ಮಂಗಳೂರು : ಸರಯೂ ಮಕ್ಕಳ ಮೇಳದ ‘ಸರಯೂ ಬಾಲ ಯಕ್ಷ ವೃಂದ’ದ ವತಿಯಿಂದ ಕದ್ರಿ ದೇವಳದ ಸಹಕಾರದಲ್ಲಿ 26ನೇ ವರ್ಷದ ‘ಸರಯೂ ಅಷ್ಠಾಹ’ದ ಆರನೇ ದಿನದ ಕಾರ್ಯಕ್ರಮವು ದಿನಾಂಕ 30 ಮೇ 2026ರಂದು ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜಿನ ಉಪನ್ಯಾಸಕ ಬಾಲಕೃಷ್ಣ ಶೆಟ್ಟಿಯವರು ಮಾತನಾಡಿ “ಕಲಾವಿದನ ಕೈಯ್ಯಲ್ಲಿ ಒಂದು ಪಾತ್ರ ಮರುಹುಟ್ಟು ಪಡೆದು ಪ್ರಸ್ತುತ ಪಡಿಸುವಾಗ ಅದರ ಹಿಂದೆ ಅವನ ಕ್ಷಮತೆ ಅಪಾರವಾಗಿರುತ್ತದೆ. ಪಾತ್ರದ ಪೂರ್ವಾಪರ ತಿಳಿದು ಹೃದಯಸ್ಪರ್ಶಿಯಾಗಿ ಅಭಿನಯಸುವುದೇ ಯಕ್ಷಗಾನದ ವಿಶೇಷತೆ. ಮಾತಿನಲ್ಲೇ ಸಮಸ್ತ ಲೋಕವನ್ನೇ ಒಂದು ರಂಗಭೂಮಿಯಲ್ಲೇ ಸೃಜಿಸಿ ; ಪಾತ್ರ ಗೌರವವನ್ನು ಕಾಪಾಡಿಕೊಂಡು ರಂಗ ಪ್ರಸ್ತುತಿಯನ್ನು ಮಾಡುವಲ್ಲಿ ಕಲಾಗಾರ ತನ್ನನ್ನು ತಾನು ದುಡಿಸಿಕೊಳ್ಳಬೇಕು. ಇದು ಯಕ್ಷಗಾನಕ್ಕೆ ಇರುವ ವಿಶೇಷತೆ. ಅದನ್ನು ಉಳಿಸಿ-ಬೆಳೆಸಿ ಕಾಪಾಡಿಕೊಳ್ಳೋಣ” ಎಂದು ಹೇಳಿದರು.
ಅಂತರಾಷ್ಟ್ರೀಯ ದೇಹದಾರ್ಡ್ಯ ಪಟು, ಚಿನ್ನದ ಸರದಾರ ದೇವದಾಸ್ ಕೂಳೂರು ಇವರನ್ನು ಸನ್ಮಾನಿಸಲಾಯಿತು. ನಿವೃತ್ತ ಉಪನ್ಯಾಸಕ, ಯಕ್ಷಕಲಾವಿದ ಜಿ.ಕೆ. ಭಟ್ ಸೇರಾಜೆ, ಕಲಾ ಪೋಷಕ ಸಿ.ಎಸ್. ಭಂಡಾರಿ, ಗಣಪತಿ ಭಟ್, ಪೂರ್ಣಿಮಾ ಪೇಜಾವರ್, ಮನ್ವಿತ್ ಶೆಟ್ಟಿ, ಸುಧಾಕರ ರಾವ್ ಪೇಜಾವರ್, ದೀಪಕ್ ಅತಿಥಿಗಳಾಗಿದ್ದರು. ಶ್ರೀಮತಿ ತನುಜಾಕ್ಷಿ ಬಿ. ಶೆಟ್ಟಿ ಸನ್ಮಾನ ಪತ್ರವನ್ನು ವಾಚಿಸಿದರು. ಗೌತಂ ಭಂಡಾರಿ ನಿರ್ವಹಿಸಿದರು. ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ಧನವಾದವಿತ್ತರು. ಸಭಾ ಕಾರ್ಯಕ್ರಮದ ಬಳಿಕ ‘ಶ್ರೀದೇವಿ ಮಹಾತ್ಮೆ’ ಬಯಲಾಟ ಜರಗಿತು.

