ಬೆಂಗಳೂರು : ರಾಜ್ಯಾದ್ಯಂತ ಸಕ್ರಿಯವಾಗಿರುವ ಸಂಗೀತ-ನೃತ್ಯ ಕಲಾವಿದರ ಪರಿಚಯಾತ್ಮಕ ಪುಸ್ತಕ ಹೊರತರಲು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನಿರ್ಧರಿಸಿದೆ. ಈ ವಿಷಯ ತಿಳಿಸಿದ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ, ಬಹುವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಭರತನಾಟ್ಯ, ಕಥಾಕೀರ್ತನ ಮತ್ತು ಗಮಕ ಪ್ರಕಾರಗಳಲ್ಲಿ ಕಲಾಸೇವೆಯಲ್ಲಿ ತೊಡಗಿರುವ ಹಿರಿಯ ಮತ್ತು ಕಿರಿಯ ಕಲಾವಿದರ ಪರಿಚಯವನ್ನು ‘ನಮ್ಮ ಕಲಾವಿದರು’ ಶೀರ್ಷಿಕೆಯಡಿ ಪುಸ್ತಕ ರೂಪದಲ್ಲಿ ಹೊರತರಲಾಗುವುದು.
‘ನಮ್ಮ ಕಲಾವಿದರು’ ಶೀರ್ಷಿಕೆಯಡಿ ಸಂಗ್ರಹಿಸಲಾಗುವ ಎಲ್ಲಾ ಕಲಾಪ್ರಕಾರಗಳ ಕಲಾವಿದರ ಸಮಗ್ರ ಮಾಹಿತಿಯನ್ನು ಡಿಜಿಟಲೀಕರಣ ಮಾಡಿ ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಆಳವಡಿಸಲಾಗುವುದು. ರಾಜ್ಯದ ಎಲ್ಲೆಡೆ ಕಲಾಸೇವೆ ಮಾಡುತ್ತಿರುವ ಕಲಾವಿದರು ತಮ್ಮ ಸ್ವವಿವರಗಳನ್ನು ಅಕಾಡೆಮಿಯ ವೆಬ್ ಸೈಟ್ ageetanrityaacademykarnataka.gov.in ಅಲ್ಲಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಕಳಿಸಬೇಕು ಎಂದು ಕೋರಿದ್ದಾರೆ.
ಕಲಾವಿದರು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಂಗೀತಕ್ಕೆ ಸಂಬಂಧಿಸಿದಂತೆ ಪಿ. ಶ್ರೀನಿವಾಸಮೂರ್ತಿ (9945194569), ಹಿಂದೂಸ್ತಾನಿ ಸಂಗೀತಕ್ಕೆ ನಿರಂಜನಮೂರ್ತಿ (8277766109), ನೃತ್ಯಕ್ಕಾಗಿ ಸುಗ್ಗನಹಳ್ಳಿ ಷಡಕ್ಷರಿ (9844349464), ಸುಗಮ ಸಂಗೀತಕ್ಕೆ ಸಂಬಂಧಿಸಿದಂತೆ ಆನಂದ ಮಾದಲಗೆರೆ (9742116467) ಮತ್ತು ಕಥಾ ಕೀರ್ತನ ಮತ್ತು ಗಮಕಕ್ಕೆ ಸಂಬಂಧಿಸಿದಂತೆ ಎಂ.ಆರ್. ಸತ್ಯನಾರಾಯಣ (9243412585) ಇವರನ್ನು ಸಂಪರ್ಕಿಸಬಹುದು.