ಹೊಸದಿಲ್ಲಿ : ಹೆಸರಾಂತ ಬಂಗಾಳಿ ಲೇಖಕ ಡಾ. ರಾಮ್ ಕುಮಾರ್ ಮುಖ್ಯೋಪಾಧ್ಯಾಯ ಇವರ ‘ಹರ-ಪಾರ್ವತಿ ಕಥಾ’ ಕಾದಂಬರಿಯನ್ನು ಪ್ರತಿಷ್ಠಿತ 2025ನೇ ಸಾಲಿನ ‘ಸರಸ್ವತಿ ಸಮ್ಮಾನ್ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಈ ಕಾದಂಬರಿಯು ಶಿವ ಮತ್ತು ಪಾರ್ವತಿ ಕುರಿತ ಪೌರಾಣಿಕ ಕಥಾ ಹಂದರವನ್ನು ಆಧುನಿಕ ಸೌಂದರ್ಯ ಪ್ರಜ್ಞೆಯ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸುವ ವಿಷಯವನ್ನು ಹೊಂದಿದೆ. ಭಾರತೀಯ ಪ್ರಜೆಗಳು ದೇಶದ ಯಾವುದೇ ಭಾಷೆಯಲ್ಲಿ ಬರೆದ ಶ್ರೇಷ್ಠ ಸಾಹಿತ್ಯ ಕೃತಿಗೆ ಕೆ.ಕೆ. ಬಿರ್ಲಾ ಫೌಂಡೇಷನ್ 1991ರಿಂದ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಪ್ರಶಸ್ತಿ ಮೊತ್ತವು ರೂ.ಹದಿನೈದು ಲಕ್ಷ ಆಗಿದ್ದು, ಪಾರಿತೋಷಕವನ್ನು ಒಳಗೊಂಡಿದೆ.
ರಾಮ್‌ಕುಮಾರ್ ಮುಖ್ಯೋಪಾಧ್ಯಾಯ ಇವರು ಕೋಲ್ಕತ್ತದಲ್ಲಿ 1956 ಅಕ್ಟೋಬರ್ 5ರಂದು ಜನಿಸಿದರು. ಹೌರಾದ ರಾಮಕೃಷ್ಣ ಮಿಷನ್ ವಿದ್ಯಾಮಂದಿರದಲ್ಲಿ ಪದವಿ ಮತ್ತು ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯ ಪೂರ್ವ ಮತ್ತು ಈಶಾನ್ಯ ಪ್ರದೇಶದ ಕಾರ್ಯದರ್ಶಿಯಾಗಿ ಮತ್ತು ವಿಶ್ವ ಭಾರತಿ ಪ್ರಕಾಶನ ಇಲಾಖೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಬಹುಮುಖಿ ಪ್ರತಿಭೆಯನ್ನು ಹೊಂದಿರುವ ರಾಮ್ ಕುಮಾರ್ ಇವರು 9 ಕಾದಂಬರಿ, 11 ಕಥಾ ಸಂಗ್ರಹ ಹಾಗೂ 4 ಪ್ರಬಂಧ ಸಂಗ್ರಹಗಳನ್ನು ಹೊರತಂದಿದ್ದಾರೆ. ಎರಡು ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಅಲ್ಲದೇ, 54 ಭಾಷೆಗಳ ಸುಮಾರು 128 ಜನಪದ ಕಥೆಗಳನ್ನು ಸಂಗ್ರಹಿಸಿದ್ದಾರೆ. 2020ರಲ್ಲಿ ‘ಹರ-ಪಾರ್ವತಿ ಕಥಾ’ ಕಾದಂಬರಿ ಪ್ರಕಟವಾಗಿದ್ದು, ಬಂಕಿಮಚಂದ್ರ ಪುರಸ್ಕಾರ ಮತ್ತು ಬಾಂಗ್ಲಾ ಅಕಾಡೆಮಿ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
