ಕನ್ನಡಕ್ಕೆ ಬಂದ ಬಂಗಾಳಿ ಸಾಹಿತ್ಯ
ಅಹೋಬಲ ಶಂಕರ ಸಂಸ್ಮರಣೆ
ಮುಂಬೈ ಮಹಾನಗರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಲೇ ಅನುವಾದದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹನೀಯರಲ್ಲಿ ಅಹೋಬಲ ಶಂಕರ ಅವರೂ ಒಬ್ಬರು. ಮೇ 15 ಅವರ ಜನ್ಮದಿನ. ಬಂಗಾಳಿ ಸಾಹಿತ್ಯದ ಮೇರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಸೈ ಎನಿಸಿಕೊಂಡ ಶಂಕರರ ಸ್ಮರಣೆಯ ನಿಮಿತ್ತ ಈ ಲೇಖನ.
ಕನ್ನಡ ಸಾಹಿತ್ಯಕ್ಕೆ ಮುಂಬೈ ಮಹತ್ವದ ದೇಣಿಗೆಯನ್ನು ನೀಡಿದೆ. ಹೊಸಗನ್ನಡ ಸಾಹಿತ್ಯ ಸಾಕಷ್ಟು ಸಮೃದ್ಧವಾದುದು ಹಾಗೂ ಅಷ್ಟೇ ವೈವಿಧ್ಯಮಯವಾದುದು. ಇಪ್ಪತ್ತನೆಯ ಶತಮಾನ ಕನ್ನಡ ಸಾಹಿತ್ಯದ ಮತ್ತೊಂದು ಸುವರ್ಣಯುಗ. ಅಹೋಬಲ ಶಂಕರ ಅವರು ಪತ್ರಿಕೋದ್ಯಮದಲ್ಲಿದ್ದೂ ಸತತ ಅನುವಾದಗಳ ಮೂಲಕ ಹೊಸಗನ್ನಡ ಸಾಹಿತ್ಯದ ಬಣ್ಣ ಬನಿಯನ್ನು ಗಾಢಗೊಳಿಸಿದ ಮಹನೀಯರಲ್ಲಿ ಒಬ್ಬರು.

ಆಧುನಿಕ ಕನ್ನಡ ಸಾಹಿತ್ಯ ಸುರುವಾದುದೇ ಅನುವಾದ ಕಾರ್ಯಗಳ ಮೂಲಕ. ಬಿಎಂಶ್ರೀ ಅವರಿಗಿಂತ ಮುಂಚೆಯೇ ಕನ್ನಡ ಕಾವ್ಯಾನುವಾದಕ್ಕೆ ನಾಂದಿ ಹಾಡಿದವರು (1919) ಮುಂಬೈ ಕನ್ನಡಿಗ ಹಟ್ಟಿಯಂಗಡಿ ನಾರಾಯಣರಾಯರು. ಮುಂಬೈಯವರೇ ಆದ ಚುರಮುರಿ ಶೇಷಗಿರಿರಾಯರು ಮೊದಲ ಬಾರಿಗೆ (1869) ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ಅದನ್ನು ಮುಂಬೈಯಿಂದ ಪ್ರಕಟಿಸಿ ಹೊಸ ಸಂಚಲನವನ್ನುಂಟು ಮಾಡಿದರು ಈ ಪರಂಪರೆಯನ್ನು ಮುಂದುವರಿಸಿ ಬಂಗಾಳಿ ಭಾಷೆಯ ಇಪ್ಪತ್ತಕ್ಕೂ ಹೆಚ್ಚು ಹೆಸರಾಂತ ಕೃತಿಗಳನ್ನು ಸೈ ಸೈ ಎನ್ನುವಂತೆ ಕನ್ನಡಕ್ಕೆ ಅನುವಾದಿಸಿಕೊಟ್ಟ ಕೀರ್ತಿ ಮತ್ತೊಬ್ಬ ಮುಂಬೈ ಕನ್ನಡಿಗ ಅಹೋಬಲ ಶಂಕರರಿಗೆ ಸಲ್ಲುತ್ತದೆ. ಕನ್ನಡದ ಅನುಸೃಷ್ಟಿ ಪರಂಪರೆಯ ಪುಟಗಳನ್ನು ತಿರುವಿ ಹಾಕಲು ಹೊರಟರೆ ನಮ್ಮ ಕಣ್ಣಿಗೆ ಬೀಳುವ ಒಂದು ದೊಡ್ಡ ಹೆಸರು ಅಹೋಬಲ ಅವರದು. ಬಂಗಾಳಿ ಭಾಷೆಯ ನಾಮಾಂಕಿತ ಸಾಹಿತಿಗಳ ಲೇಖಕರ ಮಹತ್ವದ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಪರಿಚಯಿಸುವ ಮೂಲಕ ಅವರು ಹೊಸ ತಲೆಮಾರಿನ ಓದುಗರನ್ನು, ಬರಹಗಾರರನ್ನು ಪ್ರಭಾವಿಸಿದ ಭಾಷಾಂತರಕಾರರೂ ಹೌದು. ಬಿ. ವೆಂಕಟಾಚಾರ್ಯ ಅವರ ಬಳಿಕ ನೇರವಾಗಿ ವಿಪುಲವಾಗಿ ಸಮರ್ಥವಾಗಿ ಬಂಗಾಳಿಯಿಂದ ಕನ್ನಡಕ್ಕೆ ಅನುವಾದ ಕೈಂಕರ್ಯ ಮಾಡಿದವರು ಅಹೋಬಲ ಎಂಬುದು ಹೆಮ್ಮೆಯ ಸಂಗತಿ.
ಅಹೋಬಲ ಶಂಕರ ಅವರು 1913 ಮೇ 15ರಂದು ಬೆಂಗಳೂರಿನ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದರು. ನ್ಯಾಷನಲ್ ಹೈಸ್ಕೂಲ್, ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಶಂಕರ ಅವರಿಗೆ ಬಾಲ್ಯದಿಂದಲೂ ಸಾಹಿತ್ಯದಲ್ಲಿ ವಿಶೇಷವಾದ ಆಸಕ್ತಿ ಇತ್ತು. ಇಂಗ್ಲೀಷ್ ಹಾಗೂ ಕನ್ನಡ ಸಾಹಿತ್ಯದಲ್ಲಿ ಮೇರು ಕೃತಿಗಳೆನಿಸಿದ ಅನೇಕ ಮಹತ್ವದ ಗ್ರಂಥಗಳನ್ನು ಓದಿ ಅವುಗಳ ಬಗ್ಗೆ ವಿಮರ್ಶೆ, ವಿಶ್ಲೇಷಣೆ ಮಾಡುವ ಸಾಮರ್ಥ್ಯವನ್ನು ಚಿಕ್ಕ ವಯಸ್ಸಿನಲ್ಲೇ ಅವರು ಗಳಿಸಿಕೊಂಡರು. ಸಾಹಿತ್ಯದ ಒಲವಿನೊಂದಿಗೆ ದೇಶಾಭಿಮಾನವನ್ನೂ ಬೆಳೆಸಿಕೊಂಡು ಬಂದ ಶಂಕರರು ಮಹಾತ್ಮ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಉದ್ಯೋಗ ನಿಮಿತ್ತ ಮುಂಬೈಗೆ ಬಂದ ಅವರು ಪತ್ರಿಕೋದ್ಯಮಿಯಾಗಿ ಬಹುಬೇಗನೆ ಸೈ ಎನಿಸಿಕೊಂಡರು. ಇಂಡಿಯನ್ ಎಕ್ಸ್ ಪ್ರೆಸ್, ಫ್ರೀ ಪ್ರೆಸ್ ಜರ್ನಲ್ಗಳಲ್ಲಿ ಅವರು ವಿವಿಧ ಹುದ್ದೆಗಳನ್ನು ನಿರ್ವಹಿಸಿ ಹಿರಿಯ ಸಹಾಯಕ ಸಂಪಾದಕ ಹುದ್ದೆಗೇರಿದರು. ಸೂಕ್ಷ್ಮ, ತೀಕ್ಷ್ಣ ಬರವಣಿಗೆಯ ಮೂಲಕ ಗಮನ ಸೆಳೆದಿದ್ದ ಶಂಕರ ಅವರು ಆಂಗ್ಲ ಪತ್ರಿಕಾ ವಲಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದರು. ದೊಡ್ಡ ಓದುಗ ವರ್ಗವನ್ನು ಅವರು ಸೃಷ್ಟಿಸುವಲ್ಲಿ ಯಶಸ್ವಿಯಾದರು ಜೊತೆಗೆ ಸಾಹಿತ್ಯದ ಅಧ್ಯಯನವನ್ನೂ ನಿಷ್ಠೆಯಿಂದ ಮುಂದುವರಿಸಿದರು.
ಶಂಕರ ಅವರದು ನಾನಾ ಭಾಷೆಗಳ ಸಂವೇದನೆ. ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ವಿಶೇಷವಾದ ಪಾಂಡಿತ್ಯವನ್ನು ಹೊಂದಿದ್ದ ಶಂಕರರು ಬಂಗಾಳಿ ಭಾಷೆಯನ್ನು ಕಲಿತು ಅಲ್ಲಿನ ಪ್ರಸಿದ್ಧ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಮೂಲ ಭಾಷೆಯಿಂದ ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಅನುವಾದ ಮಾಡಿದ್ದು ಅವರ ಹಿರಿಮೆ. ಅಹೋಬಲ ಶಂಕರರು ಅವರದು ಸೃಜನಶೀಲ ಪ್ರತಿಭೆ. ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಅವರೂ ಒಬ್ಬರು. ಅವರು ಬಂಗಾಳಿ ಸಾಹಿತ್ಯದಿಂದ ಸುಮಾರು ಆರು ಸಾವಿರ ಪುಟಗಳಷ್ಟು ಉತ್ತಮ ಸಾಹಿತ್ಯವನ್ನು ಎರಡು ದಶಕಗಳಲ್ಲಿ ಅನುವಾದಿಸಿ ಕನ್ನಡಿಗರಿಗೆ ಒದಗಿಸಿದ್ದಾರೆ. ಇದೊಂದು ಅಸಾಧಾರಣ ಸಾಧನೆ. ಬಂಗಾಳದ ಸುಪ್ರಸಿದ್ಧ ಸಾಹಿತಿಗಳಾದ ರವೀಂದ್ರನಾಥ ಟಾಗೋರರ ಸಮಗ್ರ ಕತೆಗಳನ್ನು ಅನುವಾದಿಸಿ ಕನ್ನಡ ಸಹೃದಯರಿಗೆ ಪರಿಚಯಿಸಿದವರು ಶಂಕರರು.
“ಗುರುದೇವರ ಈ 84 ರತ್ನಗಳು ವಂಗ ಭಾಷಾ ಸೇವೆಗೆಂದೇ ಸೃಷ್ಟಿಯಾದುದಲ್ಲ. ಇವೆಲ್ಲ ಪಂಪ ರನ್ನ ಹರಿಹರ ನಾರಣಪ್ಪ ಲಕ್ಷ್ಮೀಶ ಮಾಸ್ತಿ ಕುವೆಂಪು ಬೇಂದ್ರೆ ಅವರ ಕೃತಿಗಳಂತೆ ಕನ್ನಡ ಜಗತ್ತಿಗೂ ಕನ್ನಡ ಸಾಹಿತ್ಯಕ್ಕೂ ಸೇರಬೇಕಾದ ಆಸ್ತಿ. ಹಾಗೆಂದೇ ಕನ್ನಡಿಗರು ಅವುಗಳನ್ನು ಆದರದಿಂದ ಬರಮಾಡಿಕೊಂಡು ಅವುಗಳ ಸಂಪೂರ್ಣ ಫಲವನ್ನು ಅನುಭೋಗಿಸಿದರೆ ಅನುವಾದಕನ ಶ್ರಮ ಸಾರ್ಥಕ” ಎಂಬ ಆಶಯ ಅವರದು. ಟಾಗೋರರ ಅಂಚೆಯ ಮನೆ ನಾಟಕ ಕನ್ನಡದಲ್ಲಿ ಬಹು ಜನಪ್ರಿಯವಾದುದು ಅವರ ಪ್ರಯತ್ನದಿಂದಲೇ. ವಿಭೂತಿಭೂಷಣ ಬಂದೋಪಾಧ್ಯಾಯ, ಬಂಕಿಮಚಂದ್ರ ಚಟರ್ಜಿ, ಶರತ್‌ಚಂದ್ರ, ಬಿರೇನ್‌ದಾಸ್ ಮತ್ತಿತರ ಬಂಗಾಲದ ಅಗ್ರಮಾನ್ಯ ಸಾಹಿತಿಗಳನ್ನು ಕನ್ನಡಿಗರಿಗೆ ಪರಿಚಯಿಸಿದ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ.

ಅಹೋಬಲ ಅವರು ಕನ್ನಡಕ್ಕೆ ತಂದ ಕೃತಿಗಳು ಸಾಕಷ್ಟು ಜನಪ್ರಿಯವಾಗಿವೆ. ವಿನೋದಿನಿ, ಯೋಗಾಯೋಗ, ರವೀಂದ್ರ ಕಥಾಮಂಜರಿ (1ರಿಂದ 3), ವಿಸರ್ಜನೆ (ನಾಟಕ), ಅಂಚೆಯ ಮನೆ (ನಾಟಕ), ಶುಭದ, ಇಂದಿರಾ, ಯುಗ್ಲಾಲಾಂಗುರಿಯಾ ಮತ್ತು ರಾಧಾರಾಣಿ, ರಜನಿ, ನರ್ತಕಿಯ ಪೂಜೆ, ಇನ್ನೂ ದೂರದ ದಾರಿ, ಮಾಯಾ, ಕವಿ, ಬೊಂಬೆ ಕುಣಿತದ ಕಥಾಪ್ರಸಂಗ, ಮಹಾ ಯಾತ್ರಿಕ, ಅಪರಾಜಿತ, ನಿದ್ದೆಗೆಟ್ಟವರು, ಸಾಹೀಬ್, ಬೀಬಿ ಮತ್ತು ಗುಲಾಮ, ನಂಬೂದರಿಪಾಡ್ (ಆತ್ಮಕಥೆ), ರಕ್ತಕರವೀರ, ಹಳ್ಳಿಯ ಸಮಾಜ, ರಾಮಾ, ನನ್ನ ಬಾಲ್ಯದ ದಿನಗಳು, ಪೂರ್ಣಕುಂಭ, ರಾಜಾ ರಾಣಿ ಹೀಗೆ ಬಂಗಾಳಿ ಸಾಹಿತ್ಯದ ಸುಮಾರು ಇಪ್ಪತ್ತರಷ್ಟು ಕಾದಂಬರಿ, ನಾಟಕ, ಕಥಾ ಸಂಕಲನಗಳನ್ನು ಕನ್ನಡಕ್ಕೆ ಅನುವಾದಿಸಿ ಸೈ ಎನಿಸಿಕೊಂಡರು. ಅವರ ಅನುವಾದ ಉತ್ಕೃಷ್ಟ, ಮನಮೋಹಕ ಎಂಬುದು ಎಲ್ಲರೂ ಒಪ್ಪಿಕೊಂಡ ಸತ್ಯ. ವಿಶ್ವ ಸಾಹಿತ್ಯದ ಪರಿಚಯ ನಮಗೆಲ್ಲ ಆಗಿರುವುದು ಅನುವಾದಕರ ಶ್ರಮದಿಂದ. ಹೀಗಿದ್ದೂ ಅನುವಾದಕರ ಮುಖ್ಯ ಪಾತ್ರವನ್ನು ಮರೆತುಬಿಡುತ್ತೇವೆ. ಅಹೋಬಲ ಶಂಕರ ಅವರು ಅನುವಾದ ಕಾರ್ಯದಲ್ಲಿ ಅಪಾರವಾದ ಶ್ರಮಬಸಿದು ವಿಶೇಷವಾದ ಸಾಧನೆಯನ್ನು ಮಾಡಿದ ನುಡಿ ಸೇವಕ. ಅವರ ಸಾಧನೆಯನ್ನು ಯಾರೂ ಗುರುತಿಸಿ ಗೌರವಿಸಲಿಲ್ಲ ಎಂಬುದು ವಿಷಾದದ ಸಂಗತಿ. ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಅಹೋಬಲರು ಮಾಡಿದ ನುಡಿ ಮಣಿಹ ಮಾದರಿಯಾಗಿದೆ. ಭಾಷಾಂತರದ ಮೂಲಕ ಸಾಹಿತ್ಯ ಕ್ಷೇತ್ರದ ಏಕತಾನತೆಯನ್ನು ಮುರಿಯುವ, ಕನ್ನಡವನ್ನು ಸಮೃದ್ಧಗೊಳಿಸುವ ಕೆಲಸವನ್ನು ಅವರು ನಿಷ್ಠೆಯಿಂದ ಮಾಡಿದ್ದು ಉಲ್ಲೇಖನೀಯ ಅಂಶ. ಅವರ ಹೆಚ್ಚಿನ ಕೃತಿಗಳನ್ನು ಕೂಡಲಿ ಚಿದಂಬರ ಅವರು ಮೈಸೂರಿನ ಕಾವ್ಯಾಲಯ ಪ್ರಕಾಶನದ ಮೂಲಕ ಬೆಳಕಿಗೆ ತಂದದ್ದು ವಿಶೇಷ. “ಆಧುನಿಕ ಬಂಗಾಳಿ ಸಾಹಿತ್ಯದ ಇಂಥ ಮಹತ್ವಪೂರ್ಣ ಲೇಖಕರ ಕೃತಿಗಳನ್ನು ಕನ್ನಡಕ್ಕೆ ತಂದುಕೊಳ್ಳುವಲ್ಲಿ ಮೈಸೂರಿನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಕಾವ್ಯಾಲಯ ಪ್ರಕಾಶನ ಹಾಗೂ ಅಹೋಬಲ ಶಂಕರ ಅವರು ಸಲ್ಲಿಸಿರುವ ಸೇವೆ ಸ್ಮರಣೀಯವಾಗಿದೆ. ಬಂಗಾಳಿಯಿಂದ ನೇರವಾಗಿ ಹಾಗೂ ಸುಂದರವಾಗಿ ಈ ಲೇಖಕರ ಕೃತಿಗಳನ್ನು ತಂದುಕೊಟ್ಟಿರುವುದಕ್ಕಾಗಿ ಅಹೋಬಲ ಶಂಕರ ಅವರಿಗೆ ಕನ್ನಡಿಗರು ಋಣಿಗಳಾಗಿದ್ದಾರೆ. ‘ಸಾಹೇಬ್, ಬೀಬಿ ಮತ್ತು ಗುಲಾಮ’ ಕಾದಂಬರಿಯಂತೂ ‘ರಜತ ಪರದೆಯ ಮೇಲೆ ಮೂಡಿದ ಸುಂದರ ಕಾವ್ಯ’ ಎಂದೇ ಹೆಸರು ಮಾಡಿದೆ ಎಂಬುದಾಗಿ ಪ್ರಧಾನ ಗುರುದತ್ ಅವರು ಅಭಿಪ್ರಾಯಪಟ್ಟಿದ್ದಾರೆ. ಅತ್ಯಂತ ಸರಳ, ನಿರಾಡಂಬರ ಜೀವನ ನಡೆಸಿದ ಶಂಕರರು 1997ರ ಸೆಪ್ಟೆಂಬರ್ 2ರಂದು ನಿಧನರಾದರು. ಶಂಕರ ಅವರು ಅನುವಾದಿಸಿದ ಬಹುತೇಕ ಕೃತಿಗಳು ಮತ್ತೆ ಮತ್ತೆ ಮರುಮುದ್ರಣ ಕಂಡಿರುವುದು ಅವುಗಳ ಜನಪ್ರಿಯತೆಗೆ ಗುಣಮಟ್ಟಕ್ಕೆ ಸಾಕ್ಷಿ. ವಾಚನೀಯತೆ ಅಹೋಬಲ ಶಂಕರ ಅವರ ಅನುವಾದದ ಬಹಳ ದೊಡ್ಡ ಶಕ್ತಿ. ಅನುವಾದದ ಮೂಲಕ ಕನ್ನಡವನ್ನು ಸಮೃದ್ಧಗೊಳಿಸಿದ ಅವರಿಗೆ ಕನ್ನಡಿಗರು ಸದಾ ಕೃತಜ್ಞರು.

ಪ್ರೊ. ಜಿ.ಎನ್. ಉಪಾಧ್ಯ ಮುಂಬೈ ವಿಶ್ವವಿದ್ಯಾಲಯ
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.
