ಸರಕಾರಿ ಹುದ್ದೆಯಲ್ಲಿರುವ ಅಧಿಕಾರಿಗಳು ಅಥವಾ ಯಾರೇ ಆಗಲಿ ತಮ್ಮ ಉದ್ಯೋಗದಲ್ಲಿ ಪ್ರೀತಿ, ಶೃದ್ಧೆ, ಶಿಸ್ತು, ಪ್ರಾಮಾಣಿಕತೆಯನ್ನು ಮೆರೆದು ಬಹಳ ಅನುಭವ ಪಡೆದವರು ಇರುತ್ತಾರೆ. ಅವುಗಳ ಬಲದಿಂದ ಉದ್ಯೋಗದಲ್ಲಿ ಮೇಲೇರುತ್ತ ಹೋಗಿ ಪ್ರಸಿದ್ಧರಾದವರು ಇದ್ದಾರೆ. ಇವುಗಳನ್ನು ಹೊರತುಪಡಿಸಿ ಅಧಿಕಾರದಲ್ಲಿದ್ದುಕೊಂಡು ಉತ್ತಮ ಸಂಗೀತಗಾರರಾಗಿ, ಸಂಗೀತೋಪಕರಣಗಳನ್ನು ನುಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡವರು, ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲ ವಾಗ್ಮಿಗಳು ಹಾಗೂ ಸಾಹಿತಿಗಳೂ ಇದ್ದಾರೆ. ಅವರಲ್ಲಿ ಒಬ್ಬರು ಶ್ರೀ ಜಯತೀರ್ಥ ರಾಜಪುರೋಹಿತ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಶ್ರೀ ಜಯತೀರ್ಥ ರಾಜಪುರೋಹಿತ ತಮ್ಮ ಶ್ರದ್ದೆ ಮತ್ತು ದಕ್ಷತೆಯಿಂದ ಐ.ಎ.ಎಸ್. ಹುದ್ದೆಗೆ ಏರಿದ್ದು ಮಾತ್ರವಲ್ಲ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಮೋಘ ಸೇವೆ ಸಲ್ಲಿಸಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ.
ಜಯತೀರ್ಥ ರಾಜಪುರೋಹಿತರು ಮೂಲತಃ ರಾಯಚೂರು ಜಿಲ್ಲೆಯ ಕನಕಗಿರಿಯವರು. ಹಿಂದೆ ಪಾಳೆಯಪಟ್ಟಾಗಿದ್ದ ಕನಕಗಿರಿಯನ್ನು ನಾಯಕರು ಆಳುತ್ತಿದ್ದು, ವಿಜಯನಗರದ ಅರಸರಿಗೆ ಅಧೀನರಾಗಿದ್ದರು. ಅವರಿಗೆ ಜಯತೀರ್ಥರ ಪೂರ್ವಿಕರು ಪುರೋಹಿತರಾಗಿದ್ದ ಕಾರಣ ‘ಪುರೋಹಿತ’ ಎಂಬುದು ಹೆಸರಿನ ಜೊತೆಗೆ ಸೇರಿಹೋಯಿತು. ಕಾಲಾನುಕ್ರಮದಲ್ಲಿ ರಾಜ ಪೌರೋಹಿತ್ಯ ತಪ್ಪಿದರೂ ಸಮಾಜದಲ್ಲಿ ಪೌರೋಹಿತ್ಯ ನಡೆಸಿ ಅಲ್ಪಸ್ವಲ್ಪ ಸಂಪಾದಿಸುತ್ತಿದ್ದರು. ಹೆಸರು ಕುಲ ದೊಡ್ಡದಾಗಿದ್ದರೂ ಇವರ ಪೂರ್ವಜರು ಸಾಕಷ್ಟು ಅನುಕೂಲವಂತರಾಗಿರಲಿಲ್ಲ. ಯಾಕೆಂದರೆ ರಾಜ ಪೌರೋಹಿತ್ಯಕ್ಕಾಗಿ ಆಗಿನ ಕಾಲದಲ್ಲಿ ಇಂತಿಷ್ಟು ಭೂಮಿ ಕಾಣಿಕೆ ರೂಪದಲ್ಲಿ ಕೊಡುತ್ತಿದ್ದರು. ಆದರೆ ಬರಬರುತ್ತ ಯಾವುದು ಅಷ್ಟಾಗಿ ಉಳಿದಿರಲಿಲ್ಲ. ಬಡತನದಲ್ಲಿ ಜೀವನ ನಡೆಸುತ್ತಿದ್ದ ಜಯತೀರ್ಥರ ತಂದೆಯವರದ್ದು ಶಿಸ್ತುಬದ್ಧ ಜೀವನ. ತನ್ನ ಹಿರಿಯರಂತೆ ಮಗ ಸಂಸ್ಕೃತ ಓದಿ ಧಾರ್ಮಿಕ ಜೀವನದ ಕಡೆಗೆ ಹೆಚ್ಚು ಗಮನ ಕೊಡಬೇಕೆಂದು ಇವರ ಇಚ್ಛೆ. ಆದರೆ ಮಗನಿಗೆ ಇಂಗ್ಲೀಷ್ ಭಾಷೆ ಕಲಿಯುವ ಹಂಬಲ. ತಂದೆಯ ಇಚ್ಛೆಯಂತೆ ಸಂಸ್ಕೃತ ಚೆನ್ನಾಗಿ ಕಲಿತ ಜಯತೀರ್ಥರು ಬೇಸರದಿಂದ ತಮ್ಮ ಹತ್ತನೇ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿ ಹೋದರು. ಬಾಲ್ಯದಲ್ಲಿ ಜಯತೀರ್ಥರ ತಂದೆಯೂ ಮನೆ ಬಿಟ್ಟು ಓಡಿ ಹೋಗಿ ಹಲವು ವರ್ಷಗಳ ಕಾಲ ಹೊರ ಊರುಗಳಲ್ಲಿದ್ದು ಚೆನ್ನಾಗಿ ಸಂಸ್ಕೃತ ಅಧ್ಯಯನ ಮಾಡಿ ಮರಳಿ ಮನೆಗೆ ಬಂದಿದ್ದರು ಎಂಬುದನ್ನು ಜಯತೀರ್ಥರೇ ಹೇಳಿಕೊಂಡಿದ್ದಾರೆ. ಮಗನನ್ನು ಪತ್ತೆ ಹಚ್ಚಿ ಮನೆಗೆ ತಂದ ಶೇಷಾಚಾರ್ಯರು ಮಗ ಮನೆ ಬಿಟ್ಟು ಓಡಿಹೋದ ನಿಜವಾದ ಕಾರಣವನ್ನು ತಿಳಿಯದೆ 18 ವರ್ಷದ ಜಯತೀರ್ಥರಿಗೆ 14 ವರ್ಷದ ಕನ್ಯೆ ಸೀತಾಳೊಂದಿಗೆ ಮದುವೆ ಮಾಡಿದರು.
ಜಯತೀರ್ಥರು ಹೈದರಾಬಾದಿನ ಮಾವನ ಮನೆಯಲ್ಲಿದ್ದು ಖಾಸಗಿಯಾಗಿ ಮೆಟ್ರಿಕ್ ಪಾಸ್ ಮಾಡಿ ಉದ್ಯೋಗದ ಹುಡುಕಾಟದಲ್ಲಿದ್ದರು. ಇದೇ ಸಂದರ್ಭದಲ್ಲಿ ಹೈದರಾಬಾದ್ ನಲ್ಲಿ ಎ.ಆರ್. ಕೃಷ್ಣಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಬಿ. ಎಂ. ಶ್ರೀ, ಗೋಕಾಕ, ಬೆಟಗೇರಿ, ಮಾಸ್ತಿ ಮುಂತಾದ ಕನ್ನಡದ ಮೇರು ಸಾಹಿತಿಗಳ ಭೇಟಿ ಇವರಿಗಾಯಿತು ಮತ್ತು ಅವರ ಭಾಷಣಗಳನ್ನು ಕೇಳುವ ಅವಕಾಶವೂ ದೊರೆಯಿತು. ಕೆಲಸದ ಪ್ರಯತ್ನದಲ್ಲಿದ್ದ ಜಯತೀರ್ಥರಿಗೆ ಕೆಲಸ ದೊರೆತರೂ, ಒಂದೆರಡು ತಿಂಗಳು ಸಂಬಳವಿಲ್ಲದೆ ದುಡಿದ ನಂತರ 30 ರೂಪಾಯಿ ಸಂಬಳ ನಿಗದಿಯಾಯಿತು. ಆದರೆ ಮತ್ತೆ ಓದಬೇಕೆಂಬ ಇಚ್ಛೆ ಉಂಟಾಗಿ ಇಂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ವಿದ್ಯಾರ್ಥಿಯಾಗಿ ಸೇರಿಕೊಂಡ ಸಂದರ್ಭದಲ್ಲಿ ಇವರಿಗೆ ಗುರುಗಳಾಗಿ ಪ್ರೊಫೆಸರ್ ಡಿ.ಕೆ. ಭೀಮಸೇನರಾವ್ ಹಾಗೂ ಗೋಕಾಕರು ಅಲ್ಲಿಗೆ ಇಂಗ್ಲೀಷ್ ಅಧ್ಯಾಪಕರಾಗಿ ಬಂದರು. ಇವರ ಮುಂದಾಳುತ್ವದಲ್ಲಿ ರಚನೆಯಾದ ‘ಜಿಜ್ಞಾಸು ಕೂಟ’ ಎಂಬ ಸಂಘಟನೆ ಜಯತೀರ್ಥರ ಬರವಣಿಗೆಗೆ ಪ್ರೇರಣೆ ಆಯ್ತು. ಸಂಸ್ಕೃತದಲ್ಲಿ ಅಧಿಕ ಅಂಕ ಪಡೆದು ಬಿ.ಎ.ಯಲ್ಲಿ ಉತ್ತೀರ್ಣರದ ಜಯತೀರ್ಥರು ಲೋಕಸೇವಾ ಆಯೋಗದ ಪರೀಕ್ಷೆ (Indian Administrative Service)ಯನ್ನು ಪಾಸ್ ಮಾಡಿಕೊಂಡರು. ತಹಸಿಲ್ದಾರರಾಗಿ ಜಹೀರಾಬಾದ್ ನಲ್ಲಿ ಕೆಲಸ ಆರಂಭಿಸಿ, ಮುಂದೆ ರಾಜ್ಯದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದರು. ಈ ಉದ್ಯೋಗಕ್ಕೆ ಬಂದ ನಂತರ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ಇವರು ಕಾದಂಬರಿ, ಸಣ್ಣ ಕಥೆ, ಜೀವನ ಚರಿತ್ರೆ ಹೀಗೆ ಸಾಹಿತ್ಯದ ಬೇರೆ ಬೇರೆ ಆಯಾಮಗಳಲ್ಲಿ ಲೇಖನಿಯನ್ನು ಹರಿಸಿದರು.
1962ರಲ್ಲಿ ‘ಪಾರವ್ವನ ಪಂಚಾಯಿತಿ’ ಕಥೆಗೆ ಬಹುಮಾನ ಬಂದ ನಂತರ ಇವರ ಸಾಹಿತ್ಯ ರಚನೆಯ ಓಘ ತೀವ್ರಗೊಂಡಿತು. ಪ್ರಾದೇಶಿಕ ವಸ್ತುವನ್ನಾಧರಿಸಿ ಬರೆದ ಇವರ ಮೊದಲ ಕಾದಂಬರಿ ‘ಹಾಲು ಜೇನು’, ಇದರ ಮುಂದುವರಿದ ಭಾಗವೇ ‘ಸುಳಿಗಾಳಿ’. ಮೂರನೆಯ ಕಾದಂಬರಿ ‘ಜೊಹರ’ ಅನ್ಯಮತೀಯ ಎರಡು ಕುಟುಂಬಗಳ ನಡುವಿನ ಅನನ್ಯತೆ, ಪ್ರೇಮ ಪ್ರೀತಿಯ ಹೊಂದಾಣಿಕೆಗಳಿಗೆ ದೊರೆತ ವಿಜಯವನ್ನು ಇಲ್ಲಿ ಕಾಣಬಹುದು. ‘ಕಡಲ ತೋಳ’ ಇದು ಅಮೆರಿಕನ್ ಲೇಖಕ ಜಾಕ್ ಲಂಡನ್ ನ ‘ದಿ ಸೀ ವುಲ್ಫ್’ ಇಂಗ್ಲೀಷ್ ಕಾದಂಬರಿಯ ಭಾಷಾಂತರ. ಜಯತೀರ್ಥರು ಇಲ್ಲಿ ಕಾದಂಬರಿಯ ಸತ್ವವನ್ನು ಉಳಿಸಿಕೊಂಡು ಕನ್ನಡಕ್ಕೆ ಸಮರ್ಥವಾಗಿ ಅನುವಾದ ಮಾಡಿದ್ದಾರೆ. ‘ಪಾರವ್ವನ ಪಂಚಾಯಿತಿ’, ‘ರೋಹಿಣಿ’, ‘ಮೌಲ್ಯಗಳು’, ‘ಶಿಥಿಲ ಕಲೆ’ ಇವು ರಾಜ ಪುರೋಹಿತರ ಸಣ್ಣ ಕಥೆಗಳು. ‘ತುಂಗೆಯ ಅಂಗಳದಲ್ಲಿ’, ‘ಕುಮಾರವ್ಯಾಸ’, ‘ಜಯಬಂಗ್ಲಾ’ ಇವು ನಾಟಕಗಳು. ನ್ಯಾಯಾಧಿಕಾರಿಯಾಗಿ ಕನ್ನಡದಲ್ಲಿ ತಾನು ನೀಡಿದ ತೀರ್ಪುಗಳನ್ನೂ ಪುಸ್ತಕ ರೂಪದಲ್ಲಿ ಪ್ರಕಟಪಡಿಸಿದ್ದಾರೆ. ‘ಜಗನ್ನಾಥದಾಸರು’, ‘ಸುರಪುರದ ಶೂರ ನಾಯಕರು’, ‘ಕೃಷ್ಣದೇವರಾಯ’, ‘ಕನ್ನಡದಲ್ಲಿ ತೀರ್ಪುಗಳು’ ಇವರ ಇತರ ಪ್ರಮುಖ ಕೃತಿಗಳು. ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತರುವಲ್ಲಿ ಜಯತೀರ್ಥರು ಮಾಡಿದ ಕೆಲಸ ಮಹತ್ತರವಾದದ್ದು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಪಡಿಸಿದ ‘ಕನ್ನಡ ಕೈಪಿಡಿ’ ಕನ್ನಡದ ಮೇಲಿನ ಇವರ ಅಭಿಮಾನಕ್ಕೆ ಮತ್ತು ಪಟ್ಟ ಶ್ರಮಕ್ಕೆ ದೊರೆತ ಫಲ ಮಾತ್ರವಲ್ಲ ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿಯಾಗಿ, ಸರಕಾರದ ಕನ್ನಡ ಅಭಿವೃದ್ಧಿ ಇಲಾಖೆಯ ಮುಖ್ಯಸ್ಥರಾಗಿ, ಶ್ರದ್ದೆ-ನಿಷ್ಠೆಯಿಂದ ಮಾಡಿದ ಕೆಲಸಗಳಿಗೆ ಹಿಡಿದ ಕೈಗನ್ನಡಿ. ಹಂತ ಹಂತವಾಗಿ ಮೇಲೇರುತ್ತಾ ಅಂತಿಮವಾಗಿ ಐ.ಎ.ಎಸ್. ಶ್ರೇಣಿಗೆ ಏರಿದ್ದು ಇವರ ಕಾರ್ಯದಕ್ಷತೆ ಮತ್ತು ಪ್ರಾಮಾಣಿಕತೆಗಳಿಗೆ ಸಾಕ್ಷಿ ಅಧಿಕಾರಿಯಾಗಿದ್ದು ಕೊನೆಯವರೆಗೂ ಸಾಹಿತ್ಯವನ್ನು ಸಂಗಾತಿಯನ್ನಾಗಿ ಮಾಡಿಕೊಂಡ ಧೀಮಂತ ಇವರು 1978ರಲ್ಲಿ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ದೊರೆತದ್ದು ಇವರು ಜೀವನದ ಕೊನೆಯವರೆಗೂ ಮಾಡಿದ ಸಾಹಿತ್ಯ ಸೇವೆಗೆ ಸಂದ ಗೌರವ. ಕನ್ನಡದ ಬಗ್ಗೆ ಅಪಾರ ಅಭಿಮಾನ, ಪ್ರೀತಿ ಇರಿಸಿಕೊಂಡ ಜಯತೀರ್ಥ ರಾಜಪುರೋಹಿತರು 24 ಏಪ್ರಿಲ್ 1986ರಲ್ಲಿ ಇಹವನ್ನು ತ್ಯಜಿಸಿದರು.
ಅವರ ಜನ್ಮದಿನವಾದ ಇಂದು ಅವರನ್ನು ಮತ್ತು ಅವರು ಮಾಡಿದ ಸಾಹಿತ್ಯ ಸೇವೆಯನ್ನು ಸ್ಮರಿಸೋಣ.
– ಅಕ್ಷರೀ
