ಮಂಗಳೂರು : ಸರಯೂ ಮಕ್ಕಳ ಮೇಳದ ‘ಸರಯೂ ಬಾಲ ಯಕ್ಷ ವೃಂದ’ದ ವತಿಯಿಂದ ಕದ್ರಿ ದೇವಳದ ಸಹಕಾರದಲ್ಲಿ 26ನೇ ವರ್ಷದ ‘ಸರಯೂ ಅಷ್ಠಾಹ’ ಕಾರ್ಯಕ್ರಮವು ದಿನಾಂಕ 25 ಮೇ 2026ರಂದು ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮವನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರುರವರು ಉದ್ಘಾಟಿಸಿ “ನಮ್ಮ ಹೆಮ್ಮೆಯ ಕಲೆ ಯಕ್ಷಗಾನವಿಂದು ಪೀಳಿಗೆಯಿಂದ ಪೀಳಿಗೆಗೆ ಮಕ್ಕಳ ಸಕ್ರಿಯ ಭಾಗವಹಿಸುವಿಕೆಯಿಂದ ವರ್ಗಾಯಿಸಲ್ಪಟ್ಟು ಅಳಿವಿಲ್ಲದ ಕಲೆಯಾಗಿ ಬೆಳಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲೂ ಈ ಕಲೆಗೆ ಮಾನ್ಯತೆ ಇದೆ. ರಾಜಾಶ್ರಯವನ್ನು ಬಯಸುವ ಈ ಕಲೆಗೆ, ಸರಯೂ ಮಕ್ಕಳ ಮೇಳಕ್ಕೆ ನಾವೆಲ್ಲಾ ಪೂರ್ಣ ಬೆಂಬಲ ನೀಡೋಣ. ಕಲೆ, ಕಲಾವಿದರು ಬೆಳಗಲಿ” ಎಂದು ಶುಭಹಾರೈಸಿದರು.

ನಿವೃತ್ತ ಶಿಕ್ಷಕ ಹಾಗೂ ನಿರೂಪಕರಾದ ಸುಧಾಕರ ರಾವ್ ಪೇಜಾವರ್ ರವರು ನಿರ್ವಹಿಸಿದರು. ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯರು ಸ್ವಾಗತ – ಪ್ರಸ್ತಾವನೆ ಮಾಡಿದರು. ಮುದ್ರಣ ಕ್ಷೇತ್ರದಲ್ಲಿ ಹೆಸರುವಾಸಿಯಾದ ‘ಫಿಕ್ಸೆಲ್ಸ್’ ಸಂಸ್ಥೆಯ ಮ್ಹಾಲಕರಾದ ವಿಕ್ಟರ್ ಅಂದ್ರಾದೆಯವರನ್ನು ‘ಯಕ್ಷ ಸರಯೂ’ ಬಿರುದಿತ್ತು ಸನ್ಮಾನಿಸಲಾಯಿತು. ಶ್ರೀಮತಿ ಅನುಪಮಾ ಪ್ರಭಾಕರ ಅಡಿಗ ಸನ್ಮಾನ ಪತ್ರ ವಾಚಿಸಿದರು. ವರ್ಕಾಡಿ ಮಧುಸೂದನ ಅಲೆವೂರಾಯ ಕೃತಜ್ಞತೆ ಅರ್ಪಿಸಿದರು.

ಉತ್ತರ ಭಾರತದ ಯಕ್ಷಾಭಿಮಾನಿ ದೀಪಕ್ ಶರ್ಮಾ, ರವೀಂದ್ರ ಶೇಟ್, ಪೇಜಾವರ ಪ್ರಭಾಕರ ರಾವ್, ಮಂಗಳೂರು ಲೋಕಾಯುಕ್ತ ಇನ್ಸ್ ಪೆಕ್ಟರ್ ಚಂದ್ರಶೇಖರ್, ದಿನೇಶ್ ಮರೋಳಿ, ಕದ್ರಿ ದೇವಳದ ಮಾಜಿ ಸದಸ್ಯೆ ನಿವೇದಿತಾ ಶೆಟ್ಟಿ, ವಿಜಯಲಕ್ಷ್ಮೀ ಯಲ್.ಎನ್., ಸರಯೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಪೂರ್ವದಲ್ಲಿ ಯಕ್ಷ ಸ್ನೇಹ ಪ್ರತಿಷ್ಠ ಪ್ರತಿಷ್ಠಾನ (ರಿ.) ಕೊಂಚಾಡಿ ತಂಡದಿಂದ ‘ದಕ್ಷಾಧ್ವರ’ ಎಂಬ ತಾಳಮದ್ದಳೆಯೂ, ನಂತರ ಖ್ಯಾತ ಕಲಾವಿದರ ಕೂಡುವಿಕೆಯಿಂದ ‘ಶ್ರೀ ಏಕಾದಶೀ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ಸಂಪನ್ನಗೊಂಡಿತು.


