ಧಾರವಾಡ : ಧಾರವಾಡದ ಕರ್ನಾಟಕ ಕುಲ ಪುರೋಹಿತ ಆಲೂರ ವೆಂಕಟರಾವ್ ಸಭಾಭವನದಲ್ಲಿ ದಿನಾಂಕ 07 ಏಪ್ರಿಲ್ 2026ರಂದು ಧಾರವಾಡದ ‘ಸ್ವರ ಲಯಾರಾಧನೆ ಸಂಗೀತ ಸಂಸ್ಥೆ’ ಮತ್ತು ‘ಸುಮಧ್ವ ಸಂಗೀತ ವಿದ್ಯಾಲಯ’ದ ‘ವಾರ್ಷಿಕ ಸಂಗೀತೋತ್ಸವ – 2026’ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದ ಖ್ಯಾತ ಸಂಗೀತಗಾರ ಡಾ. ಎಂ. ವೆಂಕಟೇಶ ಕುಮಾರ “ಯಾವುದೇ ಕಲೆಯನ್ನು ಕರಗತಮಾಡಿಕೊಳ್ಳಬೇಕಾದರೆ ಗುರುವಿನ ಮಾರ್ಗದರ್ಶನ ಬೇಕೇಬೇಕು. ಜಯತೀರ್ಥ ಮತ್ತು ವೈಷ್ಣವಿ ಪಂಚಮುಖಿ ದಂಪತಿಗಳ ಶಿಷ್ಯರು, ಗುರುಗಳು ಹೇಳಿಕೊಡುವ ವಿದ್ಯೆಯನ್ನು ಶ್ರದ್ಧೆಯಿಂದ ಕಲಿತು ಸಂಗೀತ ಪ್ರಪಂಚದಲ್ಲಿ ಉನ್ನತ ಸ್ಥಾನ ಹೊಂದಬೇಕು” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ವೇದಮೂರ್ತಿ ಪಂಡಿತ್ ರಮೇಶ ಭಟ್ ಜೋಶಿ ಮತ್ತು ಡಾ. ಉದಯಕುಮಾರ ದೇಸಾಯಿ ಹಾಗೂ ಪಂಡಿತ್ ಅನಂತ ಕುಲಕರ್ಣಿ ಇವರೂ ಮಾತನಾಡಿ ಶುಭ ಹಾರೈಸಿದರು. ಪವನಕುಮಾರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವರ ಲಯಾರಾಧನೆ ಸಂಸ್ಥೆಯ ವಿದ್ಯಾರ್ಥಿಗಳು ಬೆಳಗಿನ 09-00 ಗಂಟೆಯಿಂದ ರಾತ್ರಿ 09-00 ರವರೆಗೂ ವಿವಿಧ ಕಲಾಪ್ರಕಾರಗಳಲ್ಲಿ ಅಂದರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ತಬಲಾ ಸೋಲೋ, ದಾಸವಾಣಿ, ವಚನ, ಭಾವಗೀತೆ, ಅಭಂಗ ಮತ್ತು ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿದರು.

ಬೆಳಿಗ್ಗೆ 09-00 ಗಂಟೆಗೆ ಹಿಂದೂಸ್ತಾನಿ ಗಾಯಕಿ ಶ್ರೀಮತಿ ರಾಧಿಕಾ ಕಾಖಂಡಿಕಿ ಮತ್ತು ಗಣಕ ಶಾಸ್ತ್ರಜ್ಞ ಮುರಳೀಧರ ಪಂಚಮುಖಿ ಇವರು ‘ಸಂಗೀತ ವಾರ್ಷಿಕೋತ್ಸವ – 2026’ಕ್ಕೆ ಚಾಲನೆ ನೀಡಿದರು. ಶ್ರೀಮತಿ ರಾಧಿಕಾ ಕಾಖಂಡಿಕಿ ಇವರು ಮಾತನಾಡಿ ‘ಗುರುಕುಲ ಪದ್ಧತಿಯ ಶುದ್ಧ ಸಂಗೀತ ಕಲಿಕೆ ಯಾವಾಗಲೂ ಅತ್ಯಂತ ಮಹತ್ವಪೂರ್ಣ. ಜೀವನದುದ್ದಕ್ಕೂ ನಾವು ಮಾಡುವ ಯಾವುದೇ ಕಾರ್ಯಗಳ ಮಧ್ಯೆ ಸಂಗೀತದ ಜ್ಞಾನವನ್ನು ಸರಿಯಾಗಿ ಉಪಯೋಗ ಮಾಡಿಕೊಂಡರೆ, ಜೀವನಪೂರ್ತಿ ನೆಮ್ಮದಿಯಾಗಿರಬಹುದು. ಭಕ್ತಿ ಮತ್ತು ಶ್ರದ್ಧೆಯಿಂದ ಗುರುವಿನ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಬೇಕು. ಸಂಗೀತ ಒಂದು ವ್ಯಾಪಾರವಲ್ಲ. ಶುದ್ಧ ಕಲೆ” ಎಂದು ಪಂಚಮುಖಿ ದಂಪತಿಗಳ ಶ್ರಮ ಸಾರ್ಥಕ ಎಂದು ಶ್ಲಾಘಿಸಿದರು.
ಮುರುಳೀಧರ ಪಂಚಮುಖಿ ಮಾತನಾಡಿ ‘ಸ್ವರ ಲಯಾರಾಧನೆ ಸಂಸ್ಥೆಯ ಎಲ್ಲಾ ಮಕ್ಕಳಿಗೆ ಶುಭ ಹಾರೈಸಿ, ಪಂಚಮುಖಿ ದಂಪತಿಗಳ ಸಂಸ್ಥೆ ಉತ್ತರೋತ್ತರ ಅಭಿಪ್ರಾಯ ಹೊಂದಲಿ ಎಂದು ಹಾರೈಸಿದರು. ನಂತರದಲ್ಲಿ ಗಾಯಕಿ ರಾಧಿಕಾ ಕಾಖಂಡಿಕಿ ಮತ್ತು ಪ್ರಾಧ್ಯಾಪಕ ಮುರುಳೀಧರ ಪಂಚಮುಖಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳಿಗೆ ನಿಷ್ಣಾತ ಕಲಾವಿದರೂ ತಮ್ಮ ಕಲೆಯನ್ನು ಪ್ರದರ್ಶಿಸಿ ಶುಭ ಹಾರೈಸಿದರು. ಖ್ಯಾತ ಗಾಯಕ ಸದಾಶಿವ ಐಹೊಳೆ ಇವರು ರಾಗ ಪಟದೀಪದಿಂದ ಪ್ರಾರಂಭಿಸಿ ನಂತರ ದಾಸವಾಣಿ, ವಚನ, ಅಭಂಗ ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ಡಾ. ಶ್ರೀಹರಿ ದಿಗ್ಗಾವಿ ಹಾಗೂ ಹಾರ್ಮೋನಿಯಂನಲ್ಲಿ ಕಿರಣ ಆಯಾಚಿತ ಸಹಕರಿಸಿದರು.
ಯುವ ತಬಲಾ ವಾದಕ ಅರ್ಜುನ್ ಕಾಳಿ ಪ್ರಸಾದ್ ಪುಣೆ ಇವರು ತೀನ್ ತಾಳದಲ್ಲಿ ತಬಲಾ ಸೋಲೊ ಪ್ರಸ್ತುತಪಡಿಸಿದರು. ಇವರಿಗೆ ಲೆಹರಾ ಸಾಥಿಯಲ್ಲಿ ವಿನೋದ್ ಪಾಟೀಲ್ ಸಹಕರಿಸಿದರು. ಖ್ಯಾತ ದಾಸವಾಣಿ ಹಾಡುಗಾರ ಅನಂತ ಕುಲಕರ್ಣಿ ಬಾಗಲಕೋಟೆ ಇವರು ದಾಸವಾಣಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇವರಿಗೆ ತಬಲಾದಲ್ಲಿ ಜಯತೀರ್ಥ ಪಂಚಮುಖಿ ಹಾಗೂ ಕುಮಾರಿ ಸುಮನ್ಯು ಪಂಚಮುಖಿ, ಹಾರ್ಮೋನಿಯಂನಲ್ಲಿ ಚಿದಂಬರ ಜೋಶಿ ಹಾಗೂ ತಾಳದಲ್ಲಿ ಸುಧೀಂದ್ರ ಆಚಾರ್ಯ ಮತ್ತು ಸಂತೋಷ ಅಳವಂಡಿ ಇವರು ಸಹಕರಿಸಿದರು. ಜಯತೀರ್ಥ ಪಂಚಮುಖಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಂಗೀತ ಆಸಕ್ತರು ಮತ್ತು ವಿದ್ಯಾರ್ಥಿಗಳ ಪಾಲಕರು ಪ್ರದರ್ಶನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಪಂಡಿತ್ ರವೀಂದ್ರ ಯಾವಗಲ್ ಆಗಮಿಸಿ ಮಕ್ಕಳಿಗೆ ಶುಭ ಕೋರಿದರು. ಪಂಡಿತ್ ಶಾಂತಾರಾಮ್ ಹೆಗಡೆ, ಪಂಡಿತ್ ಮಲ್ಲಿಕಾರ್ಜುನ ತರ್ಲಗಟ್ಟಿ, ಪಂಡಿತ್ ಶಾಂತಲಿಂಗ ದೇಸಾಯಿ, ಹರ್ಷ ಡಂಬಳ, ಡಾ. ಹ. ವೆಂ. ಕಾಖಂಡಿಕಿ, ಡಾ. ಶ್ರೀಧರ ಕುಲಕರ್ಣಿ, ಅನಿಲ ಕಾಖಂಡಿಕಿ, ರಮೇಶ ಕಾಖಂಡಿಕಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
