ಮಂಗಳೂರು: ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ 2022ರ ‘ನಾರಾಯಣಗುರು ಸಂಶೋಧನಾ ಪ್ರಶಸ್ತಿ’ಗೆ ಯುವ ಲೇಖಕಿ ಗಡಿ ನಾಡು ಕಾಸರಗೋಡಿನ ಕಾಟುಕುಕ್ಕೆ ಪೆರ್ಲದ ರಾಜಶ್ರೀ ಟಿ. ರೈ ಪೆರ್ಲ ಆಯ್ಕೆಯಾಗಿದ್ದಾರೆ.
ಸಂಶೋಧನಾ ಪ್ರಶಸ್ತಿಯು ರೂ.10 ಸಾವಿರ ನಗದು ಒಳಗೊಂಡಿದೆ. ಪುರಸ್ಕೃತ ಕೃತಿಯು ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಮುದ್ರಣಗೊಂಡು ಪ್ರಶಸ್ತಿ ಪ್ರದಾನ ಸಮಾರಂಭದಂದು ಬಿಡುಗಡೆಯಾಗಲಿದೆ. ವಿಜ್ಞಾನ ಪದವೀಧರೆಯಾಗಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕಾದಂಬರಿ, ಸಂಶೋಧನೆ, ಅಂಕಣ ಬರಹ, ಕಥೆ, ನಾಟಕ, ಕವಿತೆ ಸೇರಿದಂತೆ ಸಾಹಿತ್ಯಕ್ಕೆ ನಾನಾ ಪ್ರಕಾರಗಳ ಕೊಡುಗೆ ನೀಡಿದ್ದಾರೆ. ತುಳುವಿನಲ್ಲಿ ಪನಿಯಾರ, ಬಜಿಲಜ್ಜೆ, ಕೊಂಬು, ಚೌಕಿ ಎಂಬ ನಾಲ್ಕು ಕಾದಂಬರಿಗಳು, ಚವಲೊ ಎನ್ನುವ ಕಥಾ ಸಂಕಲನ, ‘ರಡ್ಡ್ ಕವುಲೆ’ ತುಳು ಅಂಕಣ ಬರಹ ಸಂಕಲನ ಮತ್ತು ಮಮಿನದೊ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ.
ನಾಟಿ ಔಷಧಿಯ ಪರಂಪರೆಯ ಬಗ್ಗೆ ‘ಕಲ್ಪತರು’ ಎನ್ನುವ ಕೃತಿ, ತುಳು ನಾಡಿನ ಮೂರಿಗಳ ಆರಾಧನೆ ಎಂಬ ಸಂಶೋಧನಾ ಕೃತಿ ರಚಿಸಿದ್ದಾರೆ. ಒಟ್ಟು 11 ಕೃತಿಗಳನ್ನು ಪ್ರಕಟಿಸಿರುವ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ತುಳು-ಕನ್ನಡದ ಸಾಹಿತ್ಯ ಸೇವೆಗಾಗಿ ಕೇರಳ ಸರಕಾರದಿಂದ ರಾಜ್ಯೋದಯ ಜಿಲ್ಲಾಡಳಿತ ಗೌರವ, ಚೌಕಿ ಕಾದಂಬರಿಗಾಗಿ ಪ್ರತಿಷ್ಠಿತ ಎಸ್.ಯು. ಪಣಿಯಾಡಿ ಪ್ರಶಸ್ತಿ ಲಭಿಸಿದೆ. ತುಳುನಾಡಿನ ಮೂರಿಗಳ ಆರಾಧನೆ ಎಂಬ ಸಂಶೋಧನಾ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿಗಳು ದೊರೆತಿವೆ.
1 Comment
ನಿಮ್ಮ ಪ್ರೀತಿಗೆ ಹೃದಯ ತುಂಬಿ ಬಂತು ❤️🌹
✍Rajashri Perla