ಭಾರತೀಯ ನೃತ್ಯ ಜಗತ್ತಿನಲ್ಲಿ ಭರತನಾಟ್ಯ ಮತ್ತು ಕುಚಿಪುಡಿ ಎರಡೂ ನೃತ್ಯ ಶೈಲಿಗಳ ನೃತ್ಯಪಟು ಡಾ. ವೀಣಾ ಮೂರ್ತಿ ವಿಜಯ್ ಇವರ ಹೆಸರನ್ನು ಕೇಳದವರೇ ಇಲ್ಲ. ವರ್ಷವಿಡಿ ಒಂದಲ್ಲ ಒಂದು ಬಗೆಯ ಚಟುವಟಿಕೆಯಿಂದ ನಾಟ್ಯರಂಗದವರ ಗಮನವನ್ನು ಸೆಳೆದಿರುವ ಇವರು ಅನವರತ ಕ್ರಿಯಾಶೀಲರು ಎಂದರೆ ಅತಿಶಯೋಕ್ತಿಯಲ್ಲ. ಹೊಸತನ, ಪ್ರಯೋಗಶೀಲತೆ ಇವರ ಅಸ್ಮಿತೆ. ಸಂಘಟನೆ ಇವರ ಚೇತನ. ಸತತ ಐದು ದಶಕಗಳನ್ನು ಯಶಸ್ವಿಯಾಗಿ ದಾಟಿ ಬಂದಿರುವ ಇವರ ನೇತೃತ್ವದ ‘ಶ್ರೀ ರಾಜರಾಜೇಶ್ವರಿ ಕಲಾನಿಕೇತನ್’ ನೃತ್ಯ ಸಂಸ್ಥೆಗೆ ಈ ವರ್ಷ ಸುವರ್ಣ ಸಂಭ್ರಮ. ಅಂತರಾಷ್ಟ್ರೀಯ ಮಟ್ಟದಲ್ಲೂ ಸುಪ್ರಸಿದ್ಧ ಕಲಾವಿದೆಯಾಗಿರುವ ವೀಣಾ ಅಪೂರ್ವ ನೃತ್ಯ ಸಂಯೋಜಕಿ- ಬದ್ಧತೆಯ ಗುರು, ಮಾರ್ಗದರ್ಶಿ ಮತ್ತು ಕಲಾ ಪ್ರೋತ್ಸಾಹಕಿ. ಈ ನಿಟ್ಟಿನಲ್ಲಿ ವೀಣಾ, ಕಲಾವಿದರಿಗೆ ವೇದಿಕೆ ಒದಗಿಸಿ ಅವರನ್ನು ಪ್ರೋತ್ಸಾಹಿಸಲು ಅನೇಕಾನೇಕ ನೃತ್ಯೋತ್ಸವಗಳನ್ನು ನಡೆಸುತ್ತಾ ಬಂದಿರುವುದು ಸರ್ವರಿಗೂ ವಿದಿತ.
ಅವರ ನುರಿತ ಗರಡಿಯಲ್ಲಿ ಸಾವಿರಾರು ಮಂದಿ ಉದಯೋನ್ಮುಖ ಕಲಾವಿದರು ರೂಹುಗೊಂಡು ರಂಗಪ್ರವೇಶ ಮಾಡಿ ಉತ್ತಮ ಕಲಾವಿದೆಯರಾಗಿ ಸಾಧಕ ಹೆಜ್ಜೆಗಳನ್ನು ಇರಿಸುತ್ತಿರುವ ಶ್ರೇಯಸ್ಸು ಇವರ ಅಗ್ಗಳಿಕೆ. ಹಿರಿ-ಕಿರಿಯರೆನ್ನುವ ತಾರತಮ್ಯತೆ ಇಲ್ಲದೆ ಎಲ್ಲರನ್ನೂ ತಮ್ಮೊಟ್ಟಿಗೆ ಕೊಂಡೊಯ್ಯುತ್ತ ಬೆಳೆಸುವುದು ಇವರ ವೈಶಿಷ್ಟ್ಯ. ಅದೇ ಇವರ ಅಸ್ಮಿತೆಯ ‘ಸಮನ್ವಯ’ತೆಯ ಗುಣ. ಇದನ್ನು ಎತ್ತಿಹಿಡಿಯುವ ಪ್ರಮುಖೋದ್ದೇಶದಿಂದ ಪ್ರತಿ ವರ್ಷವೂ ತಪ್ಪದೇ ಇವರು ನೆರವೇರಿಸುವ ವಿಶಿಷ್ಟ ಕಾರ್ಯಕ್ರಮವೇ ‘ಸಮನ್ವಯ ಕಲಾ ಉತ್ಸವ’. ಸಮಕಾಲೀನ ವಿಷಯ, ವಸ್ತುಗಳನ್ನು ಆಯ್ದುಕೊಂಡು ನೃತ್ಯರೂಪಕಗಳನ್ನು, ವಿನೂತನ ನೃತ್ಯಪ್ರಯೋಗಗಳನ್ನು ಸಮನ್ವಯದ ಶೀರ್ಷಿಕೆಯಡಿ ಆಯೋಜಿಸುತ್ತ ಬಂದಿದ್ದು, ಅದರಂತೆ ಈ ಹೊಸವರ್ಷದಲ್ಲಿ ಸಮನ್ವಯ ಕಲಾ ಉತ್ಸವವನ್ನು ದಿನಾಂಕ 18 ಏಪ್ರಿಲ್ 2026ರಂದು ಶನಿವಾರ ಸಂಜೆ 5-00 ಗಂಟೆಗೆ ಮಲ್ಲೇಶ್ವರದ ಸೇವಾಸದನದಲ್ಲಿ ವಿಭಿನ್ನ ಆಯಾಮದಲ್ಲಿ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಅನಾರೋಗ್ಯವನ್ನು ಸೃಷ್ಟಿಸುತ್ತಿರುವ ಜನತೆಗೆ ತಲೆನೋವಾಗಿರುವ ‘ಕಸದ ಸಮಸ್ಯೆ’ಯ ಬಗ್ಗೆ ಉತ್ತಮ ಸಂದೇಶಾತ್ಮಕ ಕಥಕ್ -ಸಮಕಾಲೀನ ನೃತ್ಯ ಶೈಲಿಯ ನೃತ್ಯರೂಪಕ ‘ಗಬ್ಬು ಕಥೆ’ಯನ್ನು ವಿನೋದಾತ್ಮಕವಾಗಿ, ವಿಮರ್ಶಕ ವಿಚಕ್ಷಣ ದೃಷ್ಟಿಯಿಂದ ಜನತೆಗೆ ಉತ್ತಮ ಸಂದೇಶ ಸಾರುವ ಮನರಂಜನಾತ್ಮಕವಾಗಿಯೂ ಇರುವ ಕಥಾರೂಪಕವನ್ನು ಸುಪ್ರಸಿದ್ಧ ಕಥಕ್ ಕಲಾವಿದರು, ಸಂಯೋಜಕರೂ ಆಗಿರುವ ಕೀರ್ತಿಕುಮಾರ್ ಮತ್ತು ತಂಡ ಪ್ರಸ್ತುತಪಡಿಸಲಿದ್ದಾರೆ. ಪರಿಸರ ರಕ್ಷಣೆ, ಶುದ್ಧ ವಾತಾವರಣದ ಮಹತ್ವವನ್ನು ಎಲ್ಲ ಮಕ್ಕಳೂ ಹಾಗೂ ಕುಟುಂಬ ವರ್ಗದವರೂ ಅರಿಯಬೇಕಾದ ಉತ್ತಮ ಪಾಠವನ್ನು ಅರುಹುವ ನೀತಿ ಸಂದೇಶ ಇದರಲ್ಲಿ ಅಡಗಿದೆ.





ನಂತರ- ಉತ್ತಮ ಪುರುಷನರ್ತಕರಾಗಿ ಗಮನ ಸೆಳೆದಿರುವ ನೃತ್ಯಕಲಾವಿದ ಶ್ರೀ ಸೂರ್ಯ ಎನ್. ರಾವ್ ಇವರು ಪರಿಕಲ್ಪಿಸಿ ಸಂಯೋಜಿಸಿರುವ ವಿಶಿಷ್ಟ ರಾವಣ ವ್ಯಕ್ತಿತ್ವದ ಬಗ್ಗೆ ನೂತನ ಆಯಾಮವನ್ನು ತೆರೆದಿಡುವ ಕುತೂಹಲ ಭರಿತವಾದ ಅಂಶಗಳ ಸುತ್ತ ಪರಿಭ್ರಮಿಸುವ ‘ರಾವಣ’ ಏಕವ್ಯಕ್ತಿ ನೃತ್ಯರೂಪಕವನ್ನು ಅನಾವರಣಗೊಳಿಸಲಿದ್ದಾರೆ. ಜನಜನಿತವಾಗಿ ಲೋಕ ಭಾವಿಸಿರುವಂತೆ ಅವನು ದುಷ್ಟ, ಖಳನಾಯಕನಲ್ಲ. ಬದಲಾಗಿ ಅವನಂಥ ಮಹಾ ಶಿವಭಕ್ತನಿಲ್ಲ. ಅಪರಿಮಿತ ಪೌರುಷವನ್ನುಳ್ಳ ಮೇಧಾವಿ, ಮಹಾನ್ ವೈಣಿಕ- ವಿದ್ವಾಂಸ, ತ್ರಿಕಾಲ ಜ್ಞಾನಿಯಾದ ರಾವಣನ ಶಕ್ತಿ- ಸಾಮರ್ಥ್ಯ- ಔದಾರ್ಯದ ವಿವಿಧ ಮುಖಗಳನ್ನು ಪರಿಚಯಿಸುವ ವಿಶಿಷ್ಟ ಪ್ರಯತ್ನ ಇದಾಗಿದೆ.




ಕಣ್ಮನ ರಂಜಿಸುವ ಕಾರ್ಯಕ್ರಮದ ಭಾಗವಾಗಿ ಇದರೊಡನೆ ಮನಸ್ಸನ್ನು ಅರಳಿಸುವ ಸುಮನೋಹರ ಭರತನಾಟ್ಯ ರಂಜನೆಯೂ ಇದೆ. ಈಗಾಗಲೇ ಉತ್ತಮ ಭರತನಾಟ್ಯ ಕಲಾವಿದೆಯರಾಗಿ ಗುರುತಿಸಿಕೊಂಡಿರುವ ಶ್ರೀಮತಿ ಜಯಶೀಲ ವಿನೋದ್ ಮತ್ತು ರವಳೀ ನಾಗೇಶ್ವರ ಇವರು ಹಲವಾರು ಮನಸೆಳೆವ ಕೃತಿಗಳನ್ನು ಸೊಗಸಾಗಿ ಅಭಿನಯಿಸಿ, ಸುಮನೋಹರವಾಗಿ ನರ್ತಿಸಲಿದ್ದಾರೆ. ಜನಮಾನಸವನ್ನು ಆಕರ್ಷಿಸುವ ಈ ಕಾರ್ಯಕ್ರಮಗಳ ಆಯೋಜಕರು ಡಾ. ವೀಣಾ ಮೂರ್ತಿ ವಿಜಯ್, ಇದರ ಹಿನ್ನಲೆಯಲ್ಲಿ ಇವರ ಅಪಾರ ಪರಿಶ್ರಮವನ್ನು ಗುರುತಿಸಬಹುದು. ಕಾಲಕಾಲಕ್ಕೆ ನಗರದ ಕಲಾರಸಿಕರಿಗೆ ನೃತ್ಯಧಾರೆಯ ಸವಿಯನ್ನು ಬದ್ಧತೆಯಿಂದ ಉಣಬಡಿಸುತ್ತಿರುವುದು ಇವರ ಕಲಾ ಪ್ರೀತಿಯ ದ್ಯೋತಕ. ಮನ ತಣಿಸುವ ಈ ಸುಂದರ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಕಲಾರಸಿಕರೆಲ್ಲರಿಗೂ ಆದರದ ಸುಸ್ವಾಗತ.



*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
