Subscribe to Updates

    Get the latest creative news from FooBar about art, design and business.

    What's Hot

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕನ್ನಡ ಭಾಷೆಯಲ್ಲಿ ಭಾಗವತ ಧರ್ಮವನ್ನು ಪ್ರಚಾರ ಮಾಡಿದ ಯತೀಶ್ವರರು ಸೋದೆ ಶ್ರೀ ವಾದಿರಾಜರು
    Article

    ಕನ್ನಡ ಭಾಷೆಯಲ್ಲಿ ಭಾಗವತ ಧರ್ಮವನ್ನು ಪ್ರಚಾರ ಮಾಡಿದ ಯತೀಶ್ವರರು ಸೋದೆ ಶ್ರೀ ವಾದಿರಾಜರು

    March 6, 2026Updated:March 7, 2026No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ವಿಜಯಪುರ : ಕರ್ನಾಟಕ ಭಾಷೆಯಲ್ಲಿ ಭಾಗವತ ಧರ್ಮವನ್ನು ಪ್ರಚಾರ ಮಾಡಿದ ಯತೀಶ್ವರರಲ್ಲಿ ಶ್ರೀ ವಾದಿರಾಜರು ನಾಲ್ಕನೆಯವರು.  ಉಡುಪಿಯ ಅಷ್ಟಮಠಗಳಲ್ಲೊಂದಾದ ಸೋದೆ ಮಠದಲ್ಲಿ ಪೀಠಾರೋಹಣ ಮಾಡಿ 120 ವರ್ಷಗಳ ಕಾಲ ಪಾರ್ಥೀವದೇಹದಿಂದಿದ್ದ ಪುಣ್ಯ ಪುರುಷರಿವರು. ಹೆಸರಿಗೆ ತಕ್ಕಂತೆ ವಾದಿರಾಜರು ಬಲು ವಾದನಿಗ್ರಹ ಮಾಡಿದ ಪಂಡಿತರು. ದೊಡ್ಡ ಗ್ರಂಥಕರ್ತರು. ರುಕ್ಮಿಣೀಶವಿಜಯ, ತೀರ್ಥ ಪ್ರಬಂಧಗಳಂಥಾ ಸರಸಕಾವ್ಯಗಳನ್ನು ಬರೆದರು. ಕನ್ನಡದಲ್ಲಿ ಸಾವಿರಾರು ದೇವರ ನಾಮಗಳನ್ನು ಮಾಡಿ ಹಾಡಿದವರು. ಇವರು ಕನ್ನಡದಲ್ಲಿ ರಚಿಸಿದ ‘ ಲಕ್ಷ್ಮೀ ಶೋಭಾನೆ’ ಹಾಡು ಮಹಿಳೆಯರ ನೆಚ್ಚಿನ ಹಾಡಾಗಿದೆ.
    ಉಡುಪಿ ಜಿಲ್ಲೆಯ ಕುಂಭಾಸಿ ಬಳಿಯ ‘ಹೂವಿನ ಕೆರೆ’ ಎಂಬ ಚಿಕ್ಕ ಗ್ರಾಮದಲ್ಲಿ ದೇವರ ರಾಮಭಟ್ಟನೆಂಬ ಬಡ ಬ್ರಾಹ್ಮಣನಿದ್ದನು. ಆತನ ಹೆಂಡತಿಯ ಹೆಸರು ಗೌರೀದೇವಿ. ಗೌರೀದೇವಿಯು ತನಗೆ ಮೊದಲು ಪುತ್ರ ಸಂತಾನವಾದರೆ ದೇವರಿಗೆ ಲಕ್ಷಾಭರಣ ಸೇವೆ ಮಾಡುವೆನೆಂದು ಹರಕೆ ಹೊತ್ತಿದ್ದಳು. ಆಗ ಶ್ರೀಮನ್ಮಧ್ವಾರ್ಚಾರ ಪರಂಪರೆಯ ಸ್ವಾಧಿಮಠದ ಪೀಠಕ್ಕೆ ವಾಗೀಶರೆಂಬವರು ಪೀಠಾಧಿಪತಿಗಳಾಗಿದ್ದರು. ವಾಗೀಶತೀರ್ಥರ ಅಪೇಕ್ಷೆಯಂತೆ ರಾಮಭಟ್ಟ ಹಾಗೂ ಗೌರಿದೇವಿ ದಂಪತಿಗಳು ತಮಗೆ ಜನಿಸಿದ ಶಿಶುವನ್ನು ಹರಿವಾಣದಲ್ಲಿಟ್ಟು ವಾಗೀಶತೀರ್ಥರಿಗೆ ಅರ್ಪಿಸಿದರು. ಮಗು ಜನಿಸಿದ್ದು ಕ್ರಿ.ಶ.1480ರಲ್ಲಿ; ವಾಗೀಶತೀರ್ಥರು ರಾಮಭಟ್ಟ ದಂಪತಿಗಳಿಗೆ ‘ಇವನು ನಿಮ್ಮ ಮಗನಲ್ಲ ದೇವರ ಮಗನಷ್ಟೇ’ ಎಂದು ತಿಳಿಸಿ, ಶಿಶುವಿಗೆ ‘ಭೂವರ’ನೆಂದು ನಾಮಕರಣ ಮಾಡುವಂತೆ ಆಜ್ಞೆ ಮಾಡಿದರು.  ಸೋದೆಮಠದ ಭೂವರಾಹಮೂರ್ತಿಗೆ ಮಾಡಿದ ಅಭಿಷೇಕದ ಕ್ಷೀರವೇ ಶಿಶುವಿಗೆ ಆಹಾರವಾಯಿತು.
    ಬಾಲಕನಿಗೆ ಶಾಸ್ತ್ರಮಾನದಂತೆ ಕಾಲಕಾಲದಲ್ಲಿ ಚೌಲೋಪನಯನಗಳಾದವು. ಭೂವರನು ಸಾಮವೇದದಲ್ಲೂ ಕಾವ್ಯದಲ್ಲೂ ಪಾರಂಗತನಾದನು. ವಿದ್ಯಾಪ್ರಾಪ್ತಿಗಾಗಿಯೂ ವಾಕ್ಪಟುತ್ವಕ್ಕಾಗಿಯೂ ವಾಗೀಶರಿಂದ ಹಯಗ್ರೀವ ಮಂತ್ರೋಪದೇಶ ಪಡೆದು ಕಠಿಣ ತಪಶ್ಚರ್ಯದಿಂದ ಸಿದ್ಧಿಯನ್ನು ಪಡೆದನು. ವಾಗೀಶರೇ ಸ್ವಯಂ ಭೂವರನಿಗೆ ನ್ಯಾಯ ವೇದಾಂತ ಶಾಸ್ತ್ರಗಳನ್ನು ಪಾಠ ಮಾಡಿಸಿದರು.  ಒಮ್ಮೆ ಗುರುಗಳು ಶಿಷ್ಯನಾದ ಭೂವರನಿಗೆ ಬೇಕಾದುದನ್ನು ಕೇಳೆಂದು ನುಡಿದರು. ಆಗ ಭೂವರನು ‘ಗುರುಭಕುತಿ ಇರಬೇಕು ಹಿರಿಯರ ಕರುಣಬೇಕು | ಹರಿಕಥೆಗಳ ನಿತ್ಯ ಕೇಳುತ್ತಿರಬೇಕು | ವಿರಕುತಿ ಬೇಕು ವಿಷ್ಣುವಿನಾರಾಧನೆ ಬೇಕು | ವರಮಂತ್ರ ಜಪಬೇಕು ತಪಬೇಕು ಪರಗತಿಗೆ | ಶಿರಿ ಹಯವದನರ ಪರಮಾನುಗ್ರಹ ಬೇಕು | ವಿಷಯ ನಿಗ್ರಹಬೇಕು |’ ಎಂದು ನುಡಿದರು. ಇದು ವಾದಿರಾಜರು ಪೂರ್ವಾಶ್ರಮದಲ್ಲಿ ಮಾಡಿದ ಪ್ರಥಮ ಉಗಾಭೋಗ. ಹಯಗ್ರೀವೋಪಾಸಕನಾಗಿದ್ದರಿಂದ `ಹಯವದನ’ನಿಗೆ ಅಂಕಿತ ಮಾಡಿದರು.  ಅಂದಿನ ದಿನವು ಮಠದಲ್ಲಿ ಪರಮಾನಂದದ ದಿನವಾಯಿತು. ಭೂವರನಿಗೆ ಸುಮುಹೂರ್ತದಲ್ಲಿ ಸಂನ್ಯಾಸಾಶ್ರಮ ಪ್ರದಾನವೂ ಆಯಿತು.  ಗುರುಗಳು ಶಿಷ್ಯನಿಗೆ `ವಾದಿರಾಜತೀರ್ಥ’ರೆಂದು ಆಶ್ರಮ ನಾಮವಿತ್ತರು. ಆ ಸಮಕಾಲದಲ್ಲಿ ವಿಜಯನಗರದಲ್ಲಿ ವ್ಯಾಸರಾಯರು ಮಹಾಪ್ರಬಲರಾಗಿದ್ದರು. ಅವರ ಬಳಿ ಕೆಲವು ಕಾಲವಿದ್ದು, ಪ್ರೌಢ ವಿದ್ಯಾಭ್ಯಾಸ ಮಾಡಬೇಕೆಂಬ ಅಭಿಲಾಷೆ ವಾದಿರಾಜರಿಗಾಯಿತು.  ವಾಗೀಶರು ಬೃಂದಾವನದಸ್ಥರಾದ ನಂತರ ವಾದಿರಾಜರು ಸಂಸ್ಥಾನ ಸಹಿತರಾಗಿ ವಿಜಯನಗರಕ್ಕೆ ಬಂದರು. ವ್ಯಾಸರಾಯರು ಅಲ್ಲಿ ನ್ಯಾಯಸುಧಾ, ನ್ಯಾಯಾಮೃತ, ತರ್ಕ ತಾಂಡವ, ಚಂದ್ರಿಕಾ ಎಂಬ ಪರಮ ಪ್ರೌಢ ಗ್ರಂಥಗಳನ್ನು ಅಭ್ಯಸಿಸಿದರು. ವಾದಿರಾಜರ ಪ್ರೌಢಿಮೆಯನ್ನು ನೋಡಿ ವಿಜಯನಗರದ ಕೃಷ್ಣದೇವರಾಯನು ಅವರನ್ನು `ಪ್ರಸಂಗಾಭರಣತೀರ್ಥ’ರೆಂಬ ಗೌರವನಾಮದಿಂದ ಕರೆದನು.  ವಾದಿರಾಜರು ಚತುಷ್ಷಷ್ಠಿ ಕಲಾ ನಿಪುಣರು.
    ಹಂಪೆಯಲ್ಲಿದ್ದಾಗ ವಾಲಿಯ ಭಂಡಾರವೆಂಬ ಸ್ಥಳದಲ್ಲಿ ಬಹಳ ಗುಪ್ತಧನವಿದೆ ಎಂದರಿತು ವಾದಿರಾಜರು ಆ ಸ್ಥಳವನ್ನು ಶೋಧನೆ ಮಾಡಿಸಿದರು. ಆ ಬಳಿಯಲ್ಲಿ ಎರಡು ಸುಂದರ ವಿಗ್ರಹಗಳು ದೊರೆತವು. ಆ ನಂತರ ಅಪರಿಮಿತ ದ್ರವ್ಯರಾಶಿಯೂ ಕರಗತವಾಯಿತು. ಆ ದ್ರವ್ಯರಾಶಿಯನ್ನು ವಿಜಯನಗರದ ರಾಯರಿಗೊಪ್ಪಿಸಿ ಮೊದಲು ದೊರೆತ ವಿಗ್ರಹಗಳನ್ನು ಮಾತ್ರ ವಾದಿರಾಜರು ವಾಲಿ ಸುಗ್ರೀವ ಕರಾರ್ಚಿತಗಳೆಂದು ತಮ್ಮ ಮಠದಲ್ಲಿಟ್ಟುಕೊಂಡರು. ಅವು ಈಗಲೂ ರಾಮವಿಠ್ಠಲಮೂರ್ತಿಗಳೆಂದು ಕರೆಸಿಕೊಂಡು ಮಠಸ್ಥರ ಆರಾಧನೆಯಲ್ಲಿವೆ. ವಾದಿರಾಜರ ಮಹದುಪಕಾರವನ್ನು ಸ್ಮರಣೆಯಲ್ಲಿಟ್ಟುಕೊಂಡು ಕಾಲಾಂತರದಲ್ಲಿ ವಿಜಯನಗರದ ದೊರೆ ಅಚ್ಯುತರಾಯನು ಉಡುಪಿಯಾತ್ರೆಯ ಕಾರಣದಿಂದ ಅವರ ದರ್ಶನಕ್ಕಾಗಿ ಬಂದು. ಮಧ್ವಸರೋವರಕ್ಕೆ ಸೋಪಾನ ರಚನೆ, ಅಲ್ಲಿಯ ದೇವಾಲಯಗಳ ವಿಸ್ತಾರ, ಇವೆಲ್ಲಾ ಆ ಮಹಾರಾಯನಿಂದಾಯಿತು. ಆ ಕಾಲದಲ್ಲೇ ಶ್ರೀ ವ್ಯಾಸರಾಯರು ಉಡುಪಿಗೆ ಬಂದಿದ್ದಂತೆ ಗೊತ್ತಾಗುತ್ತದೆ. ಅಚ್ಯುತರಾಯನು ಆಗ ಕೊಟ್ಟ ಅನರ್ಘ್ಯ ಆಭರಣಗಳು ಈಗಲೂ ಶ್ರೀಕೃಷ್ಣ ಮಠದಲ್ಲಿವೆ (ಕ್ರಿ.ಶ.1537). ವಾದಿರಾಜರು ವ್ಯಾಸರಾಯರಲ್ಲಿ ಮಾಡಬೇಕಾಗಿದ್ದ ವಿದ್ಯಾವ್ಯಾಸಂಗವನ್ನು ಪೂರೈಸಿ, ಅವರಿಂದ ವ್ಯಾಸಮುಷ್ಠಿಕೆಯನ್ನು ಪಾರಿತೋಷಕವಾಗಿ ಪಡೆದು ಉಡುಪಿಗೆ ಪ್ರಯಾಣ ಮಾಡಿದರು. ವಾದಿರಾಜರು ಉಡುಪಿಗೆ ಬಂದ ನಂತರ ಆ ಕ್ಷೇತ್ರದಲ್ಲಿ ವಿಚಿತ್ರ ಸುಧಾರಣೆಗಳಾದವು. ಮಧ್ವಮತ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನ ಪೂಜೆಗೆ ಎಂಟು ಯತಿಗಳನ್ನು ನಿಯಮಿಸಿದ್ದರಿಂದ ಮಠದ ಸುತ್ತಲೂ ಪ್ರತ್ಯೇಕ ಎಂಟು ಸಂಸ್ಥಾನಗಳಾದವು. ಶ್ರೀ ಮಧ್ವಾಚಾರ್ಯರ ಕಾಲದಿಂದ ಅಷ್ಟಮಠದ ಯತಿಗಳು ಎರಡೆರಡು ತಿಂಗಳು ಶ್ರೀಕೃಷ್ಣನ ಪೂಜೆಯನ್ನು ಸರದಿಯಾಗಿ ನಡೆಸುತ್ತಾ ಬಂದರು. ವಾದಿರಾಜರು ಮಿಕ್ಕ ಯತಿಗಳ ಅನುಮತಿಯಿಂದ ಎರಡು ತಿಂಗಳ ಪೂಜಾ ಪದ್ಧತಿಯನ್ನು ಎರಡು ವರ್ಷಗಳಿಗೇರಿಸಿದರು. ಎರಡು ವರ್ಷಗಳ ಪರ್ಯಾಯದ ನಂತರ ಮತ್ತೆ ಸರದಿ ಬರುವವರೆಗೆ ಹದಿನಾಲ್ಕು ವರ್ಷ ಆಯಾ ಮಠಾಧಿಪತಿಗಳು ಸಂಚಾರ ಹೊರಟು ಶಿಷ್ಯಾರ್ಜನೆ ಮಾಡಬಹುದೆಂದು ವಿಧಾಯಕ ಮಾಡಿದರು. ಒಂದೊಂದು ಮಠಕ್ಕೂ ಆ ಕಾಲದ ರಾಜರ ಸಹಾಯದಿಂದ ಭೂಸ್ಥಿತಿಗಳನ್ನೇರ್ಪಡಿಸಿದರು. ಶ್ರೀಪಾದರಾಜರು ಮತ್ತು ಶ್ರೀವ್ಯಾಸರಾಯರ ಮಠಗಳಲ್ಲಿರುವಂತೆ ಪೂಜಾಕಾಲದಲ್ಲಿ ಭಾಗವತರ ಭಜನಾ ಪದ್ಧತಿಯನ್ನು ಪ್ರತಿಮಠಗಳಲ್ಲೂ ಆಚರಣೆಗೆ ತಂದರು. ರಾತ್ರಿ ಪೂಜಾನಂತರ ಭಾಗವತರೊಡನೆ ಯತಿಗಳೂ ಕಲೆತು ಭಜನೆ ಮಾಡುವದನ್ನು ಈ ಹೊತ್ತಿಗೂ ಉಡುಪಿಯ ಮಠಗಳಲ್ಲಿ ನೋಡಬಹುದು. ಅವರು ವಾದಿರಾಜರ ಪದಗಳನ್ನಲ್ಲದೆ ಅನ್ಯರ ಪದಗಳನ್ನು ಪ್ರಾಯಶಃ ಹಾಡುವುದಿಲ್ಲ.
    ಉತ್ತರ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಹಸ್ರಗಟ್ಟಲೆ ಸೋನಾರರಿದ್ದರು (ಸ್ವರ್ಣಕಾರರು). ಒಬ್ಬ ಸ್ವರ್ಣಕಾರನು ಗಣಪತಿ ವಿಗ್ರಹ ಮಾಡಲು ಪಂಚಲೋಹ ಕರಗಿಸಿ ಗಣಪತಿ ವಿಗ್ರಹ ಮಾಡುವಾಗ ಅದನ್ನು ಅಚ್ಚಿನಿಂದ ತೆಗೆದು ನೋಡಲು ಹಯಗ್ರೀವವಾಗಿತ್ತು. ಮೂರು ದಿನವಾದರೂ ಶಾಖವಾರದೇ ಮೂರ್ತಿಯು ತೇಜೋಪುಂಜವಾಗಿತ್ತು. ದೇವರ ಪ್ರೇರಣೆಯಿಂದ ಆ ಸ್ವರ್ಣಗಾರನು ಹಯಗ್ರೀವ ಮೂರ್ತಿಯನ್ನು ವಾದಿರಾಜರಿಗೆ ತಂದೊಪ್ಪಿಸಿದನು. ಆ ಮೂರ್ತಿಯೇ ವಾದಿರಾಜರ ಆರಾಧ್ಯ ದೈವವಾಯಿತು. ಆ ಜನರು ಈಗಲೂ ಸ್ವಾಧಿಮಠದ ಶಿಷ್ಯರಾಗಿದ್ದಾರೆ. ವಾದಿರಾಜರು ತುಳಿತಕ್ಕೊಳಗಾದ ಜನರಲ್ಲಿ ಕೂಡ ದಯಾಳುವಾಗಿದ್ದರು. ಆ ಜನರು ಕೃತಾರ್ಥರಾಗಲೆಂದು ತುಳು ಭಾಷೆಯಲ್ಲಿ ಅನೇಕ ದೇವರ ನಾಮಗಳನ್ನು ಮಾಡಿಕೊಟ್ಟರು. ಈ ಪದಗಳು ಈಗಲೂ ಜನರ ಬಾಯಲ್ಲಿ ಪರಂಪರೆಯಾಗಿ ಪಾಠವಾಗುತ್ತ ಬಂದಿವೆ. ವಾದಿರಾಜರು ತಮ್ಮ ಸರದಿಗೆ ಬಂದ ಪರ್ಯಾಯವನ್ನು ಸಾಂಗಗೊಳಿಸಿ ದೇಶ ಸಂಚಾರ ಹೊರಟರು. ಇವರು ಸಂಚರಿಸಿದ ಕ್ಷೇತ್ರಗಳ ಮಹಿಮೆಯನ್ನು ‘ತೀರ್ಥಪ್ರಬಂಧ’ವೆಂಬ ಗ್ರಂಥದಲ್ಲಿ ಕ್ರೋಢೀಕರಿಸಿರುವರು. ವಾದಿರಾಜರು ಪುಣ್ಯ (ಪುಣೆ) ಪಟ್ಟಣದಲ್ಲಿ ಒಮ್ಮೆ ಚಾತುರ್ಮಾಸ ಸಂಕಲ್ಪಕ್ಕೆ ಕುಳಿತು ‘ರುಕ್ಮಿಣೀಶ ವಿಜಯ’ ಎಂಬ ಮಹಾಕಾವ್ಯವನ್ನು ಸಂಸ್ಕೃತದಲ್ಲಿ ರಚಿಸಿದರು. ಪುಣೆಯ ವಿದ್ವತ್ ಸಭೆಯಲ್ಲಿ ‘ರುಕ್ಮಿಣೀಶ ವಿಜಯ’ವೇ ಶ್ರೇಷ್ಠ ಕಾವ್ಯವೆಂದು ನಿರ್ಣಿತವಾಯಿತು. ಸಭಾಸದರು ಮಹಾಕಾವ್ಯವನ್ನು ಆನೆಯ ಮೇಲಿಟ್ಟು, ಮೆರವಣಿಗೆ ಮಾಡಿ ವಾದಿರಾಜರಿಗೆ ಉತ್ತಮ ಬಹುಮಾನ ನೀಡಿ ಅಭಿನಂದಿಸಿದರು.
    ವಾದಿರಾಜರು ಹಯಗ್ರೀವೋಪಾಸಕರಾಗಿನಿಂದ ಪ್ರತಿನಿತ್ಯವೂ ಒಂದು ಹರಿವಾಣದ ತುಂಬ ಕಡಲೆಯ ಹೂರಣ ಮಾಡಿಸಿ ಅದನ್ನು ತಲೆಯ ಮೇಲಿಟ್ಟುಕೊಂಡು ಏಕಾಂತ ಸ್ಥಳದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು. ಪರಮಾತ್ಮನು ದಿವ್ಯ ಶ್ವೇತರೂಪದಿಂದ ದರ್ಶನವಿತ್ತು ತನ್ನೆರಡು ಖುರಗಳನ್ನು ವಾದಿರಾಜರ ಹೆಗಲ ಮೇಲಿಟ್ಟು, ಆ ಹರಿವಾಣದ ಹೂರಣವನ್ನು ಸ್ವೀಕರಿಸುತ್ತಿದ್ದನಂತೆ. ಪ್ರಯಾಗ ಕ್ಷೇತ್ರದಲ್ಲಿ ವಾದಿರಾಜರು ಬ್ರಹ್ಮದೇವರ ಸಂಧ್ಯಾಮಠದಲ್ಲಿ ಕೆಲವು ಕಾಲ ತಪಶ್ಚರ್ಯದಲ್ಲಿದ್ದರು. ವಾದಿರಾಜರಿಗೆ ವ್ಯಾಸೋಪಾಸನೆಯ ಫಲವಾಗಿ ಕೆಳಗಿನ ಶ್ರೇಷ್ಠ ಕೀರ್ತನೆ ಮೂಡಿ ಬಂದಿತು.

    ಮಧ್ವಾಂತರ್ಗತ ವೇದವ್ಯಾಸ | ಕಾಯೋ ಶುದ್ಧ ಮೂರುತಿಯೆ ಸರ್ವೇಶ |
    ಶ್ರದ್ಧೆಯಿಂದಲಿ ನಿಮ್ಮ ಭಜಿಸುವ ಸುಜನರ್ಗೆ |
    ಬುಧ್ಯಾದಿಗಳನಿತ್ತುದ್ಧರಿಸೋ ದೇವರ ದೇವ |

    ದ್ವಾಪರದೊಳಗೊಬ್ಬ ಮುನಿಪ ತನ್ನ ಕೋಪದಿಂದಲಿ ಕೊಟ್ಟ ಶಾಪ
    ಸ್ಥಾಪಿಸಲ್ ವಿಜ್ಞಾನ ಲೋಪವಾಗೆ ಆ ಪರಮೇಷ್ಠಿ ಭವನಾತಪ
    ಶ್ರೀಪತೇಕಾಯೆಂದು ಮೊರೆಯಿಡೆ | ಪಾಪವಿರಹಿತಳಾದ ಯಮುನೆಯ
    ದ್ವೀಪದಲಿ ಅಂಬಿಗರ ಪೆಣ್ಣಿನ ರೂಪಕೊಲಿದವಳಲ್ಲಿ ಜನಿಸಿದೆ ||

    ವೇದವಾದಿಗಳೆಲ್ಲ ಕೆಡಲು ತತ್ವವಾದಿ ಜನರು ಬಾಧೆಪಡಲು
    ಮೇದಿನಿಯ ಸುರರ್ಮೊರೆಯಿಡಲು ಸರ್ವ ವೇದಗಳನು ವಿಭಾಗಿಸಲು
    ಮೋದದಿಂದ ತದರ್ಥ ಬೋಧಕ ವಾದಸೂತ್ರ ಪುರಾಣ ರಚಿಸಿ ವಿ
    ವಾದಗಳ ನಿರ್ವಾದಗೈಸಿದ ಸಾಧುವಂದಿತ ಬಾದರಾಯಣ

    ಸುಮತಿಗಳಿಗೆ ಬೋಧಿಸಿದೆ ಮಿಕ್ಕ ಕುಮತಿಗಳು ಛೇದಿಸಿದೆ
    ಕ್ರಿಮಿಯಿಂದ ರಾಜ್ಯವಾಳಿಸಿದೆ | ಜಗತ್ಸ್ವಾಮಿ ಚರ್ಯವ ನೀ ತೋರಿಸಿದೆ
    ವಿಮಲ ರೂಪನೆ ಕಮಲನಾಭನೆ ರಮೆಯವಲ್ಲಭ ರಮ್ಯ ಚರಿತನೆ
    ಮಮತೆಯಲಿ ಕೊಡು ಕಾಮಿತಾರ್ಥವ | ನಮಿಸುವೆನು ಹಯವದನ ಮೂರುತಿ ||

    ಈ ಮೇಲಿನ ಕೀರ್ತನವು ತಾರತಮ್ಯ ಭಜನಾ ಕಾರ್ಯಕ್ರಮದಲ್ಲಿ ಪ್ರಸಿದ್ಧಿ ಪಡೆದಿದೆ. ಇದಲ್ಲದೆ ವಾದಿರಾಜರ ವಿರಚಿತ ‘ಒಂದು ಬಾರಿ ಸ್ಮರಣೆ ಸಾಲದೆ ಆನಂದತೀರ್ಥರ ಪೂರ್ಣ ಪ್ರಜ್ಞರ ಮಧ್ವರಾಯರ’, ‘ತಾಳುವಿಕೆಗಿಂತ ತಪವು ಇನ್ನಿಲ್ಲ, ‘ಒಪ್ಪಿತೊ ಹರಿ ನಿಮ್ಮ ಚೆಲ್ವಿಕೆ’ ಮುಂತಾದ ಕೀರ್ತನೆಗಳು ಅತಿ ಪ್ರಸಿದ್ಧವಾಗಿವೆ. ವಾದಿರಾಜರು ಧರ್ಮಸ್ಥಳದಲ್ಲಿ (ಕುಡುಮ) ಮಂಜುನಾಥನ ಮೂರ್ತಿಯನ್ನು ಮಂತ್ರಸ್ಥಾಪನೆ ಮಾಡಿ ಪ್ರತಿಷ್ಠಾಪಿಸಿ ಮಹಾಪೂಜಾದಿಗಳನ್ನು ನಡೆಸಿದರು.  ಅಂದಿನಿಂದ ಆ ಭೂತಕ್ಷೇತ್ರವು ಮಂಜುನಾಥನ ಪರಮಪಾವನ ಕ್ಷೇತ್ರವೆನಿಸಿತು. ವಾದಿರಾಜರು ಬೇಲೂರು, ಕೊಲ್ಹಾಪುರ, ಪಂಢರಪುರ, ತಿರುವನಂತಪುರ ಮುಂತಾದ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿದರು. ಸ್ವಾದಿಯ (ಸುಧಾಪುರ) ದೊರೆಯಾಗಿದ್ದ ಅರಸಪ್ಪ ನಾಯಕನು ವ್ಯಾಸರಾಯರ ಪರಮ ಶಿಷ್ಯನಾಗಿದ್ದ.  ಅರಸಪ್ಪ ನಾಯಕನ ಅಳಿಯ ಜ್ವರಪೀಡಿತನಾಗಿ ತೀರಿಕೊಂಡಾಗ ವಾದಿರಾಜರು ಆಗಲೇ ನೂರೆಂಟು ನುಡಿಗಳ ಲಕ್ಷ್ಮೀ ಶೋಭಾನೆಯನ್ನು ಹಾಡಿ ಪರಮಾತ್ಮನನ್ನು ಪ್ರಾರ್ಥಿಸಿ ರಾಜನ ಅಳಿಯನನ್ನು ಬದುಕಿಸಿದರು.  ಲಕ್ಷ್ಮೀ ಶೋಭಾನೆಯ ನುಡಿಗಳ ತುದಿಗಳಲ್ಲಿ ‘ರಕ್ಷಿಸಲಿ ನಮ್ಮ ವಧುವರರ’ ಎಂಬ ಪ್ರಾರ್ಥನೆ ಇದೆ.

    ಶೋಭಾನವೆನ್ನಿರಿ ಸುರರೊಳು ಸುಭಗನಿಗೆ
    ಶೋಭಾನವೆನ್ನಿ ಸುರಪ್ರಿಯಗೆ
    ಶೋಭಾನವೆನ್ನಿ ತ್ರಿವಿಕ್ರಮರಾಯಗೆ
    ಶೋಭಾನವೆನ್ನಿ ಸುಗುಣನಿಗೆ | ಶೋಭಾನೆ

    ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ
    ಪಕ್ಷಿವಾಹನಗೆರಗುವೆ
    ಪಕ್ಷಿವಾನಗೆರಗುವೆನನುದಿನ
    ರಕ್ಷಿಸಲಿ ನಮ್ಮ ವಧುವರರ

    ಶ್ರೀಯರಸ ಹಯವದನ ಪ್ರಿಯ ವಾದಿರಾಜ
    ರಾಯ ರಚಿಸಿದ ಪದವಿದು
    ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚುವದು
    ನಿರಾಯಸದಿಂದ ಸುಖಿಸುವರು |

    ಅರಸಪ್ಪ ನಾಯಕನು ಮಹಾಕೃತಜ್ಞತೆಯಿಂದ ಸ್ವಾದಿ ಪರಗಣೆಯ ಹದಿನಾರು ಸಾವಿರ ವರಹದ ಸೀಮೆಯನ್ನು ವಾದಿರಾಜರಿಗೆ ಧಾರೆಯೆರೆದರು. ವಾದಿರಾಜರು ಬದರಿಕಾಶ್ರಮಕ್ಕೆ ಹೋಗಿ ಬಂದಾಗಿನಿಂದ ತ್ರಿವಿಕ್ರಮೋಪಾಸನೆ ಮಾಡಲಾರಂಭಿಸಿದರು. ಬದರಿಯಿಂದ ತ್ರಿವಿಕ್ರಮಮೂರ್ತಿಯನ್ನು ತರಿಸಿ ಸ್ವಾದಿಯಲ್ಲಿ ಸ್ಥಾಪಿಸಲು ನಿರ್ಧರಿಸಿದರು. ನರಸಪ್ಪ ನಾಯಕನು ದೇವಾಲಯ ನಿರ್ಮಿಸಿದನು.  ದೇವಸ್ಥಾನದ ಉತ್ತರ ಭಾಗೆಯಲ್ಲಿ ಧವಳಗಂಗೆಯೆಂಬ ದಿವ್ಯ ಸರೋವರ ನಿರ್ಮಿತವಾಯಿತು. ಶಾಲಿವಾಹನ ಶಕೆ 1504ನೇ ಚಿತ್ರಭಾನು ಸಂವತ್ಸರದ ವೈಶಾಖ ಶುದ್ಧ ಪೂರ್ಣಿಮಾ ದಿವಸ ತ್ರಿವಿಕ್ರಮದೇವರ ಪ್ರತಿಷ್ಠಾಪನೆಯಾಯಿತು.
    ವಾದಿರಾಜರು ತಮ್ಮ ವೃದ್ಧಾಪ್ಯದಲ್ಲಿ ಸ್ವಾದಿಯಲ್ಲೇ ವಾಸ ಮಾಡಿದರು. ರಾಜರು ಅರಸಪ್ಪ ನಾಯಕನನ್ನು ಏಕಾಂತದಲ್ಲಿ ಕರೆಸಿ ‘ನಾವು ಮೃತರಾದ ನಂತರ ವೃಂದಾವನ ಪ್ರವೇಶ ಮಾಡುವವರಲ್ಲ. ನಮ್ಮ ಸುತ್ತಲೂ ಬ್ರಹ್ಮ, ವಿಷ್ಣು, ಮಹೇಶ್ವರ, ವಾಯು ದೇವರ ಸನ್ನಿಧಾನ ವಿಶೇಷವಾದ ನಾಲ್ಕು ಬೃಂದಾವನಗಳಿರಬೇಕು. ಭೂತರಾಜನಿಗೆ ಸ್ಥಳ ನಿರ್ಧಾರವಾಗಬೇಕು. ಒಟ್ಟು ಐದು ಬೃಂದಾವನಗಳಿರಬೇಕು. ಈ ವರ್ಷ ತ್ರಿವಿಕ್ರಮನ ರಥೋತ್ಸವ ನಡೆಸಿ, ತರುವಾಯ ಸಶರೀರದಿಂದಲೇ ಬೃಂದಾವನ ಪ್ರವೇಶ ಮಾಡುವೆವು. ಬೃಂದಾವನ ಪ್ರವೇಶದಿಂದ ನಮಗೆ ಯಾವ ದೇಹ ಹಾನಿ ಇಲ್ಲ ಎಂದು ಹೇಳಿದರು. ವಾದಿರಾಜರು ಉತ್ಸವಾಂಗದ ಅವಭೃತ ಸ್ನಾನವನ್ನು ಮಹೋತ್ಸವದಿಂದ ನೆರವೇರಿಸಿದರು. ಶಿಷ್ಯರಿಗೆಲ್ಲಾ ಮಂತ್ರಾಕ್ಷತೆ ಕೊಟ್ಟರು. ಸ್ವಯಂ ವೃಂದಾವನದಲ್ಲಿ ಕುಳಿತು ತಾವು ಜಪಸರ ಹೊರಗೆ ಹಾಕಿದ ಕೂಡಲೇ ಸಂಪುಟ ಶಿಲೆಯನ್ನು ಮುಚ್ಚಬೇಕೆಂದು ಆಜ್ಞೆಗೈದರು. ಫಾಲ್ಗುಣ ಬಹುಳ ತೃತೀಯಾ ದಿವಸ (ಕ್ರಿ.ಶ.1600) ರಾಜರು ಹೇಳಿದಂತೆ ಜಪಸರವು ಕೆಳಗುರುಳಿತು. ಜನರು ಜಯಜಯವೆಂದು ಘೋಷಣೆ ಮಾಡಿದರು. ಭಾರತೀಯ ಯತಿಗಳ ಇತಿಹಾಸದಲ್ಲಿ ಸಶರೀರವಾಗಿ ಬೃಂದಾವನ ಪ್ರವೇಶ ಮಾಡಿದವರಲ್ಲಿ ವಾದಿರಾಜರು ಮೊದಲಿಗರು. ಅನಂತರ ಎಷ್ಟೋ ವರ್ಷಗಳ ತರುವಾಯ ಶ್ರೀ ರಾಘವೇಂದ್ರ ಸ್ವಾಮಿಗಳು ಸ್ವಯಂ ವೃಂದಾವನ ಪ್ರವೇಶ ಮಾಡಿದರು. ಭರತ ಭೂಮಿಯನ್ನು ಮೂರು ಮೂರು ಬಾರಿ ಸಂಚರಿಸಿ ಲಕ್ಷಾವಧಿ ಪಾಮರ ಜನರನ್ನು ಉದ್ಧರಿಸಿದವರು ವಾದಿರಾಜರು. ವಾಸ್ಯರಾಯರಂತೆಯೇ ತಾವೂ ದೊಡ್ಡ ಗ್ರಂಥಕರ್ತರೆನಿಸಿ ಸಂಸ್ಕೃತಕ್ಕೆ ಸಮನಾದ ಸ್ಥಾನವನ್ನೇ ಕೊಟ್ಟು, ಕನ್ನಡ ವಾಙ್ಮಯವನ್ನು ಉದ್ಧಾರ ಮಾಡಿದವರು ವಾದಿರಾಜರು. ಬೃಂದಾವನಸ್ಥರಾದ ಮೇಲೂ ಅಂದಿನಿಂದ ಇಂದಿನವರೆಗೆ ಭಕ್ತಾನುರಾಗಿಗಳಾಗಿ ಸೇವೆ ಮಾಡಿದವರಿಗೆ ವಿವಿಧ ಇಷ್ಟಾರ್ಥಗಳನ್ನು ಕೊಡುತ್ತಿರುವವರು ವಾದಿರಾಜರು.
    ಶ್ರೀ ವಾದಿರಾಜ ಸ್ವಾಮಿಗಳ ಆರಾಧನೆ ದಿನಾಂಕ 07 ಮಾರ್ಚ್ 2026ರಂದು ಸೋಂದಾ ಕ್ಷೇತ್ರದಲ್ಲಿ ಜರುಗುವುದು ತನ್ನಿಮಿತ್ತ ಲೇಖನ
    ಮೂಲ : “ಕರ್ನಾಟಕ ಭಕ್ತ ವಿಜಯ”, ಬೇಲೂರು ಶ್ರೀ ಕೇಶವದಾಸರು
    ಸಂಗ್ರಹ : ಕಲ್ಯಾಣರಾವ್ ದೇಶಪಾಂಡೆ
    #47, ‘ಕೋರವಾರೇಶ ನಿವಾಸ’, ರಾಘವೇಂದ್ರ ಕಾಲನಿ,
    ಬಿಕೆಟಿ ರಸ್ತೆ, ವಿಜಯಪುರ – 586109.
    ಮೊ : 9482380624, 8779296857
    ದಿನಾಂಕ : 03-03-2026

    article Literature specialarticle
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನಲ್ಲಿ ‘ರಂಗ ಸಂತಸ’ ನಾಟಕೋತ್ಸವ ಮತ್ತು ಪ್ರಶಸ್ತಿ ಪ್ರದಾನ | ಮಾರ್ಚ್ 10ರಿಂದ 12
    Next Article ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಉದ್ಘಾಟನೆಗೊಂಡ ‘ರಂಗಶ್ರೀ-ರಂಗಹಬ್ಬ’
    roovari

    Add Comment Cancel Reply


    Related Posts

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026

    ಪುಸ್ತಕ ವಿಮರ್ಶೆ | ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ‘ಕೃತಿ ಸಂಕೀರ್ಣ’

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.