ಮಂಗಳೂರು : ಸಂಗೀತ ಪರಿಷತ್ ಮಂಗಳೂರು (ರಿ.) ಆಶ್ರಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ‘ನಾದಾಲಯ’ ಗೃಹ ಸಂಗೀತ ಕಾರ್ಯಕ್ರಮವನ್ನು ದಿನಾಂಕ 10 ಮೇ 2026ರ ಭಾನುವಾರದಂದು ಮಂಗಳೂರಿನ ಬಲ್ಲಾಳ್ ಭಾಗ್ ಮಣ್ಣಗುಡ್ಡೆ ರಸ್ತೆಯಲ್ಲಿ ಸಂಜೀವ ಶೆಟ್ಟಿ ಮಳಿಗೆಯ ಮುಂಭಾಗದಲ್ಲಿರುವ ಇನ್ ಲ್ಯಾಂಡ್ ಎಕ್ಲೋನ್ ವಸತಿ ಸಮುಚ್ಚಯದ 303ನೇ ಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ 4-00 ಗಂಟೆಗೆ ಸರಿಯಾಗಿ ಮುಖ್ಯ ಅತಿಥಿಗಳಾದ ಕೆ.ಎಂ.ಸಿ. ಮಂಗಳೂರಿನ ನ್ಯುರೋಲಾಜಿ ಫ್ರೊಫೆಸರ್ ಡಾ. ಶಿವಾನಂದ ಪೈ ಇವರ ಉಪಸ್ಥಿತಿಯಲ್ಲಿ ನಾದ ಸರಸ್ವತಿ ಸಂಗೀತ ವಿದ್ಯಾಲಯದ ನಿರ್ದೇಶಕಿ ವಿದುಷಿ ಯು. ಸತ್ಯವತಿ ಮುಡಂಬಡಿತ್ತಾಯ ಇವರಿಂದ ದೀಪ ಪ್ರಜ್ವಲನೆ ನೆರವೇರಲಿದೆ.
ಸಂಜೆ 4-15ಕ್ಕೆ ಮುಂಬೈನ ಕುಮಾರಿ ಕಾವ್ಯಾ ಕಾರಂತ್ ಇವರ ಹಾಡುಗಾರಿಕೆ ಕಛೇರಿಯು ತನ್ಮಯೀ ಉಪ್ಪಂಗಳ ಪಿಟೀಲು ಹಾಗೂ ಸುಧೀಕ್ಷಾ ಆರ್. ಸುರತ್ಕಲ್ ಇವರ ಮೃದಂಗ ಸಹಕಾರದೊಂದಿಗೆ ನಡೆಯಲಿದೆ.
4-45ಕ್ಕೆ ಪ್ರಧಾನ ಕಛೇರಿ ಮಂಗಳೂರಿನ ಶ್ರೀಮತಿ ಶ್ರೇಯಾ ಕೊಳತ್ತಾಯ ಇವರಿಂದ ಹಾಡುಗಾರಿಕೆ. ಇವರಿಗೆ ತನ್ಮಯೀ ಉಪ್ಪಂಗಳ ಪಿಟೀಲು, ಜಿ.ಎನ್. ಕೃಷ್ಣಪವನ್ ಕುಮಾರ್ ಮೃದಂಗ ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ.
ವಿದುಷಿ ವೀಣಾ ಶಾಸ್ತ್ರಿ ಹಾಗೂ ಅಡ್ವೊಕೇಟ್ ಗಂಗಾಧರ ಶಾಸ್ತ್ರಿಯವರ ಆತಿಥ್ಯದಲ್ಲಿ ನಡೆಯುವ ಈ ಗೃಹ ಕಛೇರಿಗೆ ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶ ಎಂದು ಸಂಘಟನೆಯವರು ತಿಳಿಸಿದ್ದಾರೆ.

