ಮಂಗಳೂರು : ಸಂಗೀತ ಪರಿಷತ್ ಮಂಗಳೂರು (ರಿ) ಆಶ್ರಯದಲ್ಲಿ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಆ್ಯಂಡ್ ಕಲ್ಚರಲ್ ಟ್ರಸ್ಟ್ (ರಿ.) ಮಂಗಳೂರು ಸಹಯೋಗದೊಂದಿಗೆ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ‘ನಾದಾಲಯ’ ಗೃಹ ಸಂಗೀತ ಕಛೇರಿ ಕಾರ್ಯಕ್ರಮವನ್ನು ದಿನಾಂಕ 28 ಮಾರ್ಚ್ 2026ರ ಶನಿವಾರದಂದು ಮಂಗಳೂರಿನ ಲಾಲ್ ಭಾಗ್ ನೆಹರೂ ಎವೆನ್ಯೂ ಕ್ರಾಸ್ ರೋಡ್ ಸ್ಕೌಟ್ಸ್ ಗೈಡ್ಸ್ ಭವನದ ಬಳಿಯಿರುವ ಹಿಂದಿ ಪ್ರಚಾರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ 4-00 ಗಂಟೆಗೆ ಕುಮಾರಿ ಐ. ಅನಘ ರಾವ್ ಸುರತ್ಕಲ್ ಇವರ ಹಾಡುಗಾರಿಕೆ ಕಛೇರಿಯು ಮಂಗಳೂರಿನ ಗೌತಮ್ ಭಟ್ ಪಿ.ಜಿ. ಹಾಗೂ ಸುರತ್ಕಲ್ ಕುಮಾರಿ ಸುಧೀಕ್ಷಾ ಆರ್. ಇವರ ಮೃದಂಗ ಸಹಕಾರದೊಂದಿಗೆ ನಡೆಯಲಿದೆ.
ಗಂಟೆ 4-30ಕ್ಕೆ ನಿವೃತ್ತ ಶಿಕ್ಷಕರಾದ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಇವರು ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಲಿದ್ದು, ಯಕ್ಷಗಾನ ಚೆಂಡೆ ಹಾಗೂ ಮದ್ದಲೆ ವಾದಕರೂ, ಬರಹಗಾರರೂ ಆಗಿರುವ ಕೃಷ್ಣಪ್ರಕಾಶ್ ಉಳಿತ್ತಾಯ ಇವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು.
ಗಂಟೆ 4-45ಕ್ಕೆ ಪ್ರಧಾನ ಕಛೇರಿಯಲ್ಲಿ ಉಡುಪಿಯ ಗಾರ್ಗಿ ಎನ್. ಶಬರಾಯ ಇವರಿಂದ ಹಾಡುಗಾರಿಕೆ. ಇವರಿಗೆ ಮಂಗಳೂರಿನ ಗೌತಮ್ ಭಟ್ ಪಿ.ಜಿ. ಇವರು ಪಿಟೀಲು ಮತ್ತು ಶೃಂಗೇರಿ ಪನ್ನಗ ಶರ್ಮನ್ ಇವರು ಮೃದಂಗ ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ.
ಮಂಗಳೂರಿನ ಡಾ. ಭ್ರಮರಿ ಶಿವಪ್ರಕಾಶ್ ಇವರ ಆತಿಥ್ಯದಲ್ಲಿ ನಡೆಯುವ ಈ ಗೃಹ ಕಛೇರಿಗೆ ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶ ಎಂದು ಸಂಘಟನೆಯವರು ತಿಳಿಸಿದ್ದಾರೆ.

