ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಮೈಸೂರು ಅಸೋಸಿಯೇಷನ್ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 14 ಮತ್ತು 15 ಮಾರ್ಚ್ 2026ರಂದು ‘ಮೈಸೂರು ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮ – 2026’ವನ್ನು ಮುಂಬಯಿ ಮಾತುಂಗ, ಭಾವುದಾಜಿ ರಸ್ತೆ, 393 ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರು, ಖ್ಯಾತ ಸಂಶೋಧಕರಾದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಇವರು ಉಪನ್ಯಾಸಕರಾಗಿ ಆಗಮಿಸಲಿದ್ದಾರೆ. ದಿನಾಂಕ 14 ಮಾರ್ಚ್ 2026ರಂದು ಸಂಜೆ 5-00 ಗಂಟೆಗೆ ‘ಪುರಂದರದಾಸರ ಇನ್ನೊಂದು ಮುಖ’ ಎಂಬ ವಿಷಯದ ಕುರಿತು ಮತ್ತು ದಿನಾಂಕ 15 ಮಾರ್ಚ್ 2026ರಂದು ಬೆಳಿಗ್ಗೆ 11-30 ಗಂಟೆಗೆ ‘ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ – ಒಂದು ತೌಲನಿಕ ಜಿಜ್ಞಾಸೆ’ ಎಂಬ ವಿಷಯದ ಕುರಿತು ಉಪನ್ಯಾಸಗಳನ್ನು ನೀಡಲಿದ್ದಾರೆ.
ಸಂವಾದ ಕಾರ್ಯಕ್ರಮದಲ್ಲಿ ಡಾ. ಕೆ. ರವೀಂದ್ರನಾಥ, ಡಾ. ಗುರುಪಾದ ಮರಿಗುದ್ದಿ, ಡಾ. ಎಸ್.ಕೆ. ಕೊಪ್ಪ ಇವರು ಭಾಗವಹಿಸಲಿದ್ದಾರೆ.
ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಜಿ.ಎನ್. ಉಪಾಧ್ಯ ಹಾಗೂ ಮೈಸೂರು ಅಸೋಸಿಯೇಷನ್ನಿನ ಗೌರವ ಕಾರ್ಯದರ್ಶಿ ಡಾ. ಗಣಪತಿ ಶಂಕರಲಿಂಗ ಇವರು ವಿನಂತಿಸಿಕೊಂಡಿದ್ದಾರೆ.
ಮೈಸೂರು ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ : ಮೈಸೂರು ಅಸೋಸಿಯೇಷನ್ ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದುಕೊಂಡು ಬರುತ್ತಿರುವ ಮೈಸೂರು ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆಗೆ ಸುದೀರ್ಘವಾದ ಇತಿಹಾಸವಿದೆ. ನಾಡಿನ ನಾಮಾಂಕಿತ ಸಾಹಿತಿಗಳು, ವಿದ್ವಾಂಸರು, ಕಲಾವಿದರು, ಚಿಂತಕರು, ಲೇಖಕರು ಈ ಮಾಲಿಕೆಯಲ್ಲಿ ಉಪನ್ಯಾಸ ನೀಡಿದ್ದಾರೆಂಬುದು ಉಲ್ಲೇಖನೀಯ ಅಂಶ. ಇಲ್ಲಿ ನೀಡಲಾದ ಉಪನ್ಯಾಸಗಳು ಕೃತಿ ರೂಪದಲ್ಲಿ ಬೇರೆ ಬೇರೆ ಅಭಿನಂದನಾ ಗ್ರಂಥ, ಸಂಶೋಧನ ಗ್ರಂಥಗಳಲ್ಲೂ ಬೆಳಕು ಕಂಡಿವೆ.
ಖ್ಯಾತ ಸಾಹಿತಿ ಡಾ. ಶಿವರಾಮ ಕಾರಂತ, ಕುರ್ತುಕೋಟಿ, ಕಂಬಾರ, ಜಿ.ಎಸ್.ಎಸ್., ಜಯಂತ ಕಾಯ್ಕಿಣಿ, ಜಸ್ಟೀಸ್ ಬಿ.ಎನ್. ಶ್ರೀಕೃಷ್ಣ, ಡಾ. ಟಿ.ಎಸ್. ಸತ್ಯವತಿ, ಡಾ. ಪ್ರಭಾಕರ ಜೋಶಿ ಇವರವರೆಗೆ ಈ ಮಾಲಿಕೆ ನಡೆದು ಬಂದಿದೆ. ನಾಲ್ಕು ದಶಕಗಳ ಹಿನ್ನೆಲೆಯಿರುವ ಈ ದತ್ತಿ ಮಾಲಿಕೆ ಮುಂಬಯಿ ವಿಶ್ವವಿದ್ಯಾಲಯದ ಹಳೆಯ ಕೆಲವೇ ಕೆಲವು ದತ್ತಿ ನಿಧಿಗಳಲ್ಲಿ ಒಂದಾಗಿದೆ ಎಂಬುದು ಹೆಮ್ಮೆಯ ಸಂಗತಿ. ಮೈಸೂರು ಅಸೋಸಿಯೇಷನ್ ಕಾಲಕಾಲಕ್ಕೆ ಈ ದತ್ತಿ ನಿಧಿಗೆ ದೇಣಿಗೆಯನ್ನೂ ನೀಡುತ್ತಾ ಬಂದಿದೆ. ಪ್ರತೀವರ್ಷ ಎರಡು ದಿನಗಳ ಕಾಲ ನಡೆಯುವ ಈ ಉಪನ್ಯಾಸ ಕಾರ್ಯಕ್ರಮ ಮುಂಬಯಿ ಕನ್ನಡಿಗರ ಗಮನ ಸೆಳೆದಿದೆ. ಈ ಬಾರಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಇವರು ಉಪನ್ಯಾಸವನ್ನು ನೀಡಲಿದ್ದಾರೆ.
ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಇವರು ವಿಜಯಪುರದ ಕನ್ನಡ ಇತಿಹಾಸಕಾರರು, ದಾಸ ಸಾಹಿತ್ಯದ ಕುರಿತು ವ್ಯಾಪಕ ಸಂಶೋಧನೆ ಸೇರಿದಂತೆ ಸಂಶೋಧನ ವಿದ್ವಾಂಸರೂ ಆಗಿದ್ದಾರೆ. ಇವರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು, ಅವುಗಳಲ್ಲಿ ಕನಿಷ್ಠ 14 ಪುಸ್ತಕಗಳು ದಾಸ ಸಾಹಿತ್ಯದ ಕುರಿತಾಗಿವೆ. ದಾಸ ಸಾಹಿತ್ಯದ ಕುರಿತಾದ ಇವರ ಸಂಶೋಧನೆಗೆ ಮನ್ನಣೆಯಾಗಿ ‘ಕನಕಶ್ರೀ ಪ್ರಶಸ್ತಿ’ಯನ್ನು ಪಡೆದಿದ್ದಾರೆ. 2021ರಲ್ಲಿ ಸಾಹಿತ್ಯ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ. ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಇವರು ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ, ಬಿಜಾಪುರದ ಡಾ. ಪಿ.ಜಿ. ಹಳಕಟ್ಟಿ ಸಂಶೋಧನ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

