ಮಂಗಳೂರು : ಚಾಮರ ಫೌಂಡೇಶನ್ ಮತ್ತು ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಏಳು ದಿನಗಳ ಮಕ್ಕಳ ‘ರಂಗ ಶಿಬಿರ 2026’ವು ದಿನಾಂಕ 17 ಮೇ 2026ರಂದು ಆದರ್ಶನಗರ, ಚಿಲಿಂಬಿ ಗುಡ್ಡೆಯಲ್ಲಿ ಉದ್ಘಾಟನೆಗೊಂಡಿತು.
ದಿ. ಯತೀಶ್ ವೈ. ಶೆಟ್ಟಿ ಇವರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ಈ ಶಿಬಿರವನ್ನು ರಂಗ ನಿರ್ದೇಶಕ ಜಗನ್ ಪವಾರ್ ಇವರು ಉದ್ಘಾಟಿಸಿ “ಮಕ್ಕಳ ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ ಮತ್ತು ಸೃಜನಶೀಲತೆಯ ಬೆಳವಣಿಗೆಯಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದಾಗಿದೆ” ಎಂದರು. ಉದ್ಘಾಟನ ಸಮಾರಂಭದ ಬಳಿಕ ಅವರು ಮಕ್ಕಳಿಗೆ ಮೊದಲ ರಂಗ ತರಬೇತಿ ನೀಡಿದರು.

ಚಾಮರ ಫೌಂಡೇಶನ್ನಿನ ಟ್ರಸ್ಟಿ ಮನೀಶ್ ಕೆ. ಸಾಲ್ಯಾನ್ ಅವರು ಶಿಬಿರದ ಉದ್ದೇಶದ ಬಗ್ಗೆ ವಿವರಿಸಿ, “ದಿ. ಯತೀಶ್ ವೈ. ಶೆಟ್ಟಿಯವರ ನೆನಪಿನಲ್ಲಿ ಯುವ ಪೀಳಿಗೆಯಲ್ಲಿ ಕಲಾ ಮತ್ತು ಸಾಂಸ್ಕೃತಿಕ ಪ್ರಜ್ಞೆ ಬೆಳೆಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ” ಎಂದರು.

ಸಮಾರಂಭದಲ್ಲಿ ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ರಾಜೇಂದ್ರ ಚಿಲಿಂಬಿ, ಚಾಮರ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ರಚನಾ ಉಪಸ್ಥಿತರಿದ್ದರು. ನೀನಾಸಂ ತರಬೇತಿ ಪಡೆದ ರಂಗ ಕಲಾವಿದೆ ಹಾಗೂ ಚಾಮರ ಫೌಂಡೇಶನ್ ಟ್ರಸ್ಟಿ ತ್ರಿಶಾ ಶೆಟ್ಟಿಯವರು ಶಿಬಿರವನ್ನು ನಿರ್ದೇಶಿಸಲಿದ್ದಾರೆ. ಮೇ 23ರವರೆಗೆ ಈ ಶಿಬಿರ ನಡೆಯಲಿದ್ದು, ಕೊನೆಯ ದಿನ ಶಿಬಿರಾರ್ಥಿಗಳಿಂದ ‘ರಂಗ ಪ್ರಯೋಗ’ ನಡೆಯಲಿದೆ. ಕೃತಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಪ್ರಶಾಂತ್ ಕುಮಾರ್ ವಂದಿಸಿದರು.
