ಬೆಳಗ್ಗೆ ರೇಡಿಯೋ ಕೇಳುತ್ತಾ, ವಾರ್ತಾ ಪತ್ರಿಕೆ ಮತ್ತು ಚಹಾಕ್ಕಾಗಿ ಕಾಯುವ ಕಾಲವೊಂದಿತ್ತು. ಇಂದಿನ ದಿನಗಳಲ್ಲಿ ಎಲ್ಲಾ ಸುದ್ದಿಗಳೂ ಮೊಬೈಲ್ ನಲ್ಲಿ ಸಿಗುತ್ತವೆ. ಡಿಜಿಟಲ್ ಮಾಧ್ಯಮ ವಿಶೇಷವಾಗಿ ಸದ್ದು ಮಾಡುತ್ತಿರುವ ಈ ಕಾಲಘಟ್ಟದಲ್ಲಿ ವಾರ್ತಾ ಪತ್ರಿಕೆಯನ್ನು ಓದುವ ವಾಚಕರ ಒಂದು ವರ್ಗ ಈಗಲೂ ಇದೆ ಎಂಬುದು ಸಂತೋಷದ ವಿಷಯ. ಎಷ್ಟು ಕೆಲಸದ ಒತ್ತಡವಿದ್ದರೂ, ಆರಾಮಾಗಿ ಕುಳಿತು ಚಹವನ್ನು ಸವಿಯುತ್ತಾ ವೃತ್ತಪತ್ರಿಕೆಗಳನ್ನು ಹಿಡಿದುಕೊಂಡು ಓದುವುದೆಂದರೆ ಅದರಿಂದ ದೊರೆಯುವ ಸಂತೋಷವೇ ಬೇರೆ. ಹಬ್ಬ ಹರಿದಿನಗಳಲ್ಲಿ ಒಂದು ದಿನ ಪೇಪರ್ ಇಲ್ಲ ಅಂದ್ರೆ, ಆ ದಿನದ ಬೆಳಗಿಗೆ ಸ್ವಾರಸ್ಯವೇ ಇರುವುದಿಲ್ಲ. ದಿನ ಪರಿಪೂರ್ಣವೆಂದಿಸಿಕೊಳ್ಳುವುದೇ ಪೇಪರ್ ಕೈಗೆ ಬಂದಾಗ. ಇದು ಮುದ್ರಣ ಮಾಧ್ಯಮ ಕ್ಷೇತ್ರಕ್ಕೆ ದೊರೆತ ಗೌರವ. ಸಾಮಾಜಿಕ ಮಾಧ್ಯಮಗಳಿಗೆ ನಾವು ವಾರ್ತೆ ತಲುಪಿಸಲು ಮೊದಲು ಅಲೆದಾಡಬೇಕಿತ್ತು. ಈಗ ಇದೆಲ್ಲವೂ ನಾವಿರುವಲ್ಲಿoದಲೇ ಸಾಧ್ಯವಾಗುತ್ತಿದೆ ಎಂಬುದು ಒಂದು ರೀತಿಯಲ್ಲಿ ಸುದ್ದಿ ಮಾಧ್ಯಮಗಳ ಪ್ರಗತಿಗೆ ಸಾಕ್ಷಿಯಾಗಿದೆ.
ನಮ್ಮ ಸುತ್ತಮುತ್ತ, ದೇಶ – ವಿದೇಶಗಳಲ್ಲಿ ಏನು ನಡೆಯುತ್ತಿದೆ ಎಂಬ ವಿಚಾರ ಮನೆಮನೆಗಳಿಗೆ ತಲುಪುವುದು ಈ ವಾರ್ತಾ ಪತ್ರಿಕೆಯ ಮೂಲಕ. ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ದೇಶಪ್ರೇಮಿಗಳು ಅದೆಷ್ಟೋ ಮಂದಿ. ಅವರ ಆಡಳಿತದ ಒಳಿತು ಕೆಡುಕುಗಳನ್ನು ಟೀಕಿಸಿ ಜನಮಾನಸದ ಅರಿವಿಗೆ ತರಲೆಂದೇ ಜೇಮ್ಸ್ ಆಗಸ್ಟಸ್ ಹಿಕ್ಕಿ ‘ದಿ ಬೆಂಗಾಲಿ ಗಜೆಟ್’ ಎಂಬ ಪತ್ರಿಕೆಯನ್ನು ಆರಂಭಿಸಿದ್ದು ನಾವು ಇಂದು ನೆನಪಿಸಿಕೊಳ್ಳಬೇಕು. ಈ ಪತ್ರಿಕೆ ಮೊದಲು ಹೊರಬಂದದ್ದು 29 ಜನವರಿ 1780ರಂದು. ‘ದಿ ಬೆಂಗಾಲಿ ಗೆಜೆಟ್’ ಪತ್ರಿಕೆಯನ್ನು ‘ಹಿಕ್ಕಿ ಗೆಜೆಟ್’ ಅಥವಾ ‘ದಿ ಕಲ್ಕತ್ತಾ ಜನರಲ್ ಅಡ್ವಟೈಸರ್’ ಎಂದೂ ಕರೆಯುತ್ತಾರೆ. ಮೊದಲ ಪತ್ರಿಕೆ ಆರಂಭವಾದ ಈ ದಿನವನ್ನು ಪ್ರತಿ ಜನವರಿ ತಿಂಗಳ 29ನೆಯ ತಾರೀಕಿನಂದು ‘ಭಾರತೀಯ ವೃತ್ತ ಪತ್ರಿಕೆ ದಿನ’ವನ್ನಾಗಿ ಆಚರಿಸಲಾಗುತ್ತದೆ. ಮೊದಲ ಪತ್ರಿಕೆಯನ್ನು ಆರಂಭಿಸಿದ ಜೇಮ್ಸ್ ಆಗಸ್ಟಸ್ ಹಿಕ್ಕಿಯನ್ನೇ ‘ಭಾರತೀಯ ಪತ್ರಿಕೋದ್ಯಮದ ಪಿತಾಮಹ’ ಎನ್ನಲಾಗಿದೆ. ಈ ದಿನದಂದು ಪತ್ರಕರ್ತರ ಹಕ್ಕುಗಳು ಮತ್ತು ಅವರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕ್ರಮವಿದೆ. ಜನರನ್ನು ಜಾಗೃತಿಗೊಳಿಸಿ, ಸಮಾಜವನ್ನು ಬಲಪಡಿಸುವ ನಿಟ್ಟಿನಲ್ಲಿ ಗಣನೀಯ ಕೊಡುಗೆ ನೀಡಿದ ವಾರ್ತಾ ಪತ್ರಿಕೆಗಳನ್ನು ಮತ್ತು ಪತ್ರಕರ್ತರನ್ನು ನೆನಪಿಸಿಕೊಂಡು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ.