Subscribe to Updates

    Get the latest creative news from FooBar about art, design and business.

    What's Hot

    ನೃತ್ಯ-ಭಾವಗಳ ಸಂಭಾಷಣೆ! – ಮೀರಾ ಶ್ರೀನಾರಾಯಣನ್ ನೃತ್ಯ ಪ್ರದರ್ಶನ

    November 11, 2025

    ಮೂಡುಬಿದಿರೆಯಲ್ಲಿ ಶ್ರೀ ಯಕ್ಷನಿಧಿ ದಶಮಾನೋತ್ಸವ ಸಮಾರಂಭ

    November 11, 2025

    ಬ್ರಹ್ಮಾವರದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ನುಡಿಚಿತ್ತಾರ 2025

    November 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪ್ರಸಿದ್ಧ ಆಕಾಶವಾಣಿ ಕಲಾವಿದೆ ಹಾಗೂ ಗಾಯಕರಾದ ಶ್ರೀಮತಿ ಅನುರಾಧ ಧಾರೇಶ್ವರ ನಿಧನ
    Music

    ಪ್ರಸಿದ್ಧ ಆಕಾಶವಾಣಿ ಕಲಾವಿದೆ ಹಾಗೂ ಗಾಯಕರಾದ ಶ್ರೀಮತಿ ಅನುರಾಧ ಧಾರೇಶ್ವರ ನಿಧನ

    October 9, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಧಾರವಾಡದ ಪ್ರಸಿದ್ಧ ಆಕಾಶವಾಣಿ ಕಲಾವಿದರು ಹಾಗೂ ಗಾಯಕರಾದ ಶ್ರೀಮತಿ ಅನುರಾಧ ಧಾರೇಶ್ವರ ಅವರು ದಿನಾಂಕ 09 ಅಕ್ಟೋಬರ್ 2025ರಂದು ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

    1938ರ ನವೆಂಬರ್ 26ರಂದು ಹುಬ್ಬಳ್ಳಿಯಲ್ಲಿ ಜನಿಸಿದ ಅನುರಾಧಾ ತಂದೆ ನಾಗೇಶ್‌ರಾವ್ ಹಾಗೂ ತಾಯಿ ಕೃಷ್ಣಾಭಾಯಿ ಇಟ್ಟ ಹೆಸರು ಶಾಂತಾಮತಿ. ಸಂಪ್ರದಾಯದ ರೀತಿ ಶಾಂತಾಮತಿ ಮದುವೆಯ ನಂತರ ಅನುರಾಧಾ ಧಾರೇಶ್ವರರಾಗಿ ಆ ಹೆಸರಿನಿಂದಲೇ ಪ್ರಸಿದ್ಧಿ ಪಡೆದರು. ಅನುರಾಧಾ ಅವರು, ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಕಷ್ಟಗಳ ನಡುವೆ ಹೋರಾಟದ ಜೀವನ ನಡೆಸಿ ಅತ್ಯುತ್ತಮ ಗಾಯಕಿಯಾಗಿ ರೂಪುಗೊಂಡಿದ್ದು ಮಹತ್ತರವಾದ ಸಾಧನೆಯೇ ಸರಿ. ಚಿಕ್ಕಂದಿನಿಂದಲೇ ಶಾಲಾ ಸಮಾರಂಭಗಳಲ್ಲಿ ಹಾಡುತ್ತಾ ಬಂದರು. ಈಕೆಯ ಮಧುರ ಕಂಠ ಮತ್ತು ಗುಣಸ್ವಭಾವಗಳನ್ನು ಆತ್ಮೀಯವಾಗಿ ಕಂಡ ರಾಮಚಂದ್ರ ಜಂತ್ರಿ ದಂಪತಿಗಳು ಇವರ ಬಗ್ಗೆ ವಿಶೇಷ ಕಾಳಜಿ ವಹಿಸಿ ತಾವು ಕಲಿತ ಸಂಗೀತವೆಲ್ಲವನ್ನು ಧಾರೆ ಎರೆದರು. ಅನುರಾಧಾ ಅವರಿಗೆ ಶಾಸ್ತ್ರೀಯ ಸಂಗೀತದ ಮಜಲುಗಳು ಪರಿಚಯವಾಗುತ್ತಿದ್ದಂತೆ ಭಾವಗೀತೆಗಳನ್ನೂ ಹೇಳಿಕೊಡುತ್ತಾ ಬಂದರು. ಹೀಗೆ ಶ್ರೇಷ್ಠ ಕವಿಗಳ ಕವಿತೆಗಳು ಅನುರಾಧಾ ಅವರಿಗೆ ಕರಗತವಾಯಿತು. ಅನುರಾಧಾ ವೇದಿಕೆಗಳಲ್ಲಿ ಹಾಡುತ್ತಿದ್ದ ಭಾವಗೀತೆ ಹಾಗೂ ನಾಡಗೀತೆಗಳನ್ನು ಕೇಳಿದವರು ಆಕೆಯನ್ನು ಅಪಾರವಾಗಿ ಅಭಿಮಾನಿಸುತ್ತಿದ್ದರು. ಇವರ ಏರುದನಿ ಮತ್ತು ಧ್ವನಿ ಮಾಧುರ್ಯತೆಗೆ ಮಾರು ಹೋಗದವರೇ ಇರಲಿಲ್ಲ. ಈ ಪುಟ್ಟ ಬಾಲಕಿ ಗಾಯನದ ಜೊತೆಗೆ ಓದಿನಲ್ಲೂ ಮುಂದುವರಿದು 10ನೇ ತರಗತಿಯನ್ನು ಮುಗಿಸಿದರು. ತಮ್ಮ ತಾಯಿ ತಮ್ಮನ್ನು ಓದಿಸಲು, ಬೆಳಸಲು ಪಡುತ್ತಿದ್ದ ಕಷ್ಟವನ್ನು ಕಂಡಿದ್ದ ಅನುರಾಧಾ ತಾವೂ ಕೂಡ ತಮ್ಮ ಸಂಸಾರಕ್ಕೆ ನೆರವಾಗಲು ನಿರ್ಧರಿಸಿ ತಮ್ಮ ಓದನ್ನು 10ನೇ ತರಗತಿಗೆ ಮೊಟುಕುಗೊಳಿಸಿದರು. ಇದೇ ಸಂದರ್ಭದಲ್ಲಿ ಇವರ ಸಂಸಾರವನ್ನು ಹತ್ತಿರದಿಂದ ನೋಡಿದ್ದ ಬಾಸೆಲ್ ಮಿಶನ್ ಗರ್ಲ್ಸ್ ಸ್ಕೂಲ್‌ನ ಹೆಡ್‌ಮಾಸ್ತರ್ ಅಮ್ಮಣ್ಣನವರು ಈಕೆಯ ಗಾಯನ ಪ್ರತಿಭೆಯನ್ನು ಗುರುತಿಸಿ ತಮ್ಮ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡಲು ಅವಕಾಶ ಒದಗಿಸಿಕೊಟ್ಟರು. ಈ ಕಾರ್ಯವನ್ನು ಭಕ್ತಿ, ಶ್ರದ್ಧೆಗಳಿಂದ ನಿರ್ವಹಿಸುತ್ತ ಶಾಲೆಯ ಮಕ್ಕಳಿಗೆ ಪ್ರಿಯರಾದರು. ಮುಂದೆ ಅವರು ಕರ್ನಾಟಕ ವಿಶ್ವವಿದ್ಯಾನಿಲಯದ ಸಂಗೀತ ಪದವಿ ಪಡೆದರು.

    ಅನುರಾಧಾ ಅವರು 1966ರ ಸಮಯದಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸಕ್ಕೆ ಸೇರಿದರು. ತಿಂಗಳಗೀತೆ, ರಾಮೋತ್ಸವ ಗೀತೆಗಳು, ರೂಪಕ, ನವರಾತ್ರಿಯ ಗೀತೆಗಳು ಹೀಗೆ ಸಂಗೀತದ ವಿವಿಧ ಪ್ರಕಾರಗಳಲ್ಲಿ ತಮ್ಮ ಧ್ವನಿಯನ್ನು ಆಳಡಿಸಿಕೊಳ್ಳುವ ಶೈಲಿಯನ್ನು ರೂಢಿಸಿಕೊಂಡರು. ಇವರು ಹಾಡಿದ ’ಓ ನನ್ನ ದೇಶ ಭಾಂದವರೇ’ ಎಂಬ ನಾಡಿನ ಗೀತೆಯಂತೂ ಧಾರವಾಡದ ಮನೆ ಮನೆಗಳಲ್ಲೂ ಜನ ಜನಿತವಾಗಿತ್ತು. ಸುಶ್ರಾವ್ಯವಾಗಿ ಹಾಡುತ್ತಿದ್ದ ಈ ಕೋಗಿಲೆಯ ಖ್ಯಾತಿ ದೇಶದೆಲ್ಲೆಡೆ ಹಬ್ಬಿತ್ತು. ಅದು ಚೀನಾ ಭಾರತದ ಮೇಲೆ ಆಕ್ರಮಣ ನಡೆಸಿದ್ದ ಸಮಯದ ಆಸುಪಾಸು. ಆಗ ಪ್ರಧಾನಿಯಾಗಿದ್ದ ಪ್ರಧಾನಿ ನೆಹರು ಅವರ ನೇತೃತ್ವದಲ್ಲಿ ಸಮಾರಂಭವೊಂದು ಜರುಗಿತು. ಈ ಸಮಾರಂಭದ ಪ್ರಾರ್ಥನೆಗೆ ಅನುರಾಧಾ ಧಾರೇಶ್ವರ್ ಅವರನ್ನು ಆಹ್ವಾನಿಸಲಾಗಿತ್ತು. ಅಂದು ಇವರು ಹಾಡಿದ ದೇಶಭಕ್ತಿಗೀತೆಗೆ ಭಾವುಕರಾದ ನೆಹರು ಅವರ ಕಣ್ಣಲ್ಲಿ ಅಶ್ರುತುಂಬಿತ್ತು. ಅನುರಾಧ ಅವರು ಆ ದಿನಗಳಲ್ಲಿ ಆಕಾಶವಾಣಿಯಲ್ಲಿ ಸಂಗೀತ ನಿರ್ದೇಶಕರಾಗಿದ್ದ ಮಹಾನ್ ಗಾಯಕರಾದ ಮಲ್ಲಿಕಾರ್ಜುನ ಮನ್ಸೂರ್ ಅವರ ಸಂಗೀತ ನಿರ್ದೇಶನದ ಹಲವಾರು ಗೀತೆಗಳಿಗೆ ದನಿಯಾಗಿದ್ದರು.
    ತಮ್ಮ ಗಾಯನವನ್ನು ಆಕಾಶವಾಣಿಗಷ್ಟೇ ಮೀಸಲಾಗಿಡದೆ ಹೊರಗಿನ ಸಮಾರಂಭಗಳಲ್ಲಿ ಹೆಚ್ಚಾಗಿ ಹಾಡುತ್ತಾ ಧಾರವಾಡದ ಕೋಗಿಲೆಯಾಗಿ ಸುಪ್ರಸಿದ್ಧರಾದರು. ಯಾವುದೇ ಉತ್ಸವ ಕಾರ್ಯಕ್ರಮಗಳಿರಲಿ ಅಲ್ಲಿ ಅನುರಾಧ ಅವರ ಗಾಯನ ಕಾರ್ಯಕ್ರಮ ಇರಲೇಬೇಕು ಎಂಬಷ್ಟು ಪ್ರಸಿದ್ಧಿಗೆ ಬಂದರು. 1997ರಲ್ಲಿ ನಿವೃತ್ತಿಯಾದ ನಂತರದಲ್ಲಿ ತಮ್ಮನ್ನು ಗಾಯನ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು. ಇವರು ಹಾಡುತ್ತಿದ್ದ ವರಕವಿ ಬೇಂದ್ರೆಯವರ ‘ಬೆಳುದಿಂಗಳ ನೋಡ ಬೆಳುದಿಂಗಳ ನೋಡ’ ಗೀತೆಯಂತೂ ದಕ್ಷಿಣ ಕರ್ನಾಟಕದ ಶ್ರೋತೃಗಳಿಗೆ ಅಚ್ಚುಮೆಚ್ಚು. ಎಂಥವರನ್ನೂ ತಮ್ಮ ಗಾಯನದಿಂದ ಮೋಡಿಮಾಡುವ ಈಕೆ ಸ್ವತಃ ಸಂಗೀತ ಸಂಯೋಜಕರೂ ಹೌದು. ಇವರೇ ಸಂಯೋಜಸಿ ಹಾಡಿದ ’ತಿಂಗಳ ಲೋಕದ ಅಂಗಳದಲ್ಲಿ’ ಎಂಬ ರೂಪಕ ಆಕಾಶವಾಣಿಯಲ್ಲಿ ಬಹು ಜನಪ್ರಿಯವಾಯಿತು. ಕನ್ನಡವಲ್ಲದೆ ಕೊಂಕಣಿ, ಮರಾಠಿ, ಹಿಂದಿ, ಬಂಗಾಳಿ, ತೆಲುಗು ಮುಂತಾದ ಭಾಷೆಯ ಗೀತೆಗಳನ್ನೂ ಸುಲಲಿತವಾಗಿ ಹಾಡುತ್ತಿದ್ದುದರಿಂದ ಇವರಿಗೆ ಬಹು ಭಾಷಾ ಗಾಯಕಿ ಎಂಬ ಬಿರುದಾಂಕಿತವಾಯಿತು.

    ಈ ಅಗಾಧ ಪ್ರತಿಭೆಗೆ ’ಕರ್ನಾಟಕ ಕಲಾತಿಲಕ’ ಪ್ರಶಸ್ತಿ, ‘ರಾಜ್ಯ ರಾಜ್ಯೋತ್ಸವ’ ಪ್ರಶಸ್ತಿ ಮತ್ತು ಸುಗಮ ಸಂಗೀತ ಕ್ಷೇತ್ರದ ಪರಮೋಚ್ಚ ‘ಸಂತ ಶಿಶುನಾಳ ಶರೀಫ ಪ್ರಶಸ್ತಿ’, ಕೊಂಕಣಿ ಭಾಷೆಯಲ್ಲಿನ ಅವರ ಸಂಗೀತ ಸಾಧನೆಗಾಗಿ ‘ಕಲಾಕಾರ್’ ಪ್ರಶಸ್ತಿ, ‘ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪುರಸ್ಕಾರ’ ಮುಂತಾದ ಅನೇಕ ಪ್ರಶಸ್ತಿ ಸನ್ಮಾನಗಳು ಸಂದಿವೆ.

    baikady Classical Music Music roovari
    Share. Facebook Twitter Pinterest LinkedIn Tumblr WhatsApp Email
    Previous Articleವಿದುಷಿ ಕಮಲಾ ಶಂಕರ್ ಇವರಿಂದ ಸಂಗೀತ ಕಾರ್ಯಕ್ರಮ | ಅಕ್ಟೋಬರ್ 10
    Next Article ಯಕ್ಷ ದೀಕ್ಷಾ ಪ್ರದಾನ ಹಾಗೂ ಯಕ್ಷರಂಜಿನಿ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
    roovari

    Add Comment Cancel Reply


    Related Posts

    ನೃತ್ಯ-ಭಾವಗಳ ಸಂಭಾಷಣೆ! – ಮೀರಾ ಶ್ರೀನಾರಾಯಣನ್ ನೃತ್ಯ ಪ್ರದರ್ಶನ

    November 11, 2025

    ಮೂಡುಬಿದಿರೆಯಲ್ಲಿ ಶ್ರೀ ಯಕ್ಷನಿಧಿ ದಶಮಾನೋತ್ಸವ ಸಮಾರಂಭ

    November 11, 2025

    ಬ್ರಹ್ಮಾವರದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ನುಡಿಚಿತ್ತಾರ 2025

    November 11, 2025

    ಲೇಖಕಿ ರುಬೀನಾ ಎಂ.ಎ. ಇವರ ಚೊಚ್ಚಲ ಕೃತಿ ‘ಕಣ್ಣಾ ಮುಚ್ಚಾಲೆ’ ಬಿಡುಗಡೆ ಕಾರ್ಯಕ್ರಮ

    November 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.