ಮಂಗಳೂರು : ಮಂಗಳೂರಿನ ಇಂಟ್ಯಾಕ್ ಘಟಕ, ಆರ್ಟ್ ಕೆನರಾ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಗಿಳಿ ವಿಂಡು ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಂಗಳೂರಿನ ಕೊಡಿಯಾಲಗುತ್ತು ಕಲಾ ಮತ್ತು ಸಾಂಸ್ಕ್ರತಿಕ ಕೇಂದ್ರದಲ್ಲಿ ದಿನಾಂಕ 23 ಮಾರ್ಚ್ 2026ರಂದು ರಾಷ್ಟ್ರಕವಿ ಎಂ. ಗೋವಿಂದ ಪೈ ಜನ್ಮದಿನದ ನೆನಪು ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ “ಸಾಹಿತ್ಯ ಸೃಷ್ಟಿಯ ಮೂಲಕ ನಾಡು ನುಡಿಗಳನ್ನು ಕಟ್ಟಿದ ಹಿರಿಯ ಸಾಹಿತಿಗಳನ್ನು ಅಭ್ಯಾಸ ಮಾಡಬೇಕಾದ ಹಾಗೂ ಮರು ನೆನಪು ಮಾಡಬೇಕಾದ ಸಾಂಸ್ಕೃತಿಕ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ರಾಷ್ಟ್ರಕವಿ ಎಂ. ಗೋವಿಂದ ಪೈಯವರು ಕವಿತೆ, ನಾಟಕ ಮತ್ತು ಸಂಶೋಧನಾ ಬರಹಗಳ ಮೂಲಕ ಸ್ಥಳೀಯತೆ, ಅನನ್ಯತೆಯ ಹುಡುಕಾಟದೊಂದಿಗೆ ವಿಶ್ವಾತ್ಮಕತೆಯ ನೆಲೆಗಳನ್ನು ತೆರೆದಿಟ್ಟರು. ಪ್ರಾಸದ ಕ್ರಮವನ್ನು ತೊರೆದು ಕವಿತೆಗಳ ರಚನೆ, ಸಾನೆಟ್ ಗಳ ರಚನೆಗಳ ಮೂಲಕ ಕನ್ನಡಕ್ಕೆ ಹೊಸತನವನ್ನು ತಂದರು. ಯುದ್ಧ ಮತ್ತು ಮತೀಯ ರಾಜಕಾರಣದ ಆಧುನಿಕ ಸಂದರ್ಭದಲ್ಲಿ ಮಾನವೀಯತೆ, ಸಮದರ್ಶಿತ್ವ, ಸಾಮಾಜಿಕ ಸಾಮರಸ್ಯದ ಪೈಯವರ ಕವಿತೆಗಳು ಮುಖ್ಯವಾಗುತ್ತವೆ. ‘ಯೇಸು ಕೃಷ್ಣ’ದಂತಹ ಕವಿತೆಗಳು, ಯೇಸುವಿನ ಕೊನೆಯ ದಿವಸವನ್ನು ಚಿತ್ರಿಸುವ ಗೊಲ್ಗೊಥ, ಬುದ್ಧನ ಕೊನೆಯ ದಿನದ ಚಿತ್ರಣ ವಿರುವ ವೈಶಾಖಿ, ಕೃಷ್ಣನ ಕೊನೆಯ ದಿನವನ್ನು ಚಿತ್ರಿಸುವ ಪ್ರಭಾಸ, ಗಾಂಧೀಜಿಯವರ ಅಂತಿಮ ದಿವಸದ ಚಿತ್ರಣದ ‘ದೆಹಲಿ’ ಕೃತಿಗಳ ಮೂಲಕ ಮಹಾತ್ಮರ ಬಾಳಿನ ಶ್ರೇಷ್ಠತೆಯನ್ನು ನಿರೂಪಿಸುತ್ತಾರೆ” ಎಂದು ನುಡಿದರು.

ಕೃಷ್ಣಮೂರ್ತಿ ಚಿತ್ರಾಪುರ ಪ್ರಾಸ್ತಾವಿಕವಾಗಿ ಮಾತನಾಡಿ “ಸಂಸ್ಕೃತಿ ಚಿಂತನೆ, ವಿಮರ್ಶೆ, ಕಾವ್ಯ, ನಾಟಕ, ಅನುವಾದ, ಸಂಶೋಧನಾ ಲೇಖನಗಳು ಮತ್ತು ಕಿರಿಯ ಸಾಹಿತಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹಗಳಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಎಂ. ಗೋವಿಂದ ಪೈಯವರು ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದರು.

ಹಿರಿಯ ಸಂಶೋದಕರಾದ ವಿಲ್ಲಿ ಡಿ.ಆರ್. ಸಿಲ್ವ, ಡಾ. ಸತ್ಯನಾರಾಯಣ ಮಲ್ಲಿಪಟ್ಣ, ಮಧುಸೂದನ್ ಕುಮಾರ್, ಡ.ಆರ್. ನರಸಿಂಹ ಮೂರ್ತಿ, ಡಾ. ಇಂದಿರಾ ಹೆಗ್ಗಡೆ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು. ನೇಮಿರಾಜ ಶೆಟ್ಟಿ ಸ್ವಾಗತಿಸಿ, ರಾಜೇಂದ್ರ ಕೇದಿಗೆ ವಂದಿಸಿ, ಡಾ. ಪ್ರಸನ್ನ ರೈ ಕನ್ನಡ ಗೀತೆಗಳನ್ನು ಹಾಡಿದರು.
