ಮಂಗಳೂರು : ಸಹೃದಯೀ ಮನಸ್ಸುಗಳು ಸೇರುವ ಮನೆಗಳಲ್ಲಿ ಸಂಗೀತ ಕಛೇರಿಗಳನ್ನು ಆಯೋಜಿಸಿ ಶಾಸ್ತ್ರೀಯ ಸಂಗೀತದ ಮೆರುಗನ್ನು ಮನೆ-ಮನಗಳಿಗೆ ಪಸರಿಸುವ ಕಲಾಚಟುವಟಿಕೆಗಳನ್ನು ನಾಡಿನ ವಿವಿಧ ಸಂಸ್ಥೆಗಳು ಹಲವಾರು ವರುಷಗಳಿಂದ ಆಯೋಜಿಸಿಕೊಂಡು ಬಂದಿವೆ. ಅಂತಹ ಸಂಸ್ಥೆಗಳ ವೃಂದದಲ್ಲಿ ಮಂಗಳೂರಿನ ಹಿರಿಯ ಕಲಾಸಂಸ್ಥೆ ‘ಸಂಗೀತ ಪರಿಷತ್ (ರಿ.)’ ಕೂಡ ಸೇರಿದೆ.
2026 ಜನವರಿಯಿಂದ ಆರಂಭಿಸಿದ ಈ ಸಂಸ್ಥೆಯ ‘ನಾದಾಲಯ’ ಗೃಹಸಂಗೀತ ಕಛೇರಿ ಸರಣಿಯ ಮೂರನೇ ಕಾರ್ಯಕ್ರಮವು ತುಸು ಭಿನ್ನವಾಗಿ ದಿನಾಂಕ 28 ಮಾರ್ಚ್ 2026ರ ಶನಿವಾರದಂದು ಮಂಗಳೂರಿನ ಲಾಲ್ ಬಾಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟಿನ ಸಹಯೋಗದಲ್ಲಿ ಹಿಂದಿ ಪ್ರಚಾರ ಭವನದ ವೇದಿಕೆಯಲ್ಲಿ ವಿದ್ಯಾರ್ಥಿಗಳು-ಹೆತ್ತವರು-ಸಹೃದಯರ ಸಮ್ಮುಖ ನಡೆಯಿತು.

ಆ ದಿನ ನಡೆದ ಶಾಸ್ತ್ರೀಯ ಸಂಗೀತದ ಕಿರಿಯ ವಿದ್ಯಾರ್ಥಿನಿ ಕುಮಾರಿ ಐ. ಅನಘ ರಾವ್ ಅವಳ ಕಿರು ಪ್ರಸ್ತುತಿ ಹಾಗೂ ಕರ್ನಾಟಕ ಕರಾವಳಿಯ ಯುವ ಪ್ರತಿಭೆ ಶ್ರೀಮತಿ ಗಾರ್ಗಿ ಎನ್. ಶಬರಾಯ ಅವರ ಪ್ರೌಢ ಕಛೇರಿಯನ್ನು ನಿವೃತ್ತ ಮುಖ್ಯ ಶಿಕ್ಷಕಿ, ರೂವಾರಿ.ಕಾಮ್ ಡಿಜಿಟಲ್ ಪತ್ರಿಕೆಯ ಸಂಪಾದಕಿ ಶ್ರೀಮತಿ ರತ್ನಾವತಿ ಜೆ. ಬೈಕಾಡಿಯವರು ದೀಪ ಬೆಳಗಿಸಿ ಚಾಲನೆ ನೀಡಿದರು. ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಚೆಂಡೆ-ಮದ್ದಳೆ ವಾದಕ, ಬರಹಗಾರ ಶ್ರೀ ಕೃಷ್ಣಪ್ರಕಾಶ್ ಉಳಿತ್ತಾಯರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ದೈವೀ ಕೃಪೆಯನ್ನು ಕೋರಿದ ಶ್ರೀಮತಿ ರತ್ನಾವತಿಯವರು ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿ ಆತ್ಮವಿಶ್ವಾಸ ಹಾಗೂ ನಿರಂತರ ಶ್ರಮದ ಮನೋಭಾವವನ್ನು ಬೆಳೆಸಿಕೊಳ್ಳಲು ಕರೆನೀಡಿದರು. ಮುಖ್ಯ ಅತಿಥಿಯ ನೆಲೆಯಲ್ಲಿ ವಿದ್ಯಾರ್ಥಿಗಳು, ಅವರ ಹೆತ್ತವರು, ನಾದನೃತ್ಯ ಹಾಗೂ ಸಂಗೀತ ಪರಿಷತ್ತಿನ ಸಹೃದಯೀ ಬಂಧುಗಳನ್ನುದ್ದೇಶಿಸಿ ಮಾತನಾಡಿ ಭಾರತೀಯ ಕಲಾಪರಂಪರೆಯಲ್ಲಿ ಬೆಳೆದು ಬಂದ ಸೌಂದರ್ಯಾತ್ಮಕ ಹಾಗೂ ತಾತ್ತ್ವಿಕ ವಿಚಾರಗಳನ್ನು ಸೂಕ್ಷ್ಮವಾಗಿ ಹಂಚಿಕೊಂಡರು.

ಕಾರ್ಯಕ್ರಮದ ಪ್ರಮುಖ ಅಂಗವಾಗಿ ನಡೆದ ಶ್ರೀಮತಿ ಗಾರ್ಗಿಯವರ ಗಾಯನ ಕಛೇರಿಯು ಕರ್ನಾಟಕ ಶಾಸ್ತ್ರೀಯ ಸಂಗೀತದ ಘನ ಚೌಕಟ್ಟಿನಲ್ಲಿ ಪ್ರಸ್ತುತಗೊಂಡು, ರಾಗಭಾವ ಹಾಗೂ ಸಾಹಿತ್ಯಭಾವದ ರಸದೌತಣವನ್ನು ಉಣಬಡಿಸುವಲ್ಲಿ ಸಫಲವಾಯಿತು. ಅಂದಿನ ಕಛೇರಿಗಾಗಿ ಶ್ರೀಮತಿ ಗಾರ್ಗಿಯವರು ಆರಿಸಿಕೊಂಡ ವಾಗಧೀಶ್ವರಿ, ತೋಡಿ, ಮಧ್ಯಮಾವತಿ ಮೊದಲಾದ ರಾಗಗಳು ಬುದ್ಧಿ-ಮನಸ್ಸುಗಳೆರಡನ್ನೂ ಅರಳಿಸುವಲ್ಲಿ ಸಫಲವಾದವು. ಶ್ರೀಮತಿ ಗಾರ್ಗಿಯವರಿಗೆ ಮೃದಂಗ ಪಕ್ಕವಾದ್ಯದಲ್ಲಿ ಸಹಕರಿಸಿದ ಶ್ರೀ ಪನ್ನಗ ಶರ್ಮನ್ ಹಾಗೂ ಪಿಟೀಲಿನಲ್ಲಿ ಸಹಕರಿಸಿದ ಚಿ. ಗೌತಮ್ ಭಟ್ ಪಿ.ಜಿ.ಯವರ ಕಲಾ ನೈಪುಣ್ಯತೆ ಸಂಪೂರ್ಣ ಕಛೇರಿಯು ಕಳೆಕಟ್ಟುವಲ್ಲಿ ಸಹಕರಿಸಿತು. ಇನ್ನುಳಿದಂತೆ, ಮೊದಲ ಕಿರು ಕಛೇರಿಗೆ ಮೃದಂಗ ಪಕ್ಕವಾದ್ಯದಲ್ಲಿ ಸಹಕರಿಸಿದ ಕುಮಾರಿ ಸುಧೀಕ್ಷ ಆರ್. ಅವರು ದಕ್ಷಿಣ ಕರಾವಳಿಯ ಅರಳುಪ್ರತಿಭೆಯಾಗಿ ಗುರುತಿಸಿಕೊಂಡರು.

ಶಾಸ್ತ್ರೀಯ ಭರತನಾಟ್ಯ ಶಿಕ್ಷಣವನ್ನು ಕಳೆದ 30 ವರುಷಗಳಿಂದ ಪರಿಪೂರ್ಣ ಆಯಾಮದಿಂದ ನೀಡುತ್ತಿರುವ ಡಾ. ಭ್ರಮರಿ ಶಿವಪ್ರಕಾಶರ ಆಶಯದಂತೆ, ನಾದಾಲಯ-ಗೃಹಸಂಗೀತ ಕಛೇರಿಯನ್ನು ನಾದನೃತ್ಯದ ನೃತ್ಯ ವಿದ್ಯಾರ್ಥಿನಿಯರು ಹಾಗೂ ಹೆತ್ತವರಿಗೋಸ್ಕರ ಆಯೋಜಿಸಲಾಯಿತು. ಶಾಸ್ತ್ರೀಯ ಭರತನಾಟ್ಯದ ಪ್ರಯೋಗ ಪದ್ಧತಿಯು ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಯೋಗ ಪದ್ಧತಿಯ ಆಧಾರದ ಮೇಲೆ ಬೆಳೆದಿರುವುದರಿಂದ ಶಾಸ್ತ್ರೀಯ ಸಂಗೀತದ ಪ್ರದರ್ಶನ ಮಾರ್ಗವನ್ನು ನೃತ್ಯ ವಿದ್ಯಾರ್ಥಿನಿಯರು ಪರಿಚಯಿಸಿಕೊಳ್ಳಬೇಕೆಂಬುದೇ ಈ ಆಯೋಜನೆ ಹಾಗೂ ಸಹಯೋಗದ ಮೂಲ ಉದ್ದೇಶವಾಗಿತ್ತು. ಇವರೊಂದಿಗೆ ನಾದನೃತ್ಯ ಹಾಗೂ ಸಂಗೀತ ಪರಿಷತ್ ಸಂಸ್ಥೆಗಳ ಸಹೃದಯೀ ಬಂಧುಗಳು ಕಾರ್ಯಕ್ರಮವನ್ನು ವೀಕ್ಷಿಸಿ ಆಸ್ವಾದಿಸಿದರು. ಕರ್ನಾಟಕದ ಘನ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಂಶಿಕ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು.
