ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರ್ತಿಯಾಗಿ ಗುರ್ತಿಸಲ್ಪಟ್ಟ ತ್ರಿವೇಣಿಯವರು ಪ್ರಸಿದ್ಧ ಕಾದಂಬರಿಗಾರ್ತಿಯೂ ಹೌದು. ‘ತ್ರಿವೇಣಿ’ ಇವರ ಕಾವ್ಯ ನಾಮವಾದರೆ, ಭಾಗೀರಥಿ ಜನ್ಮನಾಮ. ಶಾಲೆಯಲ್ಲಿ ದಾಖಲಾದ ಹೆಸರು ಅನಸೂಯ. ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದದ್ದು ‘ಅಂಚು‘ ಎಂದು. 1950ರಲ್ಲಿ ಮೈಸೂರಿನ ಶಾರದಾ ವಿಳಾಸ ಮಹಾವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರಾದ ಎನ್. ಶಂಕರ್ ಇವರೊಂದಿಗೆ ವಿವಾಹವಾದ ನಂತರ ಹೆಸರು ಅನಸೂಯ ಶಂಕರ್ ಎಂದಾಯಿತು. ಇವರು ಬರಹಗಾರರ ಹಿನ್ನೆಲೆಯಿಂದ ಬಂದವರು. ‘ಕನ್ನಡದ ಕಣ್ವ‘ ಎಂದೇ ಪ್ರಸಿದ್ಧರಾದ ‘ಬಿ.ಎಮ್.ಶ್ರೀ‘ ಯವರು ಇವರ ದೊಡ್ಡಪ್ಪ. ಹೆಸರಂತ ಕಾದಂಬರಿಗಾರ್ತಿ ‘ಆರ್ಯಾಂಬಾ ಪಟ್ಟಾಭಿ‘ ಇವರ ತಂಗಿ. ಮತ್ತೊಬ್ಬ ಪ್ರಸಿದ್ಧ ಕಾದಂಬರಿಗಾರ್ತಿ ‘ವಾಣಿ‘ ಇವರ ಚಿಕ್ಕಮ್ಮ. ಉತ್ತಮ ಕಥೆಗಾರರಾದ ‘ಅಶ್ವಥ್‘ ಇವರ ಅತ್ತಿಗೆಯ ಗಂಡ. ಇವರೆಲ್ಲರೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು.
ಪ್ರಸಿದ್ಧ ವಕೀಲರಾದ ಬಿ.ಎಂ. ಕೃಷ್ಣಸ್ವಾಮಿ ಮತ್ತು ತಂಗಮ್ಮ ದಂಪತಿಗಳ ಸುಪುತ್ರಿಯಾದ ತ್ರಿವೇಣಿಯವರು 1928 ಸೆಪ್ಟೆಂಬರ್ 1ರಂದು ಮಂಡ್ಯದಲ್ಲಿ ಜನಿಸಿದರು. 1947ರಲ್ಲಿ ಮಹಾರಾಣಿ ಕಾಲೇಜಿನಿಂದ ಚಿನ್ನದ ಪದಕದೊಂದಿಗೆ ಮನಶಾಸ್ತ್ರದಲ್ಲಿ ಬಿ.ಎ. ಪದವಿಯನ್ನು ಪಡೆದು ಹಿಂದಿರುಗಿ ತಮ್ಮ ಜನ್ಮಸ್ಥಾನವಾದ ಮಂಡ್ಯಕ್ಕೆ ಬಂದು ಅಲ್ಲಿಯ ಒಂದು ಪ್ರೌಢಶಾಲೆಯಲ್ಲಿ ಅಧ್ಯಾಪಕಿಯಾಗಿ ವೃತ್ತಿ ಜೀವನಕ್ಕೆ ಪ್ರವೇಶಿಸಿದರು. ಇವರು ‘ತ್ರಿವೇಣಿ‘ ಎಂಬ ಕಾವ್ಯನಾಮದಲ್ಲಿ ತಮ್ಮ ಮೊದಲ ಕಥೆಯನ್ನು ಪತ್ರಿಕೆಗೆ ಕಳುಹಿಸಿದಾಗ ಸಂಪಾದಕರಿಗೆ ಇವರ ನಿಜ ಹೆಸರು ತಿಳಿದಿದ್ದರೂ ‘ತ್ರಿವೇಣಿ‘ ಹೆಸರೇ ಚೆನ್ನಾಗಿದೆ ಎಂದು ಅದನ್ನೇ ಮುಂದುವರಿಸಲು ಹೇಳಿದರು ಮತ್ತು ‘ತ್ರಿವೇಣಿ‘ ಎಂಬ ಅದೇ ಕಾವ್ಯನಾಮದಲ್ಲಿ ಮುಂದೆ ಇವರು ಪ್ರಸಿದ್ದರಾದರು.
ಆರಂಭದಲ್ಲಿ ತ್ರಿವೇಣಿಯವರು ಬರೆದ ತಮ್ಮ ಕಥೆಗಳನ್ನು ಪತ್ರಿಕೆಗೆ ಕೊಡದೆ ಹಾಗೆ ಇಡುತ್ತಿದ್ದರು. ಅದನ್ನು ನೋಡಿದ ಅವರ ತಾಯಿ ಕಥೆಗಳನ್ನು ಓದಿ ಪತ್ರಿಕೆಗೆ ಕೊಡಲು ಒತ್ತಾಯಿಸಿದಾಗ ಆ ಕಥೆಗಳು ಪ್ರಕಟಗೊಂಡವು ಮತ್ತು ಸಂಪಾದಕರ ಪ್ರೋತ್ಸಾಹವು ಇವರಿಗೆ ದೊರೆಯಿತು. ಮುಂದೆ ಇವರ ಬರವಣಿಗೆಗೆ ಪತಿಯೂ ಪ್ರೋತ್ಸಾಹ ನೀಡಿದರು. ಹೀಗಾಗಿ ಸಾಹಿತ್ಯದಲ್ಲಿ ಆಸಕ್ತಿ ಇದ್ದ ತ್ರಿವೇಣಿಯವರು ತಮ್ಮ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ಬರವಣಿಗೆಯನ್ನೇ ಮುಂದುವರಿಸಿದ್ದರು. ‘ಅಪಸ್ವರ‘ ತ್ರಿವೇಣಿಯವರ ಮೊದಲ ಕಾದಂಬರಿಯಾದರೂ ಮೊದಲು ಪ್ರಕಟವಾದ ಕಾದಂಬರಿ ‘ಹೂವು ಹಣ್ಣು‘. ಈ ಕಾದಂಬರಿಯಲ್ಲಿ ಬಡತನದಲ್ಲಿ ಜೀವನ ನಡೆಸುವ ವಿಧವೆಯಾದ ಅನಾಥ ಮಹಿಳೆಯೊಬ್ಬಳು ತನ್ನ ವಂಶದ ಕುಡಿಯನ್ನು ಪೋಷಿಸಲು ನಡೆಸಿದ ಹೋರಾಟದ ದಾರುಣ ಪರಿಸ್ಥಿತಿಯ ಜೀವನವನ್ನು ಕಾಣಬಹುದು. ಅದೇ ರೀತಿ ಸ್ವಾವಲಂಬಿ ಮತ್ತು ಸ್ವತಂತ್ರಳಾಗಿ ಬಾಳಬೇಕೆಂಬ ಮಹತ್ತರವಾದ ಬಯಕೆನ್ನಿಟ್ಟುಕೊಂಡು ಬಂದ ಹೆಣ್ಣೊಬ್ಬಳು ಪರಾವಲಂಬಿಯಾದಾಗ ಅವಳ ಬಾಳು ಎಷ್ಟು ಅಸಹನೀಯವಾಗಿರುತ್ತದೆ ಎಂಬುದನ್ನು ‘ಅಪಸ್ವರ‘ ಮತ್ತು ‘ಅಪಜಯ‘ ಕಾದಂಬರಿಗಳಲ್ಲಿ ಕಾಣಬಹುದು.
ಆಸ್ತಿಯ ಆಸೆಯಿಂದ ಮದುವೆಯಾಗುವ ಮಾತುಕೊಟ್ಟು, ಆಸ್ತಿಗೆ ವಾರೀಸುದಾರ ಬಂದಾಗ ಕೊಟ್ಟ ಮಾತಿಗೆ ತಪ್ಪಿದ ಸ್ವಾರ್ಥಿ ಯುವಕನಿಂದಾಗಿ ಪ್ರೀತಿ ಮುರಿದು ಬಿದ್ದಾಗ ಆ ಮುಗ್ಧ ಯುವತಿಗೆ ಆದ ನೋವನ್ನು ಮನಮುಟ್ಟುವ ಹಾಗೆ ಚಿತ್ರಿಸಿದ ಕಾದಂಬರಿ ‘ಬೆಳ್ಳಿ ಮೋಡ‘. ಪುರುಷ ಪ್ರಧಾನ ಸಮಾಜದಲ್ಲಿ ಕಪಿಮುಷ್ಟಿಗೆ ಸಿಲುಕಿ ಬಾಳಿನುದ್ದಕ್ಕೂ ಸುಖವನ್ನು ಕಾಣದ ಒಂದು ನಿರ್ಭಾಗ್ಯ ಹೆಣ್ಣಿನ ಚಿತ್ರಣ ‘ಮೊದಲ ಹೆಜ್ಜೆ‘ ಕಾದಂಬರಿಯಲ್ಲಿದ್ದರೆ, ‘ಕೀಲುಗೊಂಬೆ‘ ಕಾದಂಬರಿಯಲ್ಲಿ ಪುರುಷನ ಕಾಮದ ಗೊಂಬೆಯಾಗಿ ಜೀವನಪೂರ್ತಿ ಕಣ್ಣೀರಿನಲ್ಲಿ ಕೈ ತೊಳೆಯುವ ಓರ್ವ ಹೆಣ್ಣಿನ ಅಸಹಾಯಕ ಚಿತ್ರಣವಿದೆ. ಆದ್ದರಿಂದಲೇ ಈ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿವೆ.
ಮನಶಾಸ್ತ್ರದ ಪದವೀಧರೆಯಾದ್ದರಿಂದ ಅವರ ಅನೇಕ ಕೃತಿಗಳು ಮನಶಾಸ್ತ್ರಕ್ಕೆ ಸಂಬಂಧಪಟ್ಟವುಗಳೇ ಆಗಿದ್ದವು. ಅದಕ್ಕೆ ಸಂಬಂಧಪಟ್ಟ ಸನ್ನಿವೇಶಗಳು ಮತ್ತು ಉದಾಹರಣೆಗಳು ಅವರ ಅನೇಕ ಸಣ್ಣ ಕಥೆಗಳಲ್ಲಿಯೂ ಕಂಡುಬರುತ್ತಿದ್ದವು. ‘ಹಣ್ಣೆಲೆ ಚಿಗುರಿದಾಗ‘, ‘ಬೆಳ್ಳಿ ಮೋಡ‘, ‘ಶರಪಂಜರ‘, ‘ಮುಕ್ತಿ‘, ‘ಹೂ ಹಣ್ಣು‘, ‘ಕಾಶಿಯಾತ್ರೆ‘, ‘ದೂರದ ಬೆಟ್ಟ‘, ‘ಬೆಕ್ಕಿನ ಕಣ್ಣು‘, ‘ಬಾನು ಬೆಳಗಿತು‘, ‘ಸೋತು ಗೆದ್ದವಳು‘, ‘ಮೊದಲ ಹೆಜ್ಜೆ‘ ಇತ್ಯಾದಿ ಇವರ ಪ್ರಸಿದ್ಧ ಕಾದಂಬರಿಗಳು. ‘ಸಮಸ್ಯೆಯ ಮಗು‘, ‘ಎರಡು ಮನಸ್ಸು‘, ‘ಹೆಂಡತಿಯ ಹೆಸರು‘, ‘ಚಂಪಿ‘, ‘ಅತಿಥಿ ಬರಲಿಲ್ಲ‘, ‘ಸಲಹೆ‘ ಇವು ಕಥಾಸಂಕಲನಗಳು. ಇವರ ಕೃತಿಗಳಲ್ಲಿ ‘ಅಪಸ್ವರ‘ ಮತ್ತು ‘ಅಪಜಯ‘ ಕಾದಂಬರಿಗಳನ್ನು ಮತ್ತು ‘ತ್ರಿವೇಣಿ ಸಪ್ತಕ್‘ ಎಂಬ ಹೆಸರಿನಲ್ಲಿ ಬರೆದ ಏಳು ಸಣ್ಣ ಕಥೆಗಳನ್ನು ಎಸ್.ಎಂ. ರಾಮಸ್ವಾಮಿ ಅವರು ಹಿಂದಿ ಭಾಷೆಗೆ, ‘ಶರಪಂಜರ‘ ಕೃತಿಯನ್ನು ಮೀರಾ ನರ್ವೆಕರ್ ‘The Mad Woman’ ಎಂಬ ಹೆಸರಿನಲ್ಲಿ ಇಂಗ್ಲೀಷ್ ಭಾಷೆಗೆ ಮತ್ತು ಸಾಹಿತಿ ಶರ್ವಾಣಿಯವರು ‘ಬೆಕ್ಕಿನ ಕಣ್ಣು‘ ಕಾದಂಬರಿಯನ್ನು ತೆಲುಗು ಭಾಷೆಗೆ ಅನುವಾದ ಮಾಡಿದ್ದಾರೆ.
ಅವರ ‘ಅವಳ ಮನೆ‘ ಕಾದಂಬರಿಗೆ ‘ಕರ್ನಾಟಕ ರಾಜ್ಯ ಪ್ರಶಸ್ತಿ‘ ಮತ್ತು ಸಣ್ಣ ಕಥೆಗಳ ಸಂಕಲನವಾದ ‘ಸಮಸ್ಯೆಯ ಮಗು‘ ಪುಸ್ತಕಕ್ಕೆ ‘ದೇವರಾಜ್ ಪ್ರಶಸ್ತಿ‘ಗಳು ದೊರೆತಿವೆ. ಸಾಮಾನ್ಯವಾಗಿ ಕೌಟುಂಬಿಕ ಜೀವನ ಮತ್ತು ಜೀವನದಲ್ಲಿ ಹೆಣ್ಣಿಗಿರಬೇಕಾದ ಸುಖ, ಸಂಪತ್ತು, ಭೋಗ, ಭಾಗ್ಯಗಳೇ ತ್ರಿವೇಣಿಯವರ ಕಾದಂಬರಿಗಳ ವಸ್ತುಗಳಾಗಿದ್ದವು. ಅವರ ಜೀವನದಲ್ಲಿ ಪ್ರೀತಿಸುವ ಪತಿ, ಬಂಧುಗಳು, ಸ್ನೇಹಿತರ ಬಳಗ, ತಮ್ಮದೇ ಆದ ಮನೆ, ಕಾದಂಬರಿಗಾರ್ತಿ ಎನ್ನುವ ಜನಪ್ರಿಯತೆ, ಓದುಗರ ವರ್ಗ ಇಷ್ಟೆಲ್ಲ ಇದ್ದರೂ ಅವರನ್ನು ಕಾಡುತ್ತಿದ್ದದ್ದು ತಾನು ತಾಯಿಯಾಗಲಿಲ್ಲ ಎಂಬ ಕೊರಗು. ದೈಹಿಕವಾಗಿ ದುರ್ಬಲರಾಗಿದ್ದ ಕಾರಣ ಮೂರು ಬಾರಿ ಗರ್ಭವತಿಯಾದರೂ ನಿರೀಕ್ಷಿಸುತ್ತಿದ್ದ ಅತಿಥಿ ಮನೆಗೆ ಬಾರದೆ ಹೋದಾಗ ಅವರಿಗೆ ಅತಿಯಾದ ನಿರಾಶೆ ಉಂಟಾಗಿತ್ತು. ಈ ನಿರಾಶೆ, ಕಾತರ, ನೋವು ದುಃಖದ ಸಂಗತಿ ಇವೆಲ್ಲವನ್ನೂ ಅವರ ‘ಅತಿಥಿ ಬರಲಿಲ್ಲ’ ಎಂಬ ಸಣ್ಣ ಕಥೆಯಲ್ಲಿ ಮನಮುಟ್ಟುವ ಹಾಗೆ ಬರಹ ರೂಪಕ್ಕೆ ಇಳಿಸಿದ್ದಾರೆ.
ತಾಯಿಯಾಗಲೇ ಬೇಕೆಂಬ ಹಠದಿಂದ ವಿಧಿಗೆ ಸವಾಲಾಗಿ ನಿಂತು ನಾಲ್ಕನೆಯ ಬಾರಿಗೆ ಗರ್ಭವತಿಯಾದ ತ್ರಿವೇಣಿಯವರು ಕೊನೆಗೂ ಬಂದ ಅತಿಥಿ ಹೆಣ್ಣು ಮಗುವನ್ನು ಸ್ವಾಗತಿಸಿದ ಹನ್ನೊಂದು ದಿನಗಳಲ್ಲಿ ಸಾಂಸಾರಿಕ ಜೀವನಕ್ಕೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ವಿದಾಯ ಹೇಳಿದರು. ತ್ರಿವೇಣಿಯವರಿಂದ ಇನ್ನೂ ಮಹತ್ವದ ಕೃತಿಗಳು ಬರುತ್ತವೆ ಎಂಬ ನಿರೀಕ್ಷೆಯಲ್ಲಿ ವಾಚಕರು ಇರುವಾಗಲೇ, ಇನ್ನೂ ಬಾಳಿ ಬದುಕಬೇಕಾದ ಇವರು ತಮ್ಮ 35ನೇ ವಯಸ್ಸಿನಲ್ಲಿಯೇ 29 ಜುಲೈ 1963ರಂದು ಇಹದಿಂದ ದೂರವಾದರು. ಆಧುನಿಕ ಕನ್ನಡ ಸಾಹಿತ್ಯ ತ್ರಿವೇಣಿಯವರನ್ನು ಒಬ್ಬ ‘ಪ್ರತಿಭಾವಂತ ಲೇಖಕಿ‘, ‘ಜನಪ್ರಿಯ ಲೇಖಕಿ‘ ಎಂದು ಗುರುತಿಸಿ ಅವರಿಗೆ ಗೌರವದ ಸ್ಥಾನ ನೀಡಿದೆ. ಕನ್ನಡ ಸಾಹಿತ್ಯದ ಒಂದು ಆಯಾಮವಾದ ಕಾದಂಬರಿ ಸಾಹಿತ್ಯದ ಮೂಲಕ ಕೃತಿಗಳ ರಚನೆ ಮಾಡಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಖ್ಯಾತಿ ತ್ರಿವೇಣಿಯವರಿಗೆ ಸಲ್ಲುತ್ತದೆ.
ಈ ಮಹಾನ್ ಲೇಖಕಿಗೆ ಅವರ ಜನ್ಮದಿನವಾದ ಇಂದು ಅವರ ಸಾಹಿತ್ಯ ಸೇವೆಯನ್ನು ಸ್ಮರಿಸುತ್ತಾ ಗೌರವಪೂರ್ವಕ ನಮನಗಳನ್ನು ಸಲ್ಲಿಸೋಣ.
– ಅಕ್ಷರೀ
