ಮಂಗಳೂರು : ರಂಗಸ್ಥಳ ಮಂಗಳೂರು (ರಿ.) ಇದರ 11ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳದ ‘ಪ್ರಚಂಡ ಲಂಕೇಶ್ವರ’ ಯಕ್ಷಗಾನ ಬಯಲಾಟ ಪ್ರದರ್ಶನವು ದಿನಾಂಕ 14 ಮಾರ್ಚ್ 2026ರಂದು ಸಂಜೆ 7-00 ಗಂಟೆಗೆ ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ನಡೆಯಲಿದೆ.
ಪುರಾಣಗಳ ಸಾರವನ್ನು ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಯಕ್ಷಗಾನ ಆಯೋಜಿಸಲಾಗಿದೆ. ರಾವಣನ ಜನನದಿಂದ ರಾವಣ ವಧೆಯವರೆಗಿನ ಸಮಗ್ರ ರಾವಣನ ಕಥೆಯನ್ನೊಳಗೊಂಡ ಪ್ರದರ್ಶನ ಇದಾಗಿದೆ. ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಪ್ರಸನ್ನ ಭಟ್ ಬಾಳ್ಕಲ್, ಸಂಗೀತದಲ್ಲಿ ಸತೀಶ್ ಪಟಗಾರ ಬ್ರಹ್ಮೂರು, ಮದ್ದಳೆಯಲ್ಲಿ ಶಶಾಂಕ ಆಚಾರ್ಯ ಕಿರಿಮಂಜೇಶ್ವರ ಹಾಗೂ ಅನಿರುದ್ಧ ಹೆಗಡೆ ವರ್ಗಾಸರ, ಚೆಂಡೆಯಲ್ಲಿ ಪ್ರಜ್ವಲ್ ಮುಂಡಾಡಿ ಮತ್ತು ನಯನ್ ಕುಮಾರ್ ನಿಟ್ಟೂರು, ಹಾಸ್ಯ ಪಾತ್ರದಲ್ಲಿ ರವೀಂದ್ರ ದೇವಾಡಿಗ ಕಮಲಶಿಲೆ ಮತ್ತು ಪುರಂದರ ಮೂಡ್ಕಣಿ, ಸ್ತ್ರೀ ಭೂಮಿಕೆಯಲ್ಲಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ನಾಗರಾಜ್ ಭಟ್ ಕುಂಕಿಪಾಲ, ಸಂತೋಷ ಕುಲಾಲ್ ಹೆಂಗವಳ್ಳಿ ಮತ್ತು ಪ್ರಥಮ್ ಆಚಾರ್ಯ ಹಾಗೂ ಪುರುಷ ಪಾತ್ರದಲ್ಲಿ ನೀಲ್ಕೋಡು ಶಂಕರ ಹೆಗಡೆ, ಕಾರ್ತಿಕ್ ಚಿಟ್ಟಾಣಿ, ಮಾಗೋಡು ಅಣ್ಣಪ್ಪ. ಚಂದ್ರಹಾಸ ಗೌಡ ಹೊಸಪಟ್ನ, ಸನ್ಮಯ್ ಭಟ್, ಕಾರ್ತಿಕ್ ಕಣ್ಣಿಮನೆ, ಪವನ್ ಹೆಗಡೆ ಸಾಣ್ಮನೆ, ಕೆ.ಜಿ. ಕಾರ್ತಿಕ್ ಮತ್ತು ಭಾಸ್ಕರ ಮರಾಠಿ ಸಹಕರಿಸಲಿದ್ದಾರೆ.
ತೆಂಕಿನ ನೆಲದಲ್ಲಿ ಬಡಗಿನ ಆಟ, ತೆಂಕಿನ ಕೂಟ ಹಾಗೂ ತೆಂಕುಬಡಗಿನ ಕೂಟವನ್ನು ಆಡಿಸಿ ಮೆಚ್ಚುಗೆಗೆ ಪಾತ್ರವಾಗಿದ್ದೇವೆ. ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು, ಮೂಡುಬಿದಿರೆ, ಬ್ರಹ್ಮಾವರ, ಸಾಸ್ತಾನಗಳಲ್ಲಿ ಯಕ್ಷಗಾನ ಆಟ ಕೂಟಗಳನ್ನು ಏರ್ಪಡಿಸಲಾಗಿದೆ. ಯಕ್ಷಗಾನಕ್ಕೆ ಕಾಲಮಿತಿ ಮಾಡಿರುವ ಕಾರಣದಿಂದ ವೀಕ್ಷಕರ ಸಂಖ್ಯೆ ಹೆಚ್ಚಳವಾಗಿದೆ. ಪ್ರದರ್ಶನದ ಕೊನೆಯವರೆಗೂ ಪ್ರೇಕ್ಷಕರು ಉಪಸ್ಥಿತರಿದ್ದು ಬೆಂಬಲಿಸುತ್ತಾರೆ ಎಂದು ರಂಗಸ್ಥಳ ಮಂಗಳೂರು ಅಧ್ಯಕ್ಷ ದಿನೇಶ್ ಪೈ ತಿಳಿಸಿದ್ದಾರೆ.

