ಉಡುಪಿ : ಯಕ್ಷಗಾನ ಕಲಾರಂಗದ ಸಕ್ರಿಯ ಸದಸ್ಯ ಯು. ಶ್ರೀಧರ ಇವರಿಗೆ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಭವನದಲ್ಲಿ ದಿನಾಂಕ 27 ಫೆಬ್ರವರಿ 2026ರಂದು ನಡೆದ ಕಾರ್ಯಕ್ರಮದಲ್ಲಿ ‘ಸೇವಾ ಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ದೊಡ್ಡಣಗುಡ್ಡೆ ಡಾ. ವಿ.ವಿ. ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆಯವರು ಯು. ಶ್ರೀಧರ್ ಇವರನ್ನು ಅಭಿನಂದಿಸಿ ”ನೆರೆಮನೆಯವನಾಗಿ ಅವರ ಕ್ರಿಯಾಶೀಲತೆ, ಜೀವನೋತ್ಸಾಹ, ಸಮಾಜ ಪ್ರೀತಿಯನ್ನು ಹತ್ತಿರದಿಂದ ಕಂಡು ಮೆಚ್ಚಿಕೊಂಡಿದ್ದೇನೆ” ಎಂದರು.
ಪ್ರಶಸ್ತಿ ಸ್ವೀಕರಿಸಿದ ಯು. ಶ್ರೀಧರ ಮಾತನಾಡಿ, “ನಾನು ಬರೆಯಲು ತೊಡಗಿದ್ದು ನನ್ನ 73ರ ಹರೆಯದಲ್ಲಿ. ಶ್ರೀ ನಾರಾಯಣ ಗುರುಗಳ ತತ್ವದಿಂದ ಪ್ರಭಾವಿತನಾದೆ. ಅದನ್ನು ಬೇರೆಯವರಿಗೆ ಹೇಳುವ ಮೊದಲು ನಾನು ರೂಢಿಸಿಕೊಳ್ಳಬೇಕೆನಿಸಿತು ಅಷ್ಟನ್ನೇ ಮಾಡಿದ್ದೇನೆ. ನಾನೇನು ದೊಡ್ಡ ವ್ಯಕ್ತಿಯಲ್ಲ” ಎಂದು ವಿನಮ್ರವಾಗಿ ನುಡಿದರು. ಮಕ್ಕಳನ್ನುದ್ದೇಶಿಸಿ “ಯಕ್ಷಗಾನ ಕಲಾರಂಗದಂತಹ ಸಂಸ್ಥೆ ಸಿಕ್ಕಿರುವುದು ನಮ್ಮ ಭಾಗ್ಯ. ಸತ್ಯ, ಸರಳತೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮೈಗೂಡಿಸಿಕೊಳ್ಳಿ ಅದೇ ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ” ಎಂದು ಹೇಳಿದರು.

ಕರ್ನಲ್ ಮಾಧವ ಶ್ಯಾನುಭಾಗ್, ಡಾ. ಜೆ.ಎನ್. ಭಟ್, ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ. ಭಟ್ ಮತ್ತು ವಿ.ಜೆ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿಸಿದ್ದರು. ಎಸ್. ಗೋಪಲಾಕೃಷ್ಣ ಮತ್ತು ಎಚ್.ಎನ್. ಶೃಂಗೇಶ್ವರರ ಪತ್ನಿ ಕುಟುಂಬಿಕರು, ಯು. ಶ್ರೀಧರರ ಬಂಧುಗಳು ಭಾಗವಹಿಸಿದ್ದರು. ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಿದ್ಯಾ ಪ್ರಸಾದ್ ವಂದಿಸಿದರು. 27 ವರ್ಷ ಸಂಸ್ಥೆಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ ಎಸ್. ಗೋಪಾಲಕೃಷ್ಣ ಮತ್ತು 35 ವರ್ಷಗಳ ಕಾಲ ಕಾರ್ಯಕರ್ತ, ಜೊತೆಕಾರ್ಯದರ್ಶಿಯಾಗಿದ್ದ ಎಚ್.ಎನ್. ಶೃಂಗೇಶ್ವರ ಇವರರೀರ್ವರ ಸರಳತೆ, ಕರ್ತವ್ಯ ನಿಷ್ಠೆ, ಆಸ್ತಿಕತೆ, ಸಮಾಜ ಪ್ರೀತಿಯನ್ನು ಹೇಳುತ್ತಾ ಅವರನ್ನು ಪರಿಚಯಿಸಿ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
