ವಿಜಯಪುರ : ರಾಷ್ಟ್ರಕವಿ ಕುವೆಂಪು ವಿರಚಿತ ಮಹಾಕಾವ್ಯ ‘ರಾಮಾಯಣ ದರ್ಶನಂ’ವು ಸಾಹಿತ್ಯದ ಮಹಾಪರ್ವತ. ಇದು ‘ಸೀತಾ ಚರಿತ್ರೆ’ಯೇ ಹೌದು ಎಂದು ಸಾಹಿತಿ ದೊಡ್ಡಣ್ಣ ಭಜಂತ್ರಿ ತಿಳಿಸಿದರು. ವಿಜಯಪುರದ ವೀರಶೈವ ಲಿಂಗಾಯತ ಭವನದಲ್ಲಿ ದಿನಾಂಕ 16 ಮೇ 2026ರಂದು ಜರುಗಿದ ‘ರಾಮಾಯಣ ದರ್ಶನಂ’ ಕಾವ್ಯದ ಶ್ರೀ ಸಂಪುಟದ ‘ರಯ್‌ಗೆ ಕರೆದೊಯ್ ಓ ಅಗ್ನಿ’ ಭಾಗದ ಗಮಕ ಕಾರ್ಯಕ್ರಮ.
ಈ ಗಮಕ ಕಾರ್ಯಕ್ರಮವನ್ನು ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಗಮಕ ಕಲಾ ಪರಿಷತ್ತು ಇವರುಗಳು ಸಂಯುಕ್ತವಾಗಿ ಸಂಯೋಜಿಸಿದ್ದರು. ವಿಜಯಪುರ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಎಂ.ಪಾಟೀಲ್ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದ್ದರು.
ಹಿರಿಯ ಗಮಕ ವಿದುಷಿ ಶಾಂತಾ ಕೌತಾಳ ಇವರು `ಬಾಳು ವೀಣಾ ಪಾಣಿ, ಬಾಳು ಬ್ರಹ್ಮನ ರಾಣಿ, ಗಾನಗಯ್ ಓ ಭಾವಗಂಗಾ ವೇಣಿ’ ಎಂಬ ಪದ್ಯದೊಂದಿಗೆ ಗಮಕ ವಾಚನ ಆರಂಭಿಸಿದರು. ವ್ಯಾಖ್ಯಾನ ನೀಡಿದ ಕಲ್ಯಾಣರಾವ್ ದೇಶಪಾಂಡೆಯವರು `ರಾಮಾಯಣ ದರ್ಶನಂ’ ಕಾವ್ಯದ ಸೀತೆ ಪ್ರತಿಭಟನೆ ಮಾಡಿದ ವ್ಯಕ್ತಿ. ಕುವೆಂಪುರವರು ಪುರುಷ-ಸ್ತ್ರೀ ಸಮಾನತೆ ಪ್ರತಿಪಾದಿಸಿದರು. ಅದಕ್ಕಾಗಿ ಸೀತೆಯೊಂದಿಗೆ ರಾಮನೂ ಅಗ್ನಿಪ್ರವೇಶ ಮಾಡಿ ತಾನೂ ಸಚ್ಚರಿತ್ರ ವ್ಯಕ್ತಿಯೆಂದು ಜಗತ್ತಿಗೆ ತೋರಿಸಿದನು. ಸೀತೆಯ ಅಗ್ನಿ ಪ್ರವೇಶ ಪ್ರಸಂಗ ಒಂದು ಹೋಮದಂತೆ ಮಂಗಲಮಯವಾಗಿ ಅಂತ್ಯಗೊಂಡಿತು ಎಂದು ತಮ್ಮ ವ್ಯಾಖ್ಯಾನದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಇನ್ನೊಬ್ಬ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ರಂಗಕರ್ಮಿ ಶ್ರೀ ಸಂಗಮೇಶ್ ಬದಾಮಿಯವರು ಗಮಕ ಕಲೆಯು ಕನ್ನಡ ಕಾವ್ಯಕ್ಕೆ ಶ್ರೀಮಂತಿಕೆ ನೀಡಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಜಂಬುನಾಥ ಕಂಚ್ಯಾಣಿಯವರು `ಸಂಗೀತವು ಜಾಗತಿಕ ಭಾಷೆ, ಗಮಕವು ಗಾನರಸ, ಕಾವ್ಯರಸದ ಸಮ್ಮಿಲನದೊಂದಿಗೆ ಮನುಷ್ಯರಿಗೆ ಆನಂದ ಉಂಟು ಮಾಡುವ ಕಲೆ ಎಂದು ಅಭಿಪ್ರಾಯಪಟ್ಟರು. ಹಿಂದೆ ಕುವೆಂಪು ಜನ್ಮಭೂಮಿಯಾದ ಚಿಕ್ಕಮಗಳೂರು ಜಿಲ್ಲೆಯ `ಹಿರೇಕೊಡಗೆ’ ಯಲ್ಲಿ ನಡೆದ ಕಾವ್ಯ ಕಮ್ಮಟವನ್ನು ನೆನಪಿಸಿಕೊಂಡರು.

ಅತಿಥಿಗಳನ್ನು ಸಂಗಮೇಶ ಮೇತ್ರಿ ಪರಿಚಯಿಸಿದರು. ಸಮಾರಂಭವನ್ನು ಈರಣ್ಣ ತೊಂಡಿಕಟ್ಟಿ ನಿರ್ವಹಣೆ ಮಾಡಿದರು. ಸಮಾರಂಭದಲ್ಲಿ ಅನೇಕ ಹಿರಿಯ ಸಾಹಿತಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಸಂಭ್ರಮ ತಂದರು.
