ಉಡುಪಿ : ತುಳು ರಂಗಭೂಮಿಯ ಹಿರಿಯ ಕಲಾವಿದ, ಕಾಪು ರಂಗ ತರಂಗ ನಾಟಕ ತಂಡದ ಸ್ಥಾಪಕ ಸದಸ್ಯ, ಮಾಜಿ ಸಂಚಾಲಕ ಸುಜಿತ್ ಶೆಟ್ಟಿ ಪಾದೂರು (54) ಅವರು ಅನಾರೋಗ್ಯದ ಕಾರಣದಿಂದ ದಿನಾಂಕ 03 ಏಪ್ರಿಲ್ 2026ರಂದು ನಿಧನ ಹೊಂದಿದರು. ಅವರ ಅಗಲಿಕೆಯು ಕರಾವಳಿಯ ಸಾಂಸ್ಕೃತಿಕ ಮತ್ತು ರಂಗಭೂಮಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
ಪ್ರಸಿದ್ಧ ರಂಗ ಕಲಾವಿದರಾಗಿದ್ದ ಅವರು ಹಾಸ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಪಾತ್ರಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ, ಪ್ರೇಕ್ಷಕರ ಮನ ಗೆದ್ದಿದ್ದರು. ಗಂಭೀರ ಸಾಮಾಜಿಕ ಜವಾಬ್ದಾರಿಯ ಪಾತ್ರಗಳನ್ನು ಅಷ್ಟೇ ತನ್ಮಯತೆಯಿಂದ ನಿರ್ವಹಿಸುತ್ತಿದ್ದರು. ಇವರ ಅಭಿನಯಕ್ಕೆ ಕರಾವಳಿಯಾದ್ಯಂತ ಅಪಾರ ಅಭಿಮಾನಿ ಬಳಗವಿತ್ತು. ಕೆ. ಲೀಲಾಧರ ಶೆಟ್ಟಿ ಇವರ ಸಾರಥ್ಯದ ‘ಕಾಪು ರಂಗ ತರಂಗ’ ಕಲಾವಿದರು ತಂಡದ ಸ್ಥಾಪಕ ಸದಸ್ಯರಾಗಿ, ತಂಡದ ಸಮಗ್ರ ನಿರ್ವಹಣೆಯ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು. ಕಳೆದ 20 ವರ್ಷಗಳಿಂದ ತಂಡದೊಂದಿಗೆ ಗುರುತಿಸಿಕೊಂಡಿದ್ದು, ಸುಜಿತ್ ಶೆಟ್ಟಿ ಅವರು ಕೇವಲ ಸಂಘಟಕರಷ್ಟೇ ಆಗಿರದೆ, ಅದ್ಭುತ ನಟರೂ ಆಗಿದ್ದರು. ತುಳು ಮತ್ತು ಕನ್ನಡ ಚಲನಚಿತ್ರಗಳಲ್ಲೂ ಪಾತ್ರ ನಿರ್ವಹಿಸಿದ್ದರು. ಉಡುಪಿ ರಂಗ ಭೂಮಿ ತಂಡದ ಸದಸ್ಯರಾಗಿದ್ದ ಇವರು ಹಲವಾರು ಸಂಘ ಸಂಸ್ಥೆ ಗಳಲ್ಲಿ ಸೇವೆ ಸಲ್ಲಿದ್ದರು. ಕೆಲವು ಸಮಯಗಳಿಂದ ಅಸೌಖ್ಯದಿಂದಾಗಿ ನಟನೆಯಿಂದ ದೂರ ಉಳಿದಿದ್ದರು. ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.
