ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಮಿತ್ರವೃಂದ ಮುಳುಂದ ಇವರ ಮುಂಬೈ ಜಂಟಿ ಆಯೋಜನೆಯಲ್ಲಿ ‘ರಾಷ್ಟ್ರಕವಿ ಕುವೆಂಪು ದತ್ತಿ ಉಪನ್ಯಾಸ ಮಾಲಿಕೆ-2026’ ಕಾರ್ಯಕ್ರಮವು ದಿನಾಂಕ 11 ಮಾರ್ಚ್ 2026ರಂದು ಜೆ.ಪಿ. ನಾಯಕ್ ಭವನ, ಮುಂಬೈ ವಿಶ್ವವಿದ್ಯಾಲಯ, ವಿದ್ಯಾನಗರಿ, ಸಾಂತಾಕ್ರೂಜ್ (ಪೂ.) ಇಲ್ಲಿ ಮಧ್ಯಾಹ್ನ 3-00 ಗಂಟೆಗೆ ನಡೆಯಲಿದೆ.
ಈ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕರು, ಹಿರಿಯ ಕವಿ, ಸಾಹಿತಿ, ವಿದ್ವಾಂಸರಾದ ಆನಂದ ಝಂಜರವಾಡ ಇವರು ಉಪನ್ಯಾಸಕರಾಗಿ ಆಗಮಿಸಲಿದ್ದು, ‘ಮರಾಠಿ ಬೇಂದ್ರೆ- ಕನ್ನಡ ಬೇಂದ್ರೆ’ ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ. ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಹಿರಿಯ ಪ್ರಾಧ್ಯಾಪಕರೂ ಆದ ಪ್ರೊ. ಜಿ.ಎನ್. ಉಪಾಧ್ಯ ಇವರು ಆಶಯ ನುಡಿಗಳನ್ನಾಡಲಿದ್ದಾರೆ. ಈ ಕಾರ್ಯಕ್ರಮದ ಸಂಯೋಜನೆಯನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿಯವರು ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಪ್ರೊ. ಜಿ.ಎನ್. ಉಪಾಧ್ಯ ಹಾಗೂ ಮಿತ್ರವೃಂದ ಮುಳುಂದ ಮುಂಬೈಯ ಸಂಚಾಲಕರಾದ ಎಸ್.ಕೆ. ಸುಂದರ್ ವಿನಂತಿಸಿಕೊಂಡಿದ್ದಾರೆ.
ಆನಂದ ಝುಂಜರವಾಡ : ಕವಿ ಆನಂದ ಝಂಜರವಾಡ ಅವರು ಬಾಗಲಕೋಟೆಯಲ್ಲಿ 1952 ಜೂನ್ 25ರಂದು ಜನಿಸಿದರು. ಕಾವ್ಯ ರಚನೆ ಹಾಗೂ ವಿಮರ್ಶೆ ಇವರ ಆಸಕ್ತಿಯ ಕ್ಷೇತ್ರ. ಪದಗಳ ಪರಿಧಿಯಲ್ಲಿ, ಖನನೋತ್ಸವ, ಎಲ್ಲಿದ್ದಾನೆ ಮನುಷ್ಯ? ಮುಂತಾದವು ಇವರ ಪ್ರಮುಖ ಕವನ ಸಂಕಲನಗಳು. ‘ಪ್ರೇತಕಾಂಡ’ ಒಂದು ಹಂತದವರೆಗಿನ ಅವರ ಸಮಗ್ರ ಕಾವ್ಯ ಸಂಗ್ರಹವಾದರೂ ಅ ನಂತರವೂ ಇನ್ನೂ ಮೂರು ಸಂಕಲನಗಳು ಪ್ರಕಟವಾಗಿವೆ. ಪ್ರಸನ್ನವೆಂಕಟದಾಸರ ಬದುಕನ್ನು ಕುರಿತು ಇವರು ಬರೆದ ನಾಟಕ ‘ಹಕ್ಕಿಯ ಹೆಗಲೇರಿ’ ಪ್ರಯೋಗಗಳನ್ನು ಕಾಣುತ್ತಲೇ ಇದೆ. ಅವರ ಹಲವು ಚಿಂತನಶೀಲ ಬರಹಗಳ ಸಂಗ್ರಹಗಳೂ ಪ್ರಕಟವಾಗಿವೆ. ಟಿಳಕರ ‘ಗೀತಾ ರಹಸ್ಯ’ದ ಆಲೂರರ, ಕೆರೂರು ವಾಸುದೇವಾಚಾರ್ಯರ ಅನುವಾದದ ಎರಡನೆಯ ಆವೃತ್ತಿಯನ್ನು ಇವರು ಸಂಪಾದಿಸಿಕೊಟ್ಟಿದ್ದಾರೆ. 37 ವರ್ಷ ನ್ಯಾಯಾಂಗದಲ್ಲಿ ಕರಣಿಕರಾಗಿ ದುಡಿದು, ಈಗ ನಿವೃತ್ತ ಬದುಕನ್ನು ಅವರ ಪ್ರೀತಿಯ ಕವಿ ಬೇಂದ್ರೆ ಅವರ ನೆಲೆಯಾದ ಧಾರವಾಡದಲ್ಲಿ ನಡೆಸಿದ್ದಾರೆ. ಪು.ತಿ.ನ. ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಗಳಗನಾಥ ಪ್ರಶಸ್ತಿ ಇವು ಇವರಿಗೆ ಸಂದ ಹಲವು ಪ್ರಶಸ್ತಿಗಳಲ್ಲಿ ಕೆಲವು. ಇವರ ಖನನೋತ್ಸವ ಕಾವ್ಯಕ್ಕೆ ಕವಿ ಮುದ್ದಣ ಸ್ಮಾರಕ ಬಹುಮಾನ, ವರ್ಧಮಾನ ಪ್ರಶಸ್ತಿ ಬಂದಿವೆ. ‘ಎಲ್ಲಿದ್ದಾನೆ ಮನುಷ್ಯ’ ಕೃತಿಗೆ ದಿನಕರ ದೇಸಾಯಿ ಸ್ಮಾರಕ ಬಹುಮಾನ ಲಭಿಸಿದೆ.

