ಬದಿಯಡ್ಕ : ನೀರ್ಚಾಲಿನ ಎಂ.ಎಸ್.ಸಿ. ಎ.ಎಲ್.ಪಿ. ಶಾಲೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆ ಇವುಗಳ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಗ್ರಾಮ ಪರ್ಯಟನೆಯ 4ನೇ ಸರಣಿ ಕಾರ್ಯಕ್ರಮದಲ್ಲಿ ಯಕ್ಷಗಾನ ಬಣ್ಣಗಾರಿಕಾ ಶಿಬಿರ ದಿನಾಂಕ : 11-06-2023ರಂದು ನಡೆಯಿತು. ಈ ಶಿಬಿರದ ನೇತೃತ್ವ ವಹಿಸಿದ ಯಕ್ಷಗಾನ ಹಿಮ್ಮೇಳ ಮತ್ತು ಮುಮ್ಮೇಳ ಶಿಕ್ಷಕ ಬಾಯಾರು ಸೂರ್ಯನಾರಾಯಣ ಪದಕಣ್ಣಾಯ ಅವರು ಮಾತನಾಡುತ್ತಾ “ಯಕ್ಷಗಾನದ ಬಣ್ಣಗಾರಿಕೆಯು ಅತ್ಯಂತ ಆಳ ಹಾಗೂ ವಿಸ್ತಾರವಾಗಿದ್ದು, ಪ್ರತಿಯೊಂದು ಪಾತ್ರದ ಚಿತ್ರಣಕ್ಕೂ ವಿಶೇಷ ಅರ್ಥವಿದೆ. ಮುಖದ ಬಣ್ಣಗಾರಿಕೆಯ ಮೂಲಕ ಪಾತ್ರದ ಸ್ವಭಾವವನ್ನು ತಿಳಿಯಬಹುದು. ಆದ್ದರಿಂದ ಬಣ್ಣಗಾರಿಕೆಯು ಸಣ್ಣ ಅವಧಿಯಲ್ಲಿ ಕಲಿಯುವಷ್ಟು ಸಣ್ಣ ವಿಷಯವಲ್ಲ. ಅದು ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷವಾದ ಬೃಹತ್ ಮಾಹಿತಿ ಕೋಶ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹಿರಿಯ ಪ್ರಸಾದನಾ ಕಲಾವಿದ ಕೇಶವ ಕಿನ್ಯ ಮಾತನಾಡಿ, “ಕಲಾವಿದರು ತಮ್ಮ ಕಲೋಪಾಸನೆಯಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ತಮ್ಮ ಕಲಾ ಜೀವನದಲ್ಲಿ ಕಲಿಯಬೇಕಾಗಿರುವುದು ಅನೇಕ ಇವೆಯೆಂಬ ಪ್ರಜ್ಞೆ ಕಲಾವಿದರಲ್ಲಿ ಸದಾ ಇರಬೇಕು” ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಯಕ್ಷಗಾನ ವೇಷಭೂಷಣ ತಯಾರಕ ಜಗದೀಶ ಬದಿಯಡ್ಕ ಮಾತನಾಡಿ, “ಯಕ್ಷಗಾನ ಬಣ್ಣಗಾರಿಕೆಯಲ್ಲಿ ನಿರಂತರ ಅಧ್ಯಯನ ಮಾಡುವುದರಿಂದ ಮಾತ್ರ ಬೆಳವಣಿಗೆ ಸಾಧಿಸಲು ಸಾಧ್ಯ” ಎಂದು ನುಡಿದರು.
ಶಿಬಿರಾರ್ಥಿಯಾಗಿ ಭಾಗವಹಿಸಿದ್ದ ಭಾಗ್ಯಶ್ರೀ ಕುಂಚಿನಡ್ಕ ಮಾತನಾಡಿ “ಉತ್ತಮ ಮುಖವರ್ಣಿಕೆ ಮೂಡಿಬರಲು ಸತತ ಪರಿಶ್ರಮ ಹಾಗೂ ಮಾಹಿತಿಗಳ ಕ್ರೋಢೀಕರಣ ಅಗತ್ಯ. ಈ ಬಗ್ಗೆ ಶಿಬಿರದಲ್ಲಿ ಉತ್ತಮ ಮಾರ್ಗದರ್ಶನ ದೊರೆಯಿತು. ಯಕ್ಷಗಾನದ ಬಣ್ಣಗಾರಿಕೆಯಲ್ಲಿನ ಸೂಕ್ಷ್ಮಗಳನ್ನು ಅರಿತುಕೊಳ್ಳಲು ಈ ಶಿಬಿರವು ಸಹಕಾರ ನೀಡಿದೆ” ಎಂದು ತಿಳಿಸಿದರು.
ಶಿಬಿರದಲ್ಲಿ ಯಕ್ಷಗಾನದ ಬಣ್ಣಗಾರಿಕೆಗೆ ಸಂಬಂಧಿಸಿದ ಸೂಕ್ಷ್ಮವಾದ ವಿಚಾರಗಳ ಕುರಿತು ಮಾಹಿತಿ ನೀಡಲಾಯಿತು. ದೇವತಾ ಬಲ, ದೇವೇಂದ್ರ, ವಿಷ್ಣು, ಹನುಮಂತ, ಕೇಸರಿ ತಟ್ಟೆ ವೇಷ, ರಾಕ್ಷಸ ಬಲ ಮೊದಲಾದ ವೇಷಗಳಿಗೆ ಸ್ವತಃ ಕಲಾವಿದರೇ ಬಣ್ಣಗಾರಿಕೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು.
ಶಿಬಿರದಲ್ಲಿ ಸುಮಾರು 30 ಮಂದಿ ವಿವಿಧ ವಯೋಮಾನದ ಹವ್ಯಾಸಿ ಕಲಾವಿದರು ಉಪಸ್ಥಿತರಿದ್ದರು. ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು, ಕಾರ್ಯದರ್ಶಿ ಡಾ. ಶ್ರೀಶಕುಮಾರ ಪಂಜಿತ್ತಡ್ಕ, ಮನ್ವಿತ್ ನಾರಾಯಣ ಮಂಗಲ ಮತ್ತಿತರರು ಇದ್ದರು.