ಬೆಂಗಳೂರು : ನಾಡಿನ ಪ್ರಸಿದ್ಧ ಚುಟುಕು ಸಾಹಿತಿ ಎಚ್. ಡುಂಡಿರಾಜ್ ರವರ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕವು ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗ ತಂಡದಿಂದ ದಿನಾಂಕ 30 ಮೇ 2026 ಶನಿವಾರ ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಯಶಸ್ವಿ 117ನೇ ಪ್ರದರ್ಶನ ಕಾಣುತ್ತಿದೆ. ಅಶೋಕ್ ಬಿ. ನಿರ್ದೇಶನ ಮಾಡಿದ್ದು, ಹೆಚ್ಚಿನ ವಿವರಗಳಿಗಾಗಿ 9945977184, 9916863637 ಈ ನಂಬರ್ ಗೆ ಕರೆ ಮಾಡಬಹುದು. ಟಿಕೆಟ್ ಗಳು ಬುಕ್ ಮೈ ಶೋನಲ್ಲೂ ಲಭ್ಯವಿದೆ.
ನಾಟಕದ ಬಗ್ಗೆ : ಚುಟುಕು ಕವಿಯಾಗಿ ಹೆಸರು ಮಾಡಿರುವ ಪ್ರಸಿದ್ಧ ಲೇಖಕ ಡುಂಡಿರಾಜರ ಹಾಸ್ಯಪ್ರಜ್ಜ್ಞೆಯ ಎರಕದಲ್ಲಿ ಮೂಡಿಬಂದಿರುವ ಪುಕ್ಕಟೆ ಸಲಹೆ ಹಾಸ್ಯನಾಟಕವು ದಿನಂಪ್ರತಿ ಎಲ್ಲ ಟಿವಿಗಳಲ್ಲಿ ವಿಜೃಂಭಿಸುವ ಜ್ಯೋತಿಷಿಗಳ ಹಾವಳಿಯನ್ನು, ಅವರ ನಿಜಬಣ್ಣ, ಅವಾಂತರಗಳನ್ನು ಹಾಸ್ಯದ ಮೂಲಕ ನಾಟಕದಲ್ಲಿ ತೋರಿಸಲಾಗಿದೆ. ಕೈಯಲ್ಲಿ ಲ್ಯಾಪ್ಟಾಪ್ ಹಿಡಿದು ರಂಗದ ಮೇಲೆ ಬಂದು ಕೂರುವ ಲ್ಯಾಪಾನಂದ ಟ್ಯಾಪಾನಂದ ಶಾಸ್ತ್ರಿ ರಾಜ್ಯದ ವಿವಿಧ ಊರುಗಳಿಂದ ತಮ್ಮ ಚಿತ್ರ ವಿಚಿತ್ರ ಸಮಸ್ಯೆಗಳಿಗೆ ಪರಿಹಾರ ಕೇಳಲು ಕರೆ ಮಾಡುವ ಜನರಿಗೆ ಕೊಡುವ ಉಚಿತ ಸಲಹೆಗಳು, ಡುಂಡಿರಾಜರ ಹಾಸ್ಯ ಚುಟುಕಗಳು, ನಾಟಕದ ನಡುನಡುವೆ ಬರುವ ಹಾಸ್ಯ ಜಾಹಿರಾತುಗಳು ಸತತ ಒಂದೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಬಿದ್ದುಬಿದ್ದು ನಗುವಂತೆ ಮಾಡುತ್ತದೆ.
