ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಮತ್ತು ವಿದ್ಯಾರಣ್ಯ ಪದವಿಪೂರ್ವ ಕಾಲೇಜು ಸಂಯುಕ್ತವಾಗಿ ಏರ್ಪಡಿಸಿದ್ದ ಚೆನ್ನವೀರ ಕಣವಿ ಜನ್ಮ ದಿನೋತ್ಸವ ಕಾರ್ಯಕ್ರಮವು ದಿನಾಂಕ 30 ಜೂನ್ 2026ರಂದು ಮಹಾವಿದ್ಯಾಲಯ ಸಭಾ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಕೃಷ್ಣ ಕಟ್ಟಿ ಇವರು ಮಾತನಾಡಿ “ಚೆನ್ನವೀರ ಕಣವಿಯವರು ಹೊಸಗನ್ನಡ ಕಾವ್ಯದ ಎರಡನೇ ತಲೆಮಾರಿನ ಕವಿ. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು ಮತ್ತು ಮಾಸ್ತಿ ಮೊದಲನೆ ತಲೆಮಾರಿನ ಕವಿಗಳಾದರೆ, ಜಿ.ಎಸ್.ಎಸ್., ಕಣವಿ, ಕೆ.ಎಸ್.ಎನ್., ಅಡಿಗರು ಮೊದಲಾದವರು ಎರಡನೇ ತಲೆಮಾರಿನವರು. ಧಾರವಾಡದ ಸಂಸ್ಕೃತಿಯ ಗುಣವನ್ನು ತಮ್ಮ ಜೀವಾಳವನ್ನಾಗಿ ಮಾಡಿಕೊಂಡು ಕಾವ್ಯ ರಚನೆ ಮಾಡಿದವರು ಕಣವಿ. ಅವರ ಮಾತು ಕವಿತೆಯ ಸಾಲು ‘ಮೃದುವಚನ ಮೂಲೋಕ ಗೆಲ್ಲುವದು ತಿಳಿಯ’ ಎಂಬಂತೆ ಅವರ ಜೀವನ ಮತ್ತು ಕಾವ್ಯವಾಗಿತ್ತು. ನಿಸರ್ಗ ಪ್ರೀತಿ, ಸಾಂಸ್ಕ್ರತಿಕ ಕಾಳಜಿ, ಸಮಕಾಲಿನ ಪ್ರಜ್ಞೆ ಅವರ ಕಾವ್ಯಯಾನದಲ್ಲಿ ಎದ್ದು ಕಾಣುತ್ತವೆ. ಧಾರವಾಡದ ನಿಸರ್ಗವನ್ನು ಅತೀಯಾಗಿ ಪ್ರೀತಿಸಿ-ಅನುಭವಿಸಿ ರಚಿಸಿದ ಅವರ ಕವಿತೆಗಳನ್ನು ಅವರ ಎಲ್ಲ ಕವನ ಸಂಗ್ರಹಗಳಲ್ಲಿ ಕಾಣುತ್ತೇವೆ. ಅವರ ಕಾವ್ಯ ಜೀವನ ಅತ್ಯಂತ ಮೃದು ಸ್ವಭಾವದಿಂದ ಕೂಡಿತ್ತು. ಅವರ ಸಂಪರ್ಕಕ್ಕೆ ಬಂದವರಿಗೆ ಅವರ ಮೃದುತ್ವದ ಅನುಭವವಾಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಬೇಂದ್ರೆಯವರ ಮುನ್ನುಡಿ ಹಾಗೂ ಕಾವ್ಯ ಸಂಕಲನ ‘ಕಾವ್ಯಾಕ್ಷಿ’ ನಾಮಕರಣದೊಂದಿಗೆ ಪ್ರಕಟವಾಯಿತು. ಸುಮಾರು 20 ಕವನ ಸಂಕಲನಗಳನ್ನು ಕನ್ನಡ ಕಾವ್ಯ ಜಗತ್ತಿಗೆ ನೀಡಿದ್ದಾರೆ. ಅವರ ಜೀವಧ್ವನಿ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಮೂರು ದಶಕಗಳ ಕಾಲ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಅದಕ್ಕೊಂದು ಅಕ್ಯಾಡೆಮಿಕ್ ಶಿಸ್ತು ತಂದು ಕೊಟ್ಟವರು ಕವಿ ಕಣವಿ. ಮಕ್ಕಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರತಿ ನಿತ್ಯ ಕನಿಷ್ಠ ಒಂದು ಗಂಟೆಯಾದರು ಸಾಹಿತ್ಯದ ವಾಚನ ಮಾಡಬೇಕು. ಅದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಂವಹನಾ ಕೌಶಲ್ಯವನ್ನು ಅಭಿವೃದ್ದಿಗೊಳಿಸುತ್ತದೆ. ಮಕ್ಕಳು ಸಂಸ್ಕಾರವಂತರಾಗಲು ಸಾಹಿತ್ಯದ ಜೊತೆ ಗೆಳೆತನ ಮಾಡಬೇಕು. ನಿಮ್ಮ ಪಾಲಕರು ನಿಮಗಾಗಿ ನೀಡಿದ ಪಾಕೇಟ ಮನಿ ದುಡ್ಡಿನಲ್ಲಿ ನಿಮಗೆ ಆಸಕ್ತಿ ಇರುವ ಪುಸ್ತಕ ಖರೀದಿಸಿರಿ. ಮನೆಯಲ್ಲಿ ನಿಮ್ಮದೇ ಆದ ಒಂದು ಲೈಬ್ರರಿ ರೂಪಿಸಿಕೊಳ್ಳಿರಿ. ಓದು ನಿಮಗೆ ಒಂದು ಚಟವಾಗಿ ಬೆಳೆಯಲಿ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೆ.ಇ. ಬೋರ್ಡಿನ ಕಾರ್ಯದರ್ಶಿ ಶ್ರೀ ಡಿ.ಎಸ್. ರಾಜಪುರೋಹಿತರು ಕಣವಿಯವರು ಸಂಸ್ಥೆಯ ಜೊತೆಗಿನ ಒಡನಾಟವನ್ನು ಸ್ಮರಿಸಿದರು. ಅವರ ಸಾಹಿತ್ಯದ ಮಹತ್ವನ್ನು ತಿಳಿಸಿದರು. “ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಪ್ರಚುರಗೊಳಿಸುವ ಹಿನ್ನೆಲೆಯಲ್ಲಿ ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಾಹಿತಿಗಳ ಬದುಕು-ಬರಹ ಕಾರ್ಯಕ್ರಮಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳುತ್ತಿದೆ. ನಮ್ಮ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಮಹತ್ವವನ್ನು ಮಕ್ಕಳಿಗೆ ಕೊಟ್ಟು ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಾಗುವಂತೆ ಮಾಡುವದು ನಮ್ಮ ಉದ್ದೇಶ” ಎಂದು ಪ್ರಾಸ್ತಾವಿಕ ಮಾತಿನಲ್ಲಿ ಡಾ. ಶಶಿಧರ ನರೇಂದ್ರ ಹೇಳಿದರು.

“ಕಣವಿಯವರ ಸಾಹಿತ್ಯವು ಶರಣರ ವಚನಗಳು ಹಾಗೂ ಜನಪದ ಸಾಹಿತ್ಯದ ಪ್ರಭಾವದಲ್ಲಿ ಬೆಳೆದು ಬಂದಿತು. ಅವರ ಕವನಗಳನ್ನು ವಾಚಿಸುವದು ಹಾಗೂ ಹಾಡುವುದೇ ಒಂದು ಆನಂದ” ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯರಾದ ಡಾ. ಶರಣಮ್ಮ ಗೊರೇಬಾಳ ಹೇಳಿದರು.
ಕಣವಿಯವರ ಸೊಸೆ ಶ್ರೀಮತಿ ಮಂಜುಳಾ ಕಣವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಾವ್ಯ ವಾಚನ ಮತ್ತು ಗಾಯನ ಮಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ಉತ್ಸುಕತೆ ಎದ್ದು ಕಾಣುತ್ತಿತ್ತು. ಶ್ರೀ ರಾಜು ಪಾಟೀಲ ಕುಲಕರ್ಣಿ, ಸಮೀರ ಜೋಶಿ, ಡಾ. ಶ್ರೀಧರ ಕಟ್ಟಿ, ಡಾ. ಅರವಿಂದ ಯಾಳಗಿ, ಶ್ರೀ ರಮೇಶ ನಾಡಗೀರ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಾ. ಭರತ ನಾಯ್ಕ ಸ್ವಾಗತಿಸಿ, ಶ್ರೀಮತಿ ಶ್ವೇತಾ ನಾಯಕ್ ವಂದಿಸಿ ಮತ್ತು ಸವಿತಾ ಕುಸಗಲ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

