ಬಂಟ್ವಾಳ: ಏರ್ಯ ಆಳ್ವ ಫೌಂಡೇಷನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಘಟಕ ಇದರ ಆಶ್ರಯದಲ್ಲಿ ಏರ್ಯ ಬೀಡುವಿನಲ್ಲಿ ವಿದ್ಯಾರ್ಥಿಗಳ ಸಾಹಿತ್ಯ ಕಮ್ಮಟ ಕಾರ್ಯಕ್ರಮವು 28 ಜುಲೈ2024ರ ಭಾನುವಾರದಂದು ನಡೆಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ “ಸಾಹಿತಿ ದಿವಂಗತ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಎಂದಿಗೂ ತಮ್ಮ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆ ಅಂಟಿಸಿ ಕೊಂಡವರಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದುಕೊಂಡರೂ ಕಳಂಕ ರಹಿತವಾಗಿ ಬದುಕಿರುವುದು ಅವರ ಯೋಗ್ಯತೆಗೆ ಸಂದ ಗೌರವ. ಇಂತಹ ಸಾಹಿತ್ಯಿಕ ವಾತವರಣವನ್ನು ಕಲ್ಪಿಸಿಕೊಟ್ಟಾಗ ಯುವ ಸಮುದಾಯ ಉತ್ತಮ ದಾರಿಯಲ್ಲಿ ಸಾಗಲು ಸಾಧ್ಯವಿದೆ.” ಎಂದರು.


ಏರ್ಯ ಬೀಡುವಿನ ಆನಂದಿ ಎಲ್. ಆಳ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಏರ್ಯ ಬೀಡುವಿನ ಬಾಲಕೃಷ್ಣ ಹೆಗ್ಡೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಏರ್ಯ ಬೀಡುವಿನ ರಾಜರಾಂ ರೈ, ಬಂಟ್ವಾಳ ತಾಲೂಕು ಕ. ಸಾ. ಪ. ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ್ ಪೂಂಜ, ಹೊಟೇಲ್ ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ, ಅಮ್ಮಾಡಿ ಗ್ರಾ. ಪಂ. ಅಧ್ಯಕ್ಷರಾದ ವಿಜಯ್ ಕುಮಾರ್ ಉಪಸ್ಥಿತರಿದ್ದರು. ಏರ್ಯರ ನೆನೆಪು ಮತ್ತು ಓದುವ ಹವ್ಯಾಸದ ಬಗ್ಗೆ ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್, ಕಥೆ ರಚನೆಯ ಬಗ್ಗೆ ತುಳಸಿ ಕೈರಂಗಳ ಹಾಗೂ ಕವಿತೆ ರಚನೆಯ ಬಗ್ಗೆ ಜಯರಾಮ ಪಡ್ರೆ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಕ್ರಮ ಸಂಯೋಜಕ ದಾಮೋರ್ ಮಾಸ್ತರ್ ಸ್ವಾಗತಿಸಿ, ವಂದಿಸಿದರು. ಕೇಶವ ಎಚ್.ಕಟೀಲು ಕಾರ್ಯಕ್ರಮ ನಿರೂಪಿಸಿದರು.

