ಉಡುಪಿಯ ‘ರಾಗಧನ’ ಸಂಸ್ಥೆಯು ಹಮ್ಮಿಕೊಂಡಿರುವ ರಾಗರತ್ನ ಮಾಲಿಕೆ ಸರಣಿಯ 50ನೆಯ ಕಾರ್ಯಕ್ರಮದ ಅಂಗವಾಗಿ ಒಂದು ಉನ್ನತ ಮಟ್ಟದ ಸಂಗೀತ ಕಚೇರಿ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 21 ಜೂನ್ 2026ರಂದು ನಡೆಯಿತು. ಇದನ್ನು ನಡೆಸಿಕೊಟ್ಟ ಕಲಾವಿದೆ ಕುಮಾರಿ ಸ್ವರಾತ್ಮಿಕ ಶ್ರೀಕಾಂತ್ ಚೆನ್ನೈ.
ನಗುಮುಖದ ಯುವತಿ; ಒಳ್ಳೆಯ ತೂಕವಿದ್ದು, ಹಿತವಾದ ಮಾರ್ದವತಯಿಂದ ಕೂಡಿದ ಸಂಸ್ಕಾರಯುತ ಕಂಠಸಿರಿ ! ಯಾವುದೇ ಸ್ವರದಲ್ಲೂ ಶುದ್ಧವಾದ ಶೃತಿ ಲೀನತೆಯೊಂದಿಗೆ ಸುಧೀರ್ಘವಾಗಿ ನಿಲ್ಲಬಲ್ಲ ಕ್ಷಮತೆ ! ವಿಪುಲವಾದ ಮನೋಧರ್ಮದಲ್ಲಿ ನಿರಂತರವಾಗಿ ಸ್ಫುರಿಸುವ ಹೊಸ ಹೊಸ ಸಂಚಾರಗಳನ್ನು ಆ ಕೂಡಲೇ ನಿಖರವಾಗಿ ಹಾಡಬಲ್ಲ ಧ್ವನಿ ಸೌಕರ್ಯ ! ಚೈತನ್ಯ ಪೂರ್ಣವಾದ ಮಂದಾರಿ ವರ್ಣದೊಂದಿಗೆ ಕಚೇರಿ ಆರಂಭ. ನಾಗಸ್ವರಾವಳಿ (ಶ್ರೀ ಶಂಕರ), ಕುಂತಲವರಾಳಿ (ಚಿಂತೆಯೇ ಸದಾ), ಸಿಂಧುಭೈರವಿ (ಕಲ್ಯಾನ ಗೋಪಾಲ), ಬಸಂತ್ (ರಾಘವ), ಶ್ರೀರಂಜನಿ (ಪಾಲಿಸಮ್ಮ) ಕೃತಿಗಳು ತಂತಮ್ಮ ನೆಲೆಯಲ್ಲಿ ಸುಶ್ರಾವ್ಯ ಎನಿಸಿದವು. ಆಹಿರಿ (ಮಾಯಮ್ಮ) ವಿಳಂಬಕಾಲ ಕೃತಿ. ಇದರ ದೈನ್ಯತೆ ಮತ್ತು ಶರಣಾಗತ ಭಾವವನ್ನು, ವಿಶೇಷ ಗಮಕಗಳೊಂದಿಗೆ ಕಲಾವಿದೆ ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದಂತೆ ಶ್ರೋತೃಗಳು ಕೂಡ ಭಾವ ಪರವಶರಾದದ್ದು ವಿಶೇಷ !
ಚಂದ್ರ ಜ್ಯೋತಿ (ಶಶಿವದನ) ವಿವಾದಿರಾಗದ ಆಲಾಪನೆ, ಸ್ವರಸ್ಥಾನಗಳ ನಿಖರತೆ, ಶುದ್ಧ ಗಾಂಧಾರದ ಸಂಚಾರಗಳಲ್ಲಿ ಅನಾಯಾಸವಾಗಿ, ತಾನೇ ತಾನಾಗಿ ಒದಗಿ ಬರುವ, ‘ಅ’ ಕಾರಗಳು ರಾಗ ಸೌಂದರ್ಯವನ್ನು ಎತ್ತಿ ಹಿಡಿದವು. ಅಂದದ ಸಂಗತಿಗಳಿಂದ ಅಲಂಕೃತವಾದ ಕೃತಿ ನಿರೂಪಣೆ, ಕ್ರಮಬದ್ಧ ಸ್ವರಕಲ್ಪನೆಗಳು ಗುಣ ಗ್ರಾಹಿ ರಸಿಕರ ಮೆಚ್ಚುಗೆಯನ್ನು ಪಡೆದವು. ಪ್ರಧಾನ ರಾಗ-ಮಧ್ಯಮಾವತಿ (ನಳಿನ ಲೋಚನ) ಈ ರಾಗದ ಸಹಜ ಗಾಂಭೀರ್ಯಕ್ಕೆ ಒಪ್ಪುವಂತಹ ಘನವಾದ ಆಲಾಪನೆ, ಸೂಕ್ತ ಕಂಡಲ್ಲಿ ಬಿರ್ಕಾಗಳು, ‘ಜಲಜಾಪ್ತ ಕುಲ’ ಎಂಬಲ್ಲಿ ನೆರವಲ್, ಚುರುಕಾದ ಸ್ವರ ಕಲ್ಪನೆಗಳು ಮತ್ತು ಮುಕ್ತಾಯಗಳು ! ಎಲ್ಲವೂ ಅಚ್ಚುಕಟ್ಟು !

ಮುಂದೆ ಕ್ಷಿಪ್ರವಾಗಿ ಹಾಡಲಾದ ರಾಗಂ-ತಾನಂ-ಪಲ್ಲವಿಗಾಗಿ ಧರ್ಮವತಿಯನ್ನು ಎತ್ತಿಕೊಳ್ಳಲಾಯಿತು. ಹದವಾದ ರಾಗ ವಿಸ್ತಾರ, ಆಧಾರ ಶ್ರುತಿಯೊಂದಿಗೆ ಸಂಧಾನ ಸಾಧಿಸಿದಂತೆ ರಿಂಗಣಿಸಿದ ‘ತಾನಂ’, ಆನಂತರ ಖಂಡ ತ್ರಿಪುಟ ತಾಳದಲ್ಲಿ “ಉಡುಪಿ ಕೃಷ್ಣ , ಮುರಳಿ ಗಾನ ಲೋಲ… ಜಗದೋಧಾರಕ ನಮ್ಮ ಮುದ್ದು….” ಈ ಪಲ್ಲವಿಯನ್ನು ಅನುಲೋಮ, ಪ್ರತಿ ಲೋಮ ಕ್ರಮದಂತೆ ಹಾಡಿದ ಗಾಯಕಿ ಮುಂದೆ, ತಾಳದ ಚೌಕಟ್ಟಿನೊಳಗೆ ಪ್ರತಿಯೊಂದು ಸೊಲ್ಲನ್ನು ನಾಲ್ಕು ಕಾಲಗಳಲ್ಲಿ ಸುಲಲಿತವಾಗಿ ಹಾಡಿ ಸಭಿಕರ ಮುಕ್ತ ಪ್ರಶಂಸೆಯನ್ನು ಪಡೆದರು. ಈ ಸಂದರ್ಭಗಳಲ್ಲೂ ಗಾಯನಕ್ಕೆ ಪೂರಕವಾಗಿ ಪಿಟೀಲು ನುಡಿಸುತ್ತ, ಎಲ್ಲಿಯೂ ಅತಿಕ್ರಮಿಸದೆ, ವೇದಿಕೆಯ ಶಿಷ್ಟಾಚಾರವನ್ನು ಕಾದುಕೊಂಡು, ಕಚೇರಿಯ ಒಟ್ಟಂದವನ್ನು ಹೆಚ್ಚಿಸಿದ ವಿದುಷಿ ಕುಮಾರಿ ತನ್ಮಯಿ ಉಪ್ಪಂಗಳ ಅಭಿನಂದನಾರ್ಹರು.

ಗಾಯಕಿ ಹಾಡುವ ಸಂಗತಿಗಳು, ಮುಕ್ತಾಯ ವಿನ್ಯಾಸಗಳನ್ನು ಮುಂದಾಗಿ ಅರಿತವರಂತೆ ಹದವಾಗಿ ಮೃದಂಗ ನುಡಿಸಿದ ವಿದ್ವಾನ್ ಶ್ರೀ ಸುನಾದಕೃಷ್ಣ ಅವರು ಮುಂದೆ ತನಿ ಆವರ್ತನವನ್ನೂ ಅಷ್ಟೇ ದಕ್ಷತೆಯಿಂದ ನಿರ್ವಹಿಸಿದರು. ಹಮೀರ್ ಕಲ್ಯಾಣಿ ತಿಲ್ಲಾನದೊಂದಿಗೆ ಕಚೇರಿ ಯಶಸ್ವಿಯಾಗಿ ಸಂಪನ್ನ ಗೊಂಡಿತು. ಉಜ್ವಲ ಭವಿಷ್ಯವನ್ನು ಹೊಂದಿರುವ ಯುವ ಕಲಾವಿದರ ತಂಡ ನೀಡಿದ ಇಂದಿನ ಕಛೇರಿ ರಸಿಕರ ಮನದಲ್ಲಿ ಕೆಲಕಾಲ ಉಳಿಯಬಲ್ಲದು.
– ಸರೋಜಾ ಆರ್. ಆಚಾರ್ಯ ಉಡುಪಿ
