ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ (ಸ್ವಾಯತ್ತ) ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಕೇಂದ್ರವು ಕೊಡಮಾಡುವ 2026ನೇ ಸಾಲಿನ ‘ನಿರಂಜನ ಪ್ರಶಸ್ತಿ’ಗೆ ಪ್ರೊ. ನರೇಂದ್ರ ರೈ ದೇರ್ಲ ಇವರನ್ನು ಹಾಗೂ 2026ನೇ ಸಾಲಿನ ‘ಶಂಕರ ಸಾಹಿತ್ಯ ಪ್ರಶಸ್ತಿ’ಗೆ ಜಗದೀಶ ಶರ್ಮ ಸಂಪ ಇವರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 02 ಮೇ 2026ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.
ಡಾ. ನರೇಂದ್ರ ರೈ ದೇರ್ಲ : ದೇರ್ಲರು ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಮಾಡಾವುನಲ್ಲಿ ವಾಸವಾಗಿದ್ದು, ಕನ್ನಡದ ಪ್ರಸಿದ್ಧ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಹಾಗೂ ಪರಿಸರ ಮತ್ತು ಕೃಷಿ ಚಿಂತಕರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಬೇಟೆ, ಪರಿಕಲ್ಪನೆ ಮತ್ತು ಧೋರಣೆ ಎನ್ನುವ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪದವಿ ಪಡೆದಿದ್ದು, ಇವರು ಪರಿಸರ ಕಾಳಜಿಯುಳ್ಳ ಬರಹಗಾರರು, ವಿವಿಧ ಕನ್ನಡ ಪತ್ರಿಕೆಗಳಲ್ಲಿ ಕೃಷಿ ಮತ್ತು ಪರಿಸರಕ್ಕೆ ಸಂಬಂಧಿಸಿದ ಲೇಖನಗಳನ್ನು ಹಾಗೂ ಅಂಕಣಗಳನ್ನು ಬರೆಯುತ್ತಿದ್ದಾರೆ.
ಜಗದೀಶ ಶರ್ಮ ಸಂಪ : ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಸಂಸ್ಕೃತದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಗೋಕರ್ಣದ ಶ್ರೀ ಮೇಧಾ ದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣ ಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿರುವ ಇವರು, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾಪಾಠ ಶಾಲೆಯಲ್ಲಿ ಅಲಂಕಾರ ವಿದ್ವತ್ ವಿದ್ಯಾಭ್ಯಾಸ ಮಾಡಿದ್ದಾರೆ. ಇವರು ಅದೈತ ವೇದಾಂತ, ನ್ಯಾಯ-ವೈಶೇಷಿಕ, ಸಾಂಖ್ಯ-ಯೋಗ ತತ್ವಶಾಸ್ತ್ರಗಳಲ್ಲಿ ಆಳವಾದ ಅಧ್ಯಯನವನ್ನು ನಡೆಸಿದ್ದಾರೆ. ಪರಿಣಿತ ವಾಗ್ಮಿಯಾಗಿರುವ ಅವರು, ರಾಷ್ಟ್ರೀಯ ಮಟ್ಟದ ಸಂಸ್ಕೃತ ವಾಕ್ ಪ್ರತಿಯೋಗಿತಾದಲ್ಲಿ ಎರಡು ಬಾರಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಸಂಸ್ಕೃತ ಸಾಹಿತ್ಯ, ಭಾಷಾ ವಿಜ್ಞಾನ, ಯೋಗ, ಪುರಾಣ ಸಾಹಿತ್ಯ ಮತ್ತು ಪ್ರಾಚೀನ ಜ್ಞಾನ ಕ್ಷೇತ್ರಗಳಲ್ಲಿ ವಿಶಿಷ್ಟ ಪಾಂಡಿತ್ಯ ಹೊಂದಿರುವ ಜಗದೀಶ್ ಶರ್ಮಾ ಸಮೃದ್ಧ ಬರಹಗಾರರಾಗಿದ್ದಾರೆ. ಇವರು ‘ಹೊಸ ದಿಗಂತ’ದ ಅಂಕಣಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ, ಜ್ಞಾನ ವಿಜ್ಞಾನ ಅಧ್ಯಯನ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೇದ, ಉಪನಿಷತ್, ಗೀತಗಳ ಕುರಿತಾಗಿ ಖಚಿತವಾಗಿ ಮಾತನಾಡಬಲ್ಲರು. ಭಾರತೀಯ ತತ್ವಶಾಸ್ತ್ರ ಮತ್ತು ಭಾರತೀಯ ಜ್ಞಾನ ಪರಂಪರೆಗಳ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದಾರೆ.
