ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇವರ ಸಹಯೋಗದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಸ್ಮರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಹಾಗೂ ಗೋವಿಂದ ಪೈಗಳ ಕಾವ್ಯ ಪ್ರಸ್ತುತಿ ಕಾರ್ಯಕ್ರಮವನ್ನು ದಿನಾಂಕ 23 ಮಾರ್ಚ್ 2026ರಂದು ಸಾಯಂಕಾಲ 4-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಕೆ. ಸದಾಶಿವ ರಾವ್ ಇವರ ಅಧ್ಯಕ್ಷತೆ ವಹಿಸಲಿದ್ದು, ಮೂಡಬಿದ್ರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಬಿ.ಪಿ. ಸಂಪತ್‌ಕುಮಾರ್ ಅವರು ‘ಗೋವಿಂದ ಪೈ ವ್ಯಕ್ತಿ-ಶಕ್ತಿ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಗೋವಿಂದ ಪೈಗಳ ಆಯ್ದ ಕವಿತೆಗಳ ಕಾವ್ಯ ಪ್ರಸ್ತುತಿಯನ್ನು ಕುಮಾರಿ ಶ್ರಾವ್ಯ ಬಾಸ್ರಿ ನಡೆಸಿಕೊಡಲಿದ್ದಾರೆ.

