ಉಡುಪಿ : ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ಆರನೇ ದಿನದ ಕಾರ್ಯಕ್ರಮವು ದಿನಾಂಕ 27 ಫೆಬ್ರವರಿ 2026ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯಮಿ ದಿವಾಕರ ಸನಿಲ್ “ಕಲಾಸಹೃದಯರ, ಕಲಾಭಿಮಾನಿಗಳ ಪ್ರೋತ್ಸಾಹ ಇಲ್ಲದೇ ಕಲಾ ಚಟುವಟಿಕೆ ಮುಂದುವರಿಯಲು ಸಾಧ್ಯವಿಲ್ಲ. ನಾಟಕಗಳಲ್ಲಿ ಅಭಿನಯಿಸುವವರು ಕಣ್ಣ ಮುಂದೆ ಕಾಣುತ್ತಾರೆ. ಅದರ ಹಿಂದೆ ನಿಂತು ಕೆಲಸ ಮಾಡುವವರು ಕಾಣುವುದಿಲ್ಲ. ಈ ನಿಟ್ಟಿನಲ್ಲಿ ಸುಮನಸಾವು ನಟರನ್ನಷ್ಟೇ ಅಲ್ಲ, ಹಿನ್ನೆಲೆಯಲ್ಲಿ ಕೆಲಸ ಮಾಡುವವರನ್ನೂ ಗುರುತಿಸಿ ಗೌರವಿಸುತ್ತಾ ಬಂದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಯಮಿ ನವೀನ್ ಅಮೀನ್ ಶಂಕರಪುರ ಮಾತನಾಡಿ, “ಕಲೆಯನ್ನು ಉಳಿಸುವ ಕೆಲಸವನ್ನು ಮಾಡುತ್ತಿರುವ ಅನೇಕ ಸಂಸ್ಥೆಗಳಲ್ಲಿ ಸುಮನಸಾ ಕೊಡವೂರು ವಿಶೇಷ ಸಂಘಟನೆಯಾಗಿದೆ. ಈ ಸಂಸ್ಥೆಯವರು ನಡೆಸುವ ನಾಟಕಗಳು ಮನೊರಂಜನೆಗೆ ಸೀಮಿತವಾಗಿಲ್ಲ. ಜೊತೆಗೆ ಒಳ್ಳೆಯ ಸಂದೇಶಗಳೂ ಇರುತ್ತವೆ. ಜೀವನದಲ್ಲಿ ನಡೆಯುವ ಘಟನೆಗಳನ್ನು ನೈಜವಾಗಿ ನಟಿಸಿ ತೋರುವ ಕಾರ್ಯ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಶಿಬಿರ ಮಾಡುತ್ತಾ ಅವರಲ್ಲಿಯೂ ಕಲಾಭಿರುಚಿ ಬೆಳೆಸುತ್ತಿದ್ದಾರೆ” ಎಂದು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲು ಮಾತನಾಡಿ, “ಕನಸು ಸ್ಪಷ್ಟವಾಗಿರಬೇಕು. ಕನಸನ್ನು ನನಸು ಮಾಡಲು ಹೋರಾಟ ನಡೆಸಬೇಕು. ಕಲೆಯನ್ನು ಮತ್ತೆ ಮತ್ತೆ ಪ್ರತಿಷ್ಠಾಪನೆ ಮಾಡುವ ಕೆಲಸ ಇಂಥ ರಂಗಹಬ್ಬಗಳು ಮಾಡುತ್ತಿವೆ. ಇತ್ತೀಚೆಗೆ ಇನ್ನೊಬ್ಬರನ್ನು ಬೆಳೆಸುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಸುಮನಸಾ ಸಂಸ್ಥೆಯು ಎಲ್ಲರನ್ನು ಬೆಳೆಸುವ ಕೆಲಸ ಮಾಡುತ್ತಿದೆ” ಎಂದು ಶ್ಲಾಘಿಸಿದರು.

ಉದ್ಯಮಿ ಸಚಿನ್ ಕೊಡವೂರು ಮಾತನಾಡಿ, “ಸಣ್ಣ ಮಟ್ಟದಲ್ಲಿ ಹುಟ್ಟಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಕಾಲೆಳೆಯುವವರು ಹೆಚ್ಚು ಇರುತ್ತಾರೆ. ಅವುಗಳನ್ನೆಲ್ಲ ಮೆಟ್ಟಿ ನಿಂತು ಮುಂದುವರಿದಿದೆ” ಎಂದು ಹೇಳಿದರು. ಮುಖವರ್ಣಿಕೆ ಕಲಾವಿದ ರಮೇಶ್ ಕೆ. ಪಣಿಯಾಡಿ ಇವರಿಗೆ ರಂಗಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು. ರೋಟರಿ ಮಾಜಿ ಸಹಾಯಕ ಗವರ್ನರ್ ಆನಂದ ಉದ್ಯಾವರ, ಶಶಿ ಎಂಟರ್‌ಪ್ರೈಸಸ್ ಪ್ರವರ್ತಕ ಜಗದೀಶ್ ಕುಮಾರ್, ಉದ್ಯಮಿಗಳಾದ ಸೂರಜ್ ಮಲ್ಪೆ, ರಂಜಿತ್ ಕೊಡವೂರು, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಯೋಗೀಶ್ ಕೊಳಲಗಿರಿ ಸ್ವಾಗತಿಸಿ, ಮನೋಹರ್ ಜತ್ತನ್ ವಂದಿಸಿ, ರಾಧಿಕಾ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು. ಕಲ್ಕೂರ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ನ ಆಡಳಿತ ನಿರ್ದೇಶಕ ರಂಜನ್ ಕಲ್ಕೂರ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಉಡುಪಿಯ ಸುಮನಸಾ ಕೊಡವೂರು ತಂಡದಿಂದ ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ‘ಈದಿ’ ಕನ್ನಡ ನಾಟಕ ಪ್ರದರ್ಶನಗೊಂಡಿತು.
