ಮಂಗಳೂರು : ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ‘ಸಾಹಿತ್ಯ ವೈಭವ 2026’ ಕಾರ್ಯಕ್ರಮವನ್ನು ದಿನಾಂಕ 25 ಜನವರಿ 2026ರಂದು ಬೆಳಗ್ಗೆ 9-00 ಗಂಟೆಗೆ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಅಭಿಷೇಕ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಎಸ್. ಗಣೇಶ್ ರಾವ್ ಇವರು ಉದ್ಘಾಟನೆ ಮಾಡಲಿದ್ದು, ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತು ರಾಜ್ಯ ಪ್ರಧಾನ ಸಂಚಾಲಕರಾದ ಡಾ. ಎಂ.ಜಿ.ಆರ್. ಅರಸ್ ಇವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಚುಟುಕು ಸಾಹಿತಿ, ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಇವರ ನೇನೋಕತೆಗಳ ಸಂಕಲನ ‘ಕೋಲ್ಮಿಂಚು’ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಹಾಗೂ ಚುಸಾಪ ಗೌರವಾಧ್ಯಕ್ಷ ಇರಾ ನೇಮು ಪೂಜಾರಿಯವರ ‘ಚುಟುಕು ಕಾವ್ಯ ಕಾಮಿನಿ’ ಕಾವ್ಯಸಂಕಲನವನ್ನು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ಎ. ಜನಾರ್ದನ ಶೆಟ್ಟಿಯವರು ಬಿಡುಗಡೆಗೊಳಿಸಲಿರುವರು.
ಕಾರ್ಯಕ್ರಮದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಮತ್ತು ರಂಗ ಸಂಗಾತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ, ಯೋಗ ಗುರುಗಳಾದ ಡಾ. ಎಂ. ಜಗದೀಶ್ ಶೆಟ್ಟಿ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಪುಷ್ಪಲತಾ ಮತ್ತು ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮಾಜಿ ಪ್ರಧಾನ ಕಾರ್ಯದರ್ಶಿ ನಾರಾಯಣಯ್ಯ ಮೂಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕುಮಾರಿ ದಿಶಾ ಸಿ.ಜಿ. ಇವರಿಂದ ಪ್ರಾರ್ಥನೆ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಗೋಪಾಲಕೃಷ್ಣ ಶಾಸ್ತ್ರಿಯವರಿಂದ ಸ್ವಾಗತ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇದರ ಉಪಾಧ್ಯಕ್ಷರಾದ ಹಿತೇಶ್ ಕುಮಾರ್ ಎ. ಇವರಿಂದ ಧನ್ಯವಾದ ಮತ್ತು ಕಾರ್ಯದರ್ಶಿ ಶ್ರೀಮತಿ ರಶ್ಮಿ ಸನಿಲ್ ಮತ್ತು ಜೊತೆ ಕಾರ್ಯದರ್ಶಿ ರಾಜೇಶ್ವರಿ ಎಚ್. ಬಜ್ಪೆ ಇವರಿಂದ ನಿರೂಪಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಹಿರಿಯ ಕವಿ ಎನ್. ಸುಬ್ರಾಯ ಭಟ್ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಕವಿಗೋಷ್ಠಿ ಮತ್ತು ಕವಯತ್ರಿ ಗೀತಾ ಲಕ್ಷ್ಮೀಶ್ ಇವರ ಅಧ್ಯಕ್ಷತೆಯಲ್ಲಿ ತುಳು ಕವಿಗೋಷ್ಠಿಗಳು ನಡೆಯಲಿದೆ.

