ತೆಕ್ಕಟ್ಟೆ : ಕಳೆದ ಕೆಲವು ವರ್ಷಗಳಿಂದ ಹೊಸ ಹೊಸ ಆವಿಷ್ಕಾರದೊಂದಿಗೆ ತೆಕ್ಕಟ್ಟೆಯ ಉಭಯ ಸಂಸ್ಥೆಗಳು ಚಿಣ್ಣರ ಶಾಲಾ ರಜಾದಿನಗಳನ್ನು ಸುದುಪಯೋಗಪಡಿಸಿಕೊಳ್ಳಬೇಕೆಂಬ ಉದ್ಧೇಶದಿಂದ ‘ರಜಾರಂಗು-ರಂಗ ಮಂಚ’ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ. ಹಲವಾರು ಪ್ರಸಿದ್ಧ ಗಣ್ಯರು ಸಂಪನ್ಮೂಲ ವ್ಯಕ್ತಿಯಾಗಿ ಭಾರತದ ಹಲವಾರು ಚಟುವಟಿಕೆಗಳನ್ನು ಮಕ್ಕಳಿಗೆ ಉಣಬಡಿಸುತ್ತಾ ಶಿಬಿರ ಉನ್ನತ ಮಟ್ಟವನ್ನು ತಲುಪಿದೆ. ಕರಾವಳಿ ಭಾಗದಲ್ಲಿ ಹೊಸ ಹೊಸ ವಿಭಿನ್ನ ಚಟುವಟಿಕೆಗಳನ್ನು ವರ್ಷಪೂರ್ತಿ ಕಲಾಸಕ್ತರಿಗಾಗಿ ನಡೆಸುತ್ತ ಸಾಗಿ ಬಂದ ಸಂಸ್ಥೆ ಕಳೆದ ವರ್ಷ 150 ಮಕ್ಕಳ ಶಿಬಿರವನ್ನು 30 ದಿನಗಳೂ ಅದ್ಧೂರಿಯಾಗಿ ನಡೆಸಿದ್ದು ಈ ಭಾರಿ ಹದಿನೈದು ದಿನಗಳ ಬೇಸಿಗೆ ಶಿಬಿರವನ್ನು ಬಹಳ ಚೊಕ್ಕದಾಗಿ ಪೂರೈಸಿ ಇದೀಗ ಸಮಾರೋಪದತ್ತ ಸಾಗಿ ಬಂದಿದೆ.
ಉಭಯ ಸಂಸ್ಥೆಗಳು ಬೇರೆ ಬೇರೆಯಾಗಿ ಮೇ 27 ಮತ್ತು 28ರಂದು ಸಮಾರೋಪಕ್ಕೆ ಸಜ್ಜಾಗಿದ್ದು, ಮೊದಲ ದಿನವಾಗಿ ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಯ ಆಶ್ರಯದಲ್ಲಿ ದಿ. ಕಾಳಿಂಗ ನಾವುಡ ಸಂಸ್ಮರಣಾ ಕಾರ್ಯಕ್ರಮವಾಗಿ ಶಿಬಿರಾರ್ಥಿಗಳಿಂದ ಸೀತಾರಾಮ ಶೆಟ್ಟಿ ಕೊಯಿಕೂರು ನಿರ್ದೇಶನದಲ್ಲಿ ‘ದ್ರೌಪದಿ ಪ್ರತಾಪ’ ಯಕ್ಷಗಾನ ತಾಳಮದ್ದಲೆ ಹಾಗೂ ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ನಿರ್ದೇಶನದಲ್ಲಿ ನವಗಿರಿನಂದರವರ ಕಥೆ ಆಧಾರಿತ ನಾಟಕ ‘ಹಕ್ಕಿ ಮಕ್ಕಳು’ ಪ್ರದರ್ಶನಗೊಳ್ಳಲಿದೆ. ಅಂದು ಗೌರವ ಉಪಸ್ಥಿತಿಯಲ್ಲಿ ಉದ್ಯಮಿ ಆನಂದ ಸಿ. ಕುಂದರ್, ಹೊಸಂಗಡಿ ರಾಜೀವ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮ, ಉಪನ್ಯಾಸಕ ಸುಜಯೀಂದ್ರ ಹಂದೆ, ನ್ಯಾಯವಾದಿ ಶ್ರೀಧರ ಪಿ.ಎಸ್., ಕಾಳಿಂಗ ನಾವುಡರ ಒಡನಾಡಿ ಗಂಪು ಪೈ ಸಾಲಿಗ್ರಾಮ ಉಪಸ್ಥಿತಲಿರುವರು.
ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ನೇತೃತ್ವದಲ್ಲಿ ಶಿಬಿರದ ಸಂಘಟಕರಿಂದ ಜಯಂತ್ ಕಾಯ್ಕಿಣಿ ರಚನೆಯ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ‘ಸೇವತಿ ಪ್ರಸಂಗ’ ಎನ್ನುವ ನಾಟಕ ರಂಗದಲ್ಲಿ ಪ್ರದರ್ಶನ ಕಾಣಲಿದೆ. ಗೌರವ ಉಪಸ್ಥಿತಿಯಲ್ಲಿ ಉದ್ಯಮಿ ಆನಂದ ಸಿ. ಕುಂದರ್, ಉದ್ಯಮಿ ಶಿವರಾಮ ಶೆಟ್ಟಿ ಮಲ್ಯಾಡಿ, ಪ್ರಸಿದ್ಧ ರಂಗ ನಟ ಉದ್ಯಾವರ ನಾಗೇಶ್, ಕಿರುತೆರೆ ಹಾಗು ರಂಗ ನಟ ಪ್ರದೀಪ್ ಚಂದ್ರ ಕುತ್ಪಾಡಿ, ಪ್ರಾಂಶುಪಾಲರಾದ ಅಭಿಲಾಷ ಎಸ್., ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ಅಂದು ನಮ್ಮೊಂದಿಗಿದ್ದಾರೆ.