ಕೂಡ್ಲಿಗಿ : ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ವಿಜಯನಗರ ಜಿಲ್ಲೆ, ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯ ಕೂಡ್ಲಿಗಿ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 16 ಮಾರ್ಚ್ 2026ರಂದು ಕೂಡ್ಲಿಗಿ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರಿನ ಸದಸ್ಯ ಸಂಚಾಲಕರಾದ ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ಇವರು ಮಾತನಾಡಿ “ಮನುಷ್ಯ ಸಂಬಂಧಗಳನ್ನು ಬೆಸೆಯುವ ಮೂಲಕ ಸಾಮಾಜಿಕ ಸಾಮರಸ್ಯವನ್ನುಂಟು ಮಾಡುವ ಸಾಹಿತ್ಯ ಇಂದಿನ ತುರ್ತು. ಲಂಕೇಶರು ಸ್ವಸ್ಥ ಸಮಾಜದ ಕನಸು ಕಂಡಿದ್ದರು. ಜಾತಿಗಿಂತ ಪ್ರೀತಿ ಮುಖ್ಯ ಎಂಬುದನ್ನು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ” ಎಂದು ನುಡಿದರು.
ಈ ದಿನದ ವಿಶೇಷ ಉಪನ್ಯಾಸದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿಯ ಸಹಾಯಕ ಸಂಶೋಧನಾ ಅಧಿಕಾರಿಯಾದ ಡಾ. ನಾಯಕರ ಹುಲುಗಪ್ಪ ಇವರು ‘ಪಿ ಲಂಕೇಶರ ಬರಹಗಳಲ್ಲಿ ವೈಚಾರಿಕ ನೆಲೆಗಳು’ ಕುರಿತು ಮಾತನಾಡುತ್ತಾ, “ಲಂಕೇಶರ ಬರಹವು ತೀಕ್ಷ್ಣವಾದದ್ದು. ಅನ್ಯಾಯದ ವಿರುದ್ಧವಾದದ್ದು ಮತ್ತು ಬಡ ಬಡವರ ಪರವಾದದ್ದು” ಎಂದು ತಿಳಿಸಿದರು.
ಮತ್ತೊಂದು ಉಪನ್ಯಾಸದ ವಿಷಯವಾದ ‘ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳು’ ಕುರಿತು ಶಿಕ್ಷಕರಾದ ಶಿವಾನಂದ ಬಿ.ಬಿ. ಇವರು ಮಾತನಾಡಿದರು. “12ನೇ ಶತಮಾನದ ವಚನ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳ ಮೊದಲ ಕುರುಹುಗಳು ಕಂಡುಬರುತ್ತವೆ. ಸಂಚಿಯ ಹೊನ್ನಮ್ಮ ತನ್ನ ಹದಿಬದೆಯ ಧರ್ಮ ಕೃತಿಯಲ್ಲಿ ಮಹಿಳಾ ಪರವಾದ ಗಟ್ಟಿ ನಿಲುವನ್ನು ದಾಖಲಿಸಿದ್ದಾರೆ. ಮಹಿಳೆಯರ ಶೋಷಣೆ, ದಬ್ಬಾಳಿಕೆಯ ವಿರುದ್ಧ ನಿರ್ಭೀತಿಯಿಂದ ಹೇಳುವ ಸಾಹಿತ್ಯದ ತುರ್ತು ಇದೆ” ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ವಿಜಯಕುಮಾರ ಹೆಚ್.ಎಂ. ಇವರು ಮಾತನಾಡುತ್ತಾ “ಸದರಿ ಕಾರ್ಯಕ್ರಮದ ಮೂಲಕ ಲಂಕೇಶರ ಬರವಣಿಗೆಯ ಕುರಿತು ತಿಳಿಯಲು ಅವಕಾಶವಾಯಿತು” ಎಂದು ಹರ್ಷ ವ್ಯಕ್ತಪಡಿಸಿದರು. ಸಂಚಾಲಕರಾದ ಶ್ರೀ ವೆಂಕಟೇಶ ಬಡಿಗೇರರು ಸ್ವಾಗತಿಸಿ, ಶಿಕ್ಷಕರಾದ ಶೇಖರಯ್ಯ ಟಿ.ಎಚ್.ಎಂ. ಇವರು ವಂದಿಸಿ, ಪ್ರಶಿಕ್ಷಣಾರ್ಥಿ ಅಭಿಲಾಶ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಗೀತಾ ಮತ್ತು ಸದರಿ ಮಹಾವಿದ್ಯಾಲಯದ ಉಪನ್ಯಾಸಕರು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
