ಉಡುಪಿ : ರಜತ ಸಂಭ್ರಮದಲ್ಲಿರುವ ಶ್ರೀ ಭ್ರಾಮರೀ ನಾಟ್ಯಾಲಯ (ರಿ.) ಅಮ್ಮುಂಜೆ ಉಡುಪಿ ಇದರ ವತಿಯಿಂದ ಪರ್ಯಾಯ ಶ್ರೀ ಶಿರೂರು ಮಠ, ಶ್ರೀ ಕೃಷ್ಣ ಮಠ ಉಡುಪಿ ಇವರ ಆಶ್ರಯದಲ್ಲಿ ‘ನೃತ್ಯ ಮಂಥನ-10’ ಕಾರ್ಯಕ್ರಮವನ್ನು ದಿನಾಂಕ 19 ಏಪ್ರಿಲ್ 2026ರಂದು ಸಂಜೆ 4-00 ಗಂಟೆಗೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ. ಭರತನಾಟ್ಯ ಕೂಚಿಪುಡಿ ಹಾಗೂ ಜಾನಪದ ನೃತ್ಯ ಕಾರ್ಯಕ್ರಮವನ್ನು
ಉಡುಪಿಯ ಪರ್ಯಾಯ ಶ್ರೀ ಶೀರೂರು ಮಠ, ಶ್ರೀಕೃಷ್ಣ ಮಠದ ಪರಮಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಆಶೀರ್ವಚನ ನೀಡಲಿದ್ದು, ಉಡುಪಿಯ ಹಿರಿಯ ನೃತ್ಯ ಗುರುಗಳಾದ ಶ್ರೀಮತಿ ವಿದುಷಿ ಪ್ರತಿಭಾ ಎಲ್ ಸಾಮಗ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಲಾ ಸಾಧಕರಾದ ಮಣಿಪಾಲದ ಹೆಜ್ಜೆ ಗೆಜ್ಜೆ ಇದರ ನಿರ್ದೇಶಕರಾದ ಗುರು ವಿದುಷಿ ಶ್ರೀಮತಿ ಯಶಾ ರಾಮಕೃಷ್ಣ, ಕೊಳಲು ವಾದಕರಾದ ಶ್ರೀ ಕೆ. ಮುರಲೀಧರ್ ಉಡುಪಿ ಮತ್ತು ಸಂಗೀತ ಗುರುಗಳಾದ ಶ್ರೀಮತಿ ವಿನುತಾ ಆಚಾರ್ಯ ಇವರಿಗೆ ಸಮ್ಮಾನ ಹಾಗೂ ನಾಟ್ಯಾಲಯದ ಬೆಳವಣಿಗೆಯಲ್ಲಿ ಸಹಕರಿಸಿದ ಶ್ರೀ ಹರೀಶ್ ಪುತ್ತೂರು, ರಿದಂ ಪ್ಯಾಡ್ ವಾದಕರು, ಶ್ರೀ ಆನಂದ ಅಂಚನ್ ಗುಜ್ಜರ್‌ಬೆಟ್ಟು, ಪ್ರಸಾದನ ಕಲಾವಿದರು, ಶ್ರೀ ಸುರೇಶ್ ಗುಜ್ಜರ್‌ಬೆಟ್ಟು, ಪ್ರಸಾದನ ಕಲಾವಿದರು ಇವರಿಗೆ ಗೌರವಾರ್ಪಣೆ ಮಾಡಲಾಗುವುದು. ವಿದ್ವಾನ್ ಕೆ. ಭವಾನಿ ಶಂಕರ್ ಇವರ ನೃತ್ಯ ನಿರ್ದೇಶನ ಮತ್ತು ನಟುವಾಂಗದಲ್ಲಿ ಪ್ರಸ್ತುತಗೊಳ್ಳುವ ಈ ಕಾರ್ಯಕ್ರಮಕ್ಕೆ ವಿನೀತ್ ಕೇರಳ ಇವರ ಹಾಡುಗಾರಿಕೆ, ವಿದ್ವಾನ್ ಬಾಲಚಂದ್ರ ಭಾಗವತ್ ಮೃದಂಗ, ಕೆ. ಮುರಳೀಧರ್ ಇವರು ಕೊಳಲು, ಸುಹಾಸ್ ಹೆಬ್ಬಾರ್ ರಿದಂ ಪ್ಯಾಡ್ ಮತ್ತು ಯೋಗೀಶ್ ಕೊಳಲಗಿರಿ ನಿರೂಪಣೆಯಲ್ಲಿ ಸಹಕರಿಸಲಿದ್ದಾರೆ. ಕಲಾಸಕ್ತ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುವ ವಿದ್ವಾನ್ ಕೆ. ಭವಾನಿ ಶಂಕರ್, ಶಿಷ್ಯಂದಿರು ಹಾಗೂ ವಿದ್ಯಾರ್ಥಿ ಪೋಷಕರು.

