ಕಾಸರಗೋಡು : “ಯಾವುದೇ ಕ್ಷೇತ್ರದಲ್ಲಾದರೂ ಅದು ಚಿತ್ರಕಲೆಯಾಗಲೀ, ಸಾಹಿತ್ಯ ಕ್ಷೇತ್ರವಾಗಲಿ, ಕ್ರೀಡೆ, ನಟನೆಯಾಗಲಿ ಸಾಧನೆ ಮಾಡಬೇಕಾದರೆ ಸತತ ಪರಿಶ್ರಮ ಮತ್ತು ಸಹನೆ ಅಗತ್ಯ. ಬಾಲ್ಯದಿಂದಲೇ ಅಭಿರುಚಿಯನ್ನು ಗುರುತಿಸಿ ತರಬೇತಿ ಪಡೆದುಕೊಳ್ಳಬೇಕು. ಇಲ್ಲವಾದರೆ ಅದು ಅಲ್ಲಿಗೇ ಕಮರಿ ಹೋಗಬಹುದು” ಎಂದು ಮಂಗಳೂರಿನ ಖ್ಯಾತ ವೈದ್ಯರಾದ ಡಾ. ಯಶವಂತ ಎನ್. ನಾಯಕ್ ಅವರು ಹೇಳಿದರು.

ರಂಗ ಚಿನ್ನಾರಿ ಕಾಸರಗೋಡು ಸಂಸ್ಥೆಯ ನೇತೃತ್ವದಲ್ಲಿ ಏರ್ಪಡಿಸಿದ ವೈದ್ಯೆ ಶಿಲ್ಪಾ ಎಸ್. ಕಾಮತ್ ಅವರ ಚಿತ್ರಕಲೆಯ ಕಲಾಕೃತಿಯ ಪ್ರದರ್ಶನ ‘ರಂಗ ಪಂಚಮಿ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

“ಶಿಲ್ಪಾ ಕಾಮತ್ ಅವರು ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಅವರನ್ನು ತಂದೆಯಾಗಿ ಪ್ರೋತ್ಸಾಹಿಸಿ, ಆ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರೇಪಿಸಿದೆ” ಎಂದರು.

ಕಾಸರಗೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ದಿನಾಂಕ 9 ಮತ್ತು 10 ಮೇ 2026ರಂದು ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಡಾ. ರೇಖಾ ರೈ ಅವರು “ಶಿಲ್ಪಾ ಕಾಮತ್ ಅವರು ತನ್ನ ಅಮೂಲ್ಯವಾದ ಸಮಯವನ್ನು ಸದುಪಯೋಗಿಸಿಕೊಂಡು ಚಿತ್ರಕಲಾ ಕ್ಷೇತ್ರಕ್ಕೆ ಅನರ್ಘ್ಯವಾದ ಕೊಡುಗೆಯನ್ನು ನೀಡಿದ್ದಾರೆ” ಎಂದರು.

ಖ್ಯಾತ ಶಿಲ್ಪ ಕಲಾವಿದ ಡಾ. ಪ್ರವೀಣ್ ಪುಣಿಂಚಿತ್ತಾಯ ಅವರು “ಶಿಲ್ಪಾ ಅವರಿಗೆ ಚಿತ್ರಕಲಾ ಕ್ಷೇತ್ರದಲ್ಲಿ ಉಜ್ಜಲವಾದ ಭವಿಷ್ಯವಿದೆ” ಎಂದರು.

ಮೈಸೂರಿನ ಖ್ಯಾತ ಪತ್ರಕರ್ತ, ಯೂಟ್ಯೂಬರ್, ಸಾಹಿತಿ ರವೀಂದ್ರ ಜೋಶಿ ಮಾತನಾಡಿ “ಇಂತಹ ಪ್ರದರ್ಶನಗಳು ಕೇವಲ ಕಾಸರಗೋಡಿಗೆ ಮಾತ್ರ ಸೀಮಿತವಾಗದೆ ರಾಜ್ಯದಾದ್ಯಂತ ಪ್ರದರ್ಶನಗೊಳ್ಳಬೇಕಾಗಿದೆ” ಎಂದರು.

ಡಾ. ಅನಂತ ಕಾಮತ್ ಅವರು ಅಧ್ಯಕ್ಷತೆ ವಹಿಸಿದ್ದರು. ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕರಾದ ಕಾಸರಗೋಡು ಚಿನ್ನಾ, ನ್ಯಾಯವಾದಿ ಎ.ಎನ್. ಅಶೋಕ ಕುಮಾರ್, ಕೆ. ಸತೀಶ್ಚಂದ್ರ ಭಂಡಾರಿ, ಕೆ. ಸತ್ಯನಾರಾಯಣ, ಡಾ. ಸಂತೋಷ್ ಕಾಮತ್ ಮುಂತಾದವರು ವೇದಿಕೆಯಲ್ಲಿದ್ದರು. ಸಂಚಾಲಕರಾದ ಕಾಸರಗೋಡು ಚಿನ್ನಾ ಸ್ವಾಗತಿಸಿ, ಉದಯ ಕುಮಾರ್ ಮನ್ನಿಪ್ಪಾಡಿ ವಂದಿಸಿದರು. ಕೊನೆಯಲ್ಲಿ ಚಿತ್ರಕಲಾವಿದೆ ಡಾ. ಶಿಲ್ಪಾ .ಎಸ್.ಕಾಮತ್ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.


