ಮಂಗಳೂರು : ಸರಯೂ ಮಕ್ಕಳ ಮೇಳದ ‘ಸರಯೂ ಬಾಲ ಯಕ್ಷ ವೃಂದ’ದ ವತಿಯಿಂದ ಕದ್ರಿ ದೇವಳದ ಸಹಕಾರದಲ್ಲಿ 26ನೇ ವರ್ಷದ ‘ಸರಯೂ ಅಷ್ಠಾಹ’ದ ಎರಡನೇ ದಿನದ ಕಾರ್ಯಕ್ರಮವು ದಿನಾಂಕ 26 ಮೇ 2026ರಂದು ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಕ್ಷಗಾನ ವಿದ್ವಾಂಸ ಡಾ. ಮಾಳ ಪ್ರಭಾಕರ ಜೋಷಿಯವರು ಮಾತನಾಡಿ “ಯಕ್ಷಗಾನಕ್ಕೆ ಹಿರಿಯರ ಕೊಡುಗೆ ಅಪಾರ ಮತ್ತು ಅನುಸರಣೀಯ. ಉತ್ತಮ ಕಲಾವಿದರ ನಡೆ – ನುಡಿಯೂ ಅನುಸರಣೀಯ. ಕಿರಿಯರಿಗೆ ತಮ್ಮನ್ನು ತಾವು ಅನುಸಂಧಾನ ಮಾಡಿಕೊಳ್ಳಲು ಅನುಕೂಲವೂ ಆಗುತ್ತದೆ. ಅನೇಕ ಆಕರ ಗ್ರಂಥಗಳೂ ಲಭ್ಯ. ಆ ದಾರಿಯಲ್ಲಿ ನಡೆದರೆ ಕಲೆ ಇನ್ನಷ್ಟು ಬೆಳಗುತ್ತದೆ.” ಎಂದು ಹೇಳಿ ಬಡಗಿನ ಬಣ್ಣದ ಕಲಾವಿದ ಸಕ್ಕಟ್ಟು ಲಕ್ಷೀ ನಾರಾಯಣಯ್ಯರ ಸಂಸ್ಮರಣೆಯನ್ನೂ ನಡೆಸಿಕೊಟ್ಟರು.

ಉತ್ತಮ ಹಿಮ್ಮೇಳ ಕಲಾವಿದ ಕಟೀಲು ಮುರಳೀಧರ ಭಟ್ ಇವರನ್ನು ಸನ್ಮಾನಿಸಲಾಯಿತು. ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ಕಲಾವಿದರ ಅಭಿನಂದನೆ ಮಾಡಿದರು. ಪೂರ್ಣಿಮಾ ಪ್ರಭಾಕರ ರಾವ್ ಸನ್ಮಾನ ಪತ್ರ ವಾಚಿಸಿದರು. ಹಿರಿಯ ಕಲಾವಿದ ಪದ್ಯಾಣ ಶಂಕರನಾರಾಯಣ ಭಟ್, ವನಜ ಎಸ್. ಭಟ್, ನಿವೃತ್ತ ಅಧ್ಯಾಪಕ ಗೋಪಾಲಕೃಷ್ಣ ಭಟ್ ದೇವ ಕಾನ, ಶ್ರೀಮತಿ ವಿದ್ಯಾ ಶರ್ಮಾ, ಸುಧಾಕರ ರಾವ್ ಪೇಜಾವರ ಅತಿಥಿಗಳಾಗಿದ್ದರು. ಸರಯೂ ಅಧ್ಯಕ್ಷ ಮಧುಸೂದನ ಅಲೆವೂರಾಯ ವಂದಿಸಿದರು. ಕು. ನಿತ್ಯಶ್ರೀ ಪೂಜಾರಿ ಕಲಾವಿದರನ್ನು ಪರಿಚಯಿಸಿದರು. ಬಳಿಕ ಸರಯೂ ತಂಡ ಹಾಗೂ ಮೇಳದ ಕಲಾವಿದರಿಂದ ‘ಮೀನಾಕ್ಷಿ ಕಲ್ಯಾಣ’ ಎಂಬ ಆಖ್ಯಾನ ಜರಗಿತು.



