ಕಾಸರಗೋಡು : ಕನ್ನಡ ಸಂಶೋಧನಾ ಕೇಂದ್ರ ಕಾಸರಗೋಡು ಇವರು ಕಾಸರಗೋಡು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂಶೋಧನಾ ವಿಧಾನದ ಬಗೆಗೆ ಅರಿವು ಮೂಡಿಸುವ ಒಂದು ದಿನದ ‘ಸಂಶೋಧನಾ ಕಮ್ಮಟ’ವು ದಿನಾಂಕ 12 ಮೇ 2026ರಂದು ನಡೆಯಿತು.


ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಪ್ರಾಧ್ಯಾಪಕ ಡಾ. ಮೋಹನ ಕೃಷ್ಣ ರೈ ಇವರು ಮಾತನಾಡಿ “ಮಂಜೇಶ್ವರ ಆಕರಗಳ ವಿಶ್ಲೇಷಣೆಯ ಮೂಲಕ ಅರಿವಿನ ದಾರಿಯನ್ನು ಕಂಡುಕೊಳ್ಳುವುದು ಸಂಶೋಧನೆಯಲ್ಲಿ ಅಗತ್ಯ. ಸಮಾಜದಲ್ಲಿ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಅವುಗಳನ್ನು ಗುರುತಿಸಿ ಸಮಕಾಲೀನ ಸಮಾಜಕ್ಕೆ ಉಪಯೋಗವಾಗುವಂತೆ ಒದಗಿಸ ಬೇಕಾದುದು ಸಂಶೋಧಕರ ಹೊಣೆಗಾರಿಕೆ. ವಸ್ತುನಿಷ್ಠವಾಗಿ ಪುನರಾವಲೋಕನ ಮಾಡುತ್ತಲೇ ಆಕರಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ವ್ಯಾಖ್ಯಾನಿಸಬಹುದು.ಯಾವುದೇ ಪೂರ್ವಗ್ರಹಗಳಿಲ್ಲದೆ ಪ್ರಾಮಾಣಿಕವಾಗಿ ವರ್ತಿಸುವುದು ಸಂಶೋಧಕರ ಪ್ರಮುಖ ಜವಾಬ್ದಾರಿಯಾಗಿದೆ” ಎಂದು ಹೇಳಿದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಅವರು ಮಾತನಾಡುತ್ತ “ಹಿರಿಯ ತಲೆಮಾರುಗಳೊಡನೆ ನಾಶವಾಗುವ ಸ್ಥಳೀಯ ಮೌಖಿಕ ಅಕರಗಳನ್ನು ಕ್ಷೇತ್ರಕಾರ್ಯದ ಮೂಲಕ ಇನ್ನಾದರೂ ಸಂಗ್ರಹಿಸಿ ಸಂರಕ್ಷಿಸಬೇಕು. ಅವು ನಮ್ಮ ಹಿರಿಯರ ಬದುಕಿನ ವಿಧಾನ ಹಾಗೂ ಚಿಂತನೆಗಳ ಅಗಾಧತೆಗಳನ್ನು ತಿಳಿದುಕೊಳ್ಳಲು ನೆರವಾಗಬಹುದು” ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ. ಮಹಮ್ಮದಾಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ನಿರ್ದೇಶಕ ಡಾ. ಮೋಹನ ಕುಂಟಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾಸರಗೋಡಿನ ಆಕರಗಳನ್ನು ಬಳಸಿ ಸಂಶೋಧನೆ ಮಾಡುವವರಿಗೆ ಉತ್ತೇಜನ ನೀಡುವ ಕೇಂದ್ರದ ಕಾರ್ಯ ಯೋಜನೆಗಳನ್ನು ತಿಳಿಯಪಡಿಸಿದರು.


ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಶಿವಶಂಕರ್ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ರೇಣುಕಾ ಸುಧೀರ್ ಅರಸಿನಮಕ್ಕಿ ಆರಂಭದಲ್ಲಿ ಪ್ರಾರ್ಥನಾ ಗೀತೆಯನ್ನು ಹಾಡಿ ಬಳಿಕ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಪ್ರದೇಶಗಳಿಂದ ಬಂದ ಹತ್ತು ಜನ ಸಂಶೋಧನಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಮ್ಮಟವನ್ನು ಅರ್ಥಪೂರ್ಣಗೊಳಿಸಿದರು. ಡಾ. ಮೋಹನ ಕೃಷ್ಣ ರೈ, ಡಾ ಮೋಹನ ಕುಂಟಾರ್ ಹಾಗೂ ಡಾ. ರತ್ನಾಕರ ಮಲ್ಲಮೂಲೆ ಸಂಶೋಧನೆಯ ವಿಧಾನ ಹಾಗೂ ಸಂಶೋಧನೆಯ ಇಂದಿನ ವಲಯಗಳ ಬಗ್ಗೆ ಮಾತನಾಡಿದರು. ಅನಂತರ ಮುಕ್ತ ಸಂವಾದ ನಡೆಯಿತು.
