ಮಂಗಳೂರು : ಭಿನ್ನ ಸಾಮರ್ಥ್ಯದ ಮಕ್ಕಳ ಸಂಸ್ಥೆಯಾದ ‘ಸಾನಿಧ್ಯ’ ಆಯೋಜಿಸುತ್ತಿರುವ ಎರಡು ದಿನಗಳ ‘ವಿಷನ್ -2024’ ಹಾಗೂ ‘ಸಾನಿಧ್ಯ ಉತ್ಸವ’ ಕಾರ್ಯಕ್ರಮವು ದಿನಾಂಕ 09-03-2024 ಮತ್ತು 10-03-2024 ರಂದು ಮಂಗಳೂರಿನ ಕದ್ರಿ ಉದ್ಯಾನದ ವೇದಿಕೆಯಲ್ಲಿ ನಡೆಯಲಿದೆ.
ದಿನಾಂಕ 09-03-2024ರ ಶನಿವಾರದಂದು ಸಂಜೆ ಘಂಟೆ 05.30ಕ್ಕೆ ಸರಿಯಾಗಿ ಸಾನಿಧ್ಯ ವಿಶೇಷ ಮಕ್ಕಳು ತರಬೇತಿದಾರರ ನೆರವಿನಿಂದ ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ‘ವಿಷನ್ -2024’ ಉದ್ಘಾಟನೆಗೊಳ್ಳಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕರಾಗಿರುವ ಶ್ರೀಯುತ ಎ. ಉಸ್ಮಾನ್ ಹಾಗೂ ಸಮಾಜ ಸೇವಕಿ ಶ್ರೀಮತಿ ರೂಪಕಲಾ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದಿನಾಂಕ 10-03-2024ರ ಆದಿತ್ಯವಾರದಂದು ನಡೆಯಲಿರುವ ‘ಸಾನಿಧ್ಯ ಉತ್ಸವ’ವನ್ನು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾಗಿರುವ ವೇದಮೂರ್ತಿ ಶ್ರೀ ಕೆ. ಕಮಲಾದೇವಿ ಪ್ರಸಾದ ಅಸ್ರಣ್ಣನವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎನ್. ಎಸ್. ಶೆಟ್ಟಿ ಆಂಡ್ ಕಂ. ಮುಂಬೈ ಇದರ ಆಡಳಿತ ನಿರ್ದೇಶಕ ಹಾಗೂ ಲೆಕ್ಕ ಪರಿಶೋಧಕರಾಗಿರುವ ಶ್ರೀ ಎನ್. ಸುಧೀರ್ ಶೆಟ್ಟಿ, ‘ಆಶಾ ಸದನ’ ವಿಶೇಷ ಶಾಲೆ ಮಂಡ್ಯ ಇದರ ಪ್ರಾಂಶುಪಾಲರಾಗಿರುವ ವಂದನೀಯ ಗುರು ಜೋಯ್ಸನ್ ಜೋನ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ‘ಅಕ್ಕರೆಯ ಬೆಳಕು’ ವಿಶೇಷ ಶಾಲೆಯ ಆಡಳಿತಾಧಿಕಾರಿಯಾಗಿರುವ ಶ್ರೀ ಕರೆಪ್ಪ ಬಿ.ಹೆಚ್. ಹಾಗೂ ಸೈಂಟ್ ಮೇರಿಸ್ ವಿಶೇಷ ಶಾಲೆ ಕಿನ್ನಿಗೋಳಿ ಇಲ್ಲಿ ಪ್ರಾಂಶುಪಾಲೆಯಾಗಿರುವ ಶ್ರೀಮತಿ ರೇಷ್ಮ ಮರಿಯಾ ಮಾರ್ಟಿಸ್ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ವಿಶೇಷ ಮಕ್ಕಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ವಿಧಾನ ಸೌಧದ ಒಳಗೆ ಹಾಗೂ ದುಬೈ ಮತ್ತು ಕತಾರ್‌ನಲ್ಲಿ ತಮ್ಮ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸಿದ ‘ಸಾನಿಧ್ಯ’ದ ವಿಶೇಷ ಮಕ್ಕಳು, ಹವ್ಯಾಸಿ ಬಳಗ ಕದ್ರಿ ಇದರ ನಿರ್ದೇಶಕರರಾಗಿರುವ ಶರತ್ ಕದ್ರಿ ಇವರ ನಿರ್ದೇಶನದಲ್ಲಿ ‘ಭಸ್ಮಾಸುರ ಮೋಹಿನಿ’ ಪ್ರಸಂಗದ ಯಕ್ಷಗಾನವನ್ನು ಹಾಗೂ ಡಾ. ವಸಂತ್ ಕುಮಾರ್ ಶೆಟ್ಟಿ ರಚಿಸಿ ನಿರ್ದೇಶಿಸಿರುವ ಸಾಮ್ರಾಟ್ ಅಶೋಕನ ಜೀವನ ಚರಿತ್ರೆಯನ್ನು ಪ್ರತಿಬಿಂಬಿಸಬಲ್ಲ ‘ಬುದ್ಧಂ ಶರಣಂ ಗಚ್ಛಾಮಿ’ ಎಂಬ ನಾಟಕವನ್ನು ಪ್ರದರ್ಶಿಸಲಿದ್ದಾರೆ.