ಬೆಂಗಳೂರು : ಅಂತರಂಗ ಇದರ 46ನೇ ವರ್ಷದ ‘ರಂಗ ಸಂತಸ’ ನಾಟಕೋತ್ಸವ ಮತ್ತು ಮೇಕಪ್ ನಾಣಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 10ರಿಂದ 12 ಮಾರ್ಚ್ 2026ರವೆರೆಗೆ ಸಂಜೆ ಗಂಟೆ 6-30ಕ್ಕೆ ಬೆಂಗಳೂರಿನ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 10 ಮಾರ್ಚ್ 2026ರಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರು ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದು, ಖ್ಯಾತ ರಂಗ-ಚಲನಚಿತ್ರ ಕಲಾವಿದೆ ಶ್ರೀಮತಿ ಉಮಾಶ್ರೀ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗುರುರಾಜ್ ಪಿ.ವಿ. ಇವರಿಗೆ ಮೇಕಪ್ ನಾಣಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಅಭಿನಯ ತರಂಗ ರಂಗಶಾಲೆಯ ತಂಡದವರಿಂದ ರಾಘವೇಂದ್ರ ಕೆ. ಇವರ ನಿರ್ದೇಶನದಲ್ಲಿ ‘ತಾರ’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 11 ಮಾರ್ಚ್ 2026ರಂದು ಖ್ಯಾತ ರಂಗ ಸಂಘಟಕಿಯರಾದ ಶ್ರೀಮತಿ ಸ್ನೇಹಾ ಕಪ್ಪಣ್ಣ ಮತ್ತು ಶ್ರೀಮತಿ ರಾಜಶ್ರೀ ಇವರಿಂದ ‘ಮಹಿಳಾ ಸಂಘಟಕಿಯರ ಮೂಲಕ ರಂಗ ಶಿಕ್ಷಣ’ ಸಂವಾದ ಕಾರ್ಯಕ್ರಮ ನಡೆಯಲಿದೆ. ಬಳಿಕ ಮೈಸೂರಿನ ಸಂಕಲ್ಪ ತಂಡದವರಿಂದ ಹುಲುಗಪ್ಪ ಕಟ್ಟೀಮನಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಜತೆಗಿರುವನು ಚಂದಿರ’ ನಾಟಕ ಪ್ರಸ್ತುತಗೊಳ್ಳಲಿದೆ.
ದಿನಾಂಕ 12 ಮಾರ್ಚ್ 2026ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ರಂಗ ತಜ್ಞರಾದ ಶಶಿಧರ್ ಭಾರಿಘಾಟ್ ಮತ್ತು ಕೆ.ಎಸ್.ಡಿ.ಎಲ್. ಚಂದ್ರು ಇವರು ‘ರಂಗ ಶಿಕ್ಷಣದ ಮಹತ್ವ ಮತ್ತು ಮಜಲುಗಳು ಎಂಬ ವಿಷಯದ ಬಗ್ಗೆ ಸಂವಾದ ನಡೆಯಲಿದ್ದಾರೆ. ಬಳಿಕ ‘ಅನಾವರಣ’ ತಂಡದವರು ಶಶಿಧರ್ ಭಾರಿಘಾಟ್ ಇವರ ನಿರ್ದೇಶನದಲ್ಲಿ ‘ವರ್ಣ ಪಲ್ಲಟ’ ನಾಟಕ ಪ್ರದರ್ಶನ ನೀಡಲಿದ್ದಾರೆ.

