ಕುಂದಾಪುರ : ಕಾಸರಗೋಡಿನ ಧರ್ಮತ್ತಡ್ಕದಲ್ಲಿ ಜನಿಸಿ ಜಗತ್ತಿನ ಮಹಾನ್ ವಿಜ್ಞಾನಿಯಾಗಿ ಬೆಳಗಿದ ಡಾ. ರಾಮ ಬಿ. ಭಟ್ (ಲೇಖಕಿ ಪಾರ್ವತಿ ಜಿ. ಐತಾಳ್ ಇವರ ಅಣ್ಣ) ದಿನಾಂಕ 24 ಮೇ 2026ರಂದು ವಯೋಸಹಜ ಅಸ್ವಸ್ಥತೆಯಿಂದ ಕೆನಡಾದ ಟೊರೆಂಟೋದಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಸುರತ್ಕಲ್ ಕೆ.ಆರ್.ಇ.ಸಿ.ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಬಿ.ಇ., ಮದರಾಸಿನ ಐ.ಐ.ಟಿ.ನಲ್ಲಿ ಎಂ.ಟೆಕ್ ಮತ್ತು ‘ನಾದ ಮತ್ತು ಕಂಪನ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದ ಇವರು ತದನಂತರ ತಿರುವನಂತಪುರಂ ಸಮೀಪದ ತುಂಬಾ ರಾಕೆಟ್ ಸೆಂಟರ್ ನಲ್ಲೂ ಅಮೇರಿಕಾದ ‘ನಾಸಾ’ದಲ್ಲೂ ಸ್ವಲ್ಪ ಕಾಲ ಸೇವೆ ಸಲ್ಲಿಸಿ 1980ರಲ್ಲಿ ಕೆನಡಾದ ಮಾಂಟ್ರಿಯಲ್ ನ ಕಾಂಕಾರ್ಡಿಯಾ ಯುನಿವರ್ಸಿಟಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಡೀನ್ ಆಗಿ ಸೇರಿದರು. ನೂರಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ, ನೂರಾರು ಅಂತರ್ರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿದರು. ‘ನಾದ ಮತ್ತು ಕಂಪನ’ ವಿಷಯದ ಮೇಲೆ ಇವರು ಬರೆದ ಇನ್ನೂರಕ್ಕೂ ಮಿಕ್ಕಿದ ಸಂಶೋಧನಾ ಪ್ರಬಂಧಗಳು ಅಂತರ್ರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿವೆ.
ವಿಜ್ಞಾನ ಮಾತ್ರವಲ್ಲದೆ ಬಾಳಿಕೆ ರಾಮ ಭಟ್ ಅನ್ನುವ ಹೆಸರಿನಲ್ಲಿ ಓರ್ವ ಸಾಹಿತಿಯಾಗಿಯೂ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕವನ ಸಂಕಲನ ‘ನಗೆಗೆ ಇರಲಿ ಬಾಳಿಕೆ’ (ಪ್ರ : ಕನ್ನಡ ಸಾಹಿತ್ಯ ಪರಿಷತ್ತು) ವಿಜ್ಞಾನ ಲೇಖನ ‘ನಾದ’ (ಪ್ರ : ನವಕರ್ನಾಟಕ ಪಬ್ಲಿಕೇಶನ್ಸ್), ‘ಅನುಭವ ಕಥನ ಬಾಳಿಕೆಯಿಂದ ಕೆನಡಾಕ್ಕೆ’ (ಜನಪ್ರತಿನಿಧಿ ಪ್ರಕಾಶನ), ಇಂಗ್ಲೀಷ್ ನಲ್ಲಿ ‘ದಿ ಡಿವೈನ್ ಆಂಜನೇಯ’ ಮತ್ತು ‘ಝುವಾಂಗ್ ಜಾಂಗ್ಸ್ ಜರ್ನಿ ಟು ದ ವೆಸ್ಟ್’ ಎಂಬ ಎರಡು ಕಾದಂಬರಿಗಳು (ಆದಿತ್ಯ ಪಬ್ಲಿಕೇಶನ್ಸ್ ಡೆಲ್ಲಿ) ಇವರ ಕೃತಿಗಳು. ರಾಮ ಭಟ್ಟರು ಪತ್ನಿ ಪಾರ್ವತಿ ಮತ್ತು ಮಕ್ಕಳಾದ ಡಾ. ಮಮತಾ ಭಟ್ ಮತ್ತು ಡಾ. ಅಪರ್ಣಾ ಭಟ್, ಬಂದುಗಳು ಮತ್ತು ಅಪಾರ ಶಿಷ್ಯವರ್ಗವನ್ನು ಬಿಟ್ಟು ಅಗಲಿದ್ದಾರೆ.
