ಉಡುಪಿ : ಪರ್ಯಾಯ ಶ್ರೀ ಶೀರೂರು ಮಠ, ಶ್ರೀಕೃಷ್ಣ ಮಠ ಉಡುಪಿ ಇವರ ಆಶ್ರಯದಲ್ಲಿ ಅಮ್ಮುಂಜೆಯ ಶ್ರೀ ಭ್ರಾಮರೀ ನಾಟ್ಯಾಲಯ (ರಿ.) ಸಂಸ್ಥೆ ವತಿಯಿಂದ ‘ನೃತ್ಯ ಮಂಥನ-10’ ಕಾರ್ಯಕ್ರಮವು ದಿನಾಂಕ 19 ಏಪ್ರಿಲ್ 2026ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜರುಗಿತು.

ಪರ್ಯಾಯ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ ಹಿರಿಯ ನೃತ್ಯ ಗುರುಗಳಾದ ಶ್ರೀಮತಿ ಪ್ರತಿಭಾ ಎಲ್. ಸಾಮಗ ವಹಿಸಿದ್ದು, ಅತಿಥಿಗಳಾಗಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್, ಯಡಾಡಿ ಮತ್ಯಾಡಿ ಇದರ ಅಧ್ಯಕ್ಷರಾದ ಡಾ. ರಮೇಶ ಶೆಟ್ಟಿ, ನಾಟ್ಯಾಲಯದ ಗೌರವಾಧ್ಯಕ್ಷರಾದ ಶ್ರೀ ಕೆ. ಭಾಸ್ಕರ್ ಸೇರಿದಂತೆ ಗುರು ವಿದ್ವಾನ್ ಕೆ. ಭವಾನಿ ಶಂಕರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಲಾ ಸಾಧಕರಾದ ಹೆಜ್ಜೆ ಗೆಜ್ಜೆ ಮಣಿಪಾಲದ ನೃತ್ಯ ಗುರು ವಿದುಷಿ ಶ್ರೀಮತಿ ಯಶಾ ರಾಮಕೃಷ್ಣ, ಉಡುಪಿಯ ಕೊಳಲು ವಾದಕರಾದ ಶ್ರೀ ಕೆ. ಮುರಲೀಧರ್ ಉಡುಪಿ, ಸಂಗೀತ ಗುರುಗಳಾದ ಶ್ರೀಮತಿ ವಿನುತಾ ಆಚಾರ್ಯ ಇವರನ್ನು ಸಮ್ಮಾನಿಸಲಾಯಿತು, ನಾಟ್ಯಾಲಯದ ಪ್ರಗತಿಯಲ್ಲಿ ಸಹಕರಿಸಿದ ಪ್ರಸಾದನ ಕಲಾವಿದರಾದ ಶ್ರೀ ಆನಂದ ಅಂಚನ್ ಗುಜ್ಜರ್‌ಬೆಟ್ಟು ಇವರನ್ನು ಗೌರವಿಸಲಾಯಿತು.

ಸಂಸ್ಥೆಯ ಕಲಾವಿದರಿಂದ ಪ್ರಸ್ತುತಗೊಂಡ ನೃತ್ಯ ಪ್ರದರ್ಶನಕ್ಕೆ ವಿನೀತ್ ಕೇರಳ ಇವರ ಹಾಡುಗಾರಿಕೆಯಲ್ಲಿ, ವಿದ್ವಾನ್ ಬಾಲಚಂದ್ರ ಭಾಗವತ್ ಇವರು ಮೃದಂಗ, ಕೆ. ಮುರಳೀಧರ್ ಇವರು ಕೊಳಲು, ಸುಹಾಸ್ ಹೆಬ್ಬಾರ್ ಇವರು ರಿದಂ ಪ್ಯಾಡ್ ನಲ್ಲಿ ಸಹಕರಿಸಿದರು. ನಾಟ್ಯಾಲಯದ ನೃತ್ಯ ಗುರು ವಿದ್ವಾನ್ ಕೆ. ಭವಾನಿ ಶಂಕರ್ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿ, ಸುಬ್ರಹ್ಮಣ್ಯ ಆಚಾರ್ ವಂದಿಸಿ, ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

