ವಿಷ್ಣು ಭಟ್ ಇವರುಗಳು ನೆನಪಿಸಿಕೊಂಡರು. ಗೋಷ್ಠಿಗಳನ್ನು ತಪಸ್ಯಾ, ಕೃಷ್ಣರಾಜ ಭಟ್, ಗಾಯತ್ರಿ ಎನ್.ಆರ್., ಸಂಧ್ಯಾ ಗಿರೀಶ್, ಪ್ರಕಾಶ್ ಆಚಾರ್, ಧನಲಕ್ಷ್ಮೀ ಶೆಟ್ಟಿಗಾರ್ ನಿರೂಪಿಸಿದರು.

ಮೂಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾಪನದ ನುಡಿಗಳನ್ನಾಡಿದ ಸಾಹಿತಿ, ಸಂಶೋಧಕ ಬಾಬು ಕೊರಗ “ಸಾಹಿತ್ಯ ಸಮ್ಮೇಳನಗಳಲ್ಲಿ ದಮನಿತರ ಧ್ವನಿ ಕೇಳುವಂತಾಗಬೇಕು. ಬಂಡಾಯ ಸಾಹಿತ್ಯ ಪ್ರಖರತೆಯನ್ನು ಕಳೆದುಕೊಂಡಿದೆ.” ಎಂದು ಅವರು ಹೇಳಿದರು. ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಕೃಷ್ಣಮೂರ್ತಿ ಕವತ್ತಾರು ದಂಪತಿಗಳನ್ನು ಸಂಮಾನಿಸಲಾಯಿತು. ಕವಿ ವಿಲ್ಸನ್ ಕಟೀಲು, ಸಮ್ಮೇಳನಾಂಗ ನಡೆಸಿದ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ದಯಾನಂದ ಕಟೀಲ್, ಡಾ. ಎಂ.ಪಿ. ಶ್ರೀನಾಥ್, ಮಿಥುನ ಕೊಡೆತ್ತೂರು, ಹೆರಿಕ್ ಪಾಯಸ್, ಪ್ರಕಾಶ್ ಆಚಾರ್, ಮಂಗಳೂರು ಕ.ಸಾ.ಪ. ಮಂಜುನಾಥ ರೇವಣ್‌ಕರ್, ಮೂಡುಬಿದ್ರೆ ಕ.ಸಾ.ಪ. ವೇಣುಗೋಪಾಲ್ ಶೆಟ್ಟಿ, ಉಳ್ಳಾಲ ಕ.ಸಾ.ಪ.ದ ಧನಂಜಯ ಕುಂಬ್ಳೆ, ಮತ್ತಿತರರು ಉಪಸ್ಥಿತರಿದ್ದರು.
